ಲಕ್ನೊ, ಅ.18: ಇಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಯುವಕನೋರ್ವ ಅಣ್ಣಾ ಹಝಾರೆ ಬಳಗದ ಸದಸ್ಯ ಅರವಿಂದ ಕೇಜ್ರಿವಾಲರ ಮೇಲೆ ಪಾದರಕ್ಷೆ ಎಸೆದ ಘಟನೆ ಇಂದು ನಡೆದಿದೆ. ಶೂ ಎಸೆದಾತನನ್ನು ಉತ್ತರ ಪ್ರದೇಶದ ಜಲೋನ್‌ನ ಜಿತೇದ್ರ ಪಾಠಕ್ ಎಂದು ಗುರುತಿಸಲಾಗಿದೆ. ಆತ ಕೆಲವು ದಿನಗಳಿಂದ ಕೇಜ್ರಿವಾಲರ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದನೆನ್ನಲಾಗಿದೆ. ತನಗೆ ಬೆದರಿಕೆಯಿದೆ ಹಾಗೂ ತನ್ನ ಕಚೇರಿಯ ಮೇಲೆ ದಾಳಿ ನಡೆಯಬಹುದೆಂಬ ಮಾಹಿತಿ ತನಗೆ ಬಂದಿದೆಯೆಂದು ಕೇಜ್ರಿವಾಲರು ಪ್ರತಿಪಾದಿಸಿದ್ದರು. ಟಿವಿ ವಾಹಿನಿಯೊಂದರ ಉನ್ನತ ಪತ್ರಕರ್ತ ಸಹಿತ ಹಲವು ಮಂದಿ ಮಾಧ್ಯಮ ಮಿತ್ರರು ತನಗಿದನ್ನು ತಿಳಿಸಿದ್ದಾರೆಂದು ಅವರು ಹೇಳಿದ್ದರು.
ಆದಾಗ್ಯೂ, ನೇರವಾಗಿ ತನಗೆ ಯಾವುದೇ ಬೆದರಿಕೆಯ ಕರೆ ಬಂದಿಲ್ಲವೆಂದು ಕೇಜ್ರಿವಾಲ್ ತಿಳಿಸಿದ್ದರು. ಭ್ರಷ್ಟಾಚಾರದ ವಿಷಯದಲ್ಲಿ ಕೇಜ್ರಿವಾಲ್ ದೇಶದ ದಾರಿತಪ್ಪಿಸುತ್ತಿದ್ದಾರೆಂದು ಆರೋಪಿಸಿ ಪಾಠಕ್, ಅವರತ್ತ ಪಾದರಕ್ಷೆ ಎಸೆದಿದ್ದು, ಕಾರ್ಯಕರ್ತರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ತಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲವೆಂದು ಆತ ಸ್ಪಷ್ಟಪಡಿಸಿದ್ದಾನೆ.
ಅಣ್ಣಾ ಬಳಗದ ಸದಸ್ಯರ ಮೇಲಿನ ಎರಡನೆಯ ಹಲ್ಲೆ ಪ್ರಕರಣ ಇದಾಗಿದೆ. ಕಳೆದ ವಾರ ಪ್ರಶಾಂತ್ ಭೂಷಣ್‌ರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ್ದರು. ಅಣ್ಣಾ ಬಳಗದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಸಂಕಷ್ಟ ಅನುಭವಿಸಿದವರ ಚಿತಾವಣೆಯಿಂದ ಈ ಕೃತ್ಯ ನಡೆದಿದೆಯೆಂದು ಕಾರ್ಯಕರ್ತೆ ಕಿರಣ್ ಬೇಡಿ ಆರೋಪಿಸಿದ್ದಾರೆ
0 comments:
Post a Comment