PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು: ನ್ಯಾಯಾಂಗ ಬಂಧನದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಹೈಕೋರ್ಟ್‌ನಲ್ಲಿ ನಡೆಯಲಿದೆ.

ಭೂಹಗರಣಕ್ಕೆ ಸಂಬಂಧಿಸಿದಂತೆ ಮೊದಲ ಇಬ್ಬರು ಆರೋಪಿಗಳಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ 10 ದಿನಗಳಿಂದ ಅವರು ನಗರದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ಈ ಆರೋಪಿಗಳ ಪರ ವಕೀಲರ ವಾದ ಮುಗಿದಿದ್ದು, ದೂರುದಾರ ಸಿರಾಜಿನ್ ಬಾಷಾ ಅವರ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು ವಾದ ಮುಂದುವರಿಸಲಿದ್ದಾರೆ.

ಅದೇ ರೀತಿ, ಕಟ್ಟಾ ಹಾಗೂ ಕೃಷ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಆರಂಭಗೊಳ್ಳಲಿದೆ. ಕೆಐಎಡಿಬಿ ಭೂಹಗರಣದ ವಿವಾದದ ಸುಳಿಯಲ್ಲಿ ಸಿಕ್ಕಿರುವ ಕಟ್ಟಾ ಅವರಿಗೆ ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಲು ಲೋಕಾಯುಕ್ತ ಕೋರ್ಟ್ ನಿರಾಕರಿಸಿದೆ. ಆಯೋಗ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಷ್ಣ ಅವರಿಗೆ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿದೆ.

ಈ ಮಧ್ಯೆ, ಕಟ್ಟಾ ಕ್ಯಾನ್ಸರ್ ಸಂಬಂಧ ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಸಂಜೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ತೆರಳಿದ್ದಾರೆ. ಅವರ ಜೊತೆ ಅವರ ಆಪ್ತ ಸಹಾಯಕ ಹಾಗೂ ನಾಲ್ವರು ಪೊಲೀಸರು ತೆರಳಿರುವುದಾಗಿ ಮೂಲಗಳು ತಿಳಿಸಿವೆ.

ಭಾರತದಲ್ಲಿನ ಯಾವುದೇ ಆಸ್ಪತ್ರೆಯಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಚಿಕಿತ್ಸೆ ಪಡೆಯಲು ವಿಶೇಷ ಕೋರ್ಟ್ ಅನುಮತಿ ನೀಡಿದೆ.

-ಬಿ‌ಎಸ್‌ವೈ ಎಲ್ಲಿಗೆ?

ಬೆಂಗಳೂರು: ಭೂಹಗರಣ ಆರೋಪದಲ್ಲಿ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಅವರ ಪಾಲಿಗೆ ಸೋಮವಾರ ನಿರ್ಣಾಯಕ ದಿನ.

ಭೂಹಗರಣದಲ್ಲಿ ಜಾಮೀನು ನಿರಾಕರಿಸಿ ತಮ್ಮನ್ನು ಜೈಲಿಗೆ ಕಳುಹಿಸಿರುವ ವಿಶೇಷ ನ್ಯಾಯಾಲ ಯದ ಆದೇಶ ಪ್ರಶ್ನಿಸಿ ಮತ್ತು ಜಾಮೀನು ಕೋರಿ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಸಲ್ಲಿಸಿ ರುವ ಅರ್ಜಿ ಹೈಕೋರ್ಟ್‌ನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅವರ ಪರ ವಕೀಲರು ಹೈಕೋರ್ಟ್‌ನಲ್ಲಿ ತಮ್ಮ ವಾದ ಪೂರ್ಣಗೊಳಿಸಿದ್ದಾರೆ. ಸೋಮವಾರ ವಿಶೇಷ ನ್ಯಾಯಾಲಯದಲ್ಲಿ ದೂರುದಾರರಾಗಿರುವ ಸಿರಾಜಿನ್ ಬಾಷ ಪರ ವಕೀಲರು ವಾದ ಮಂಡಿಸಲಿದ್ದು, ವಾದ ಪೂರ್ಣಗೊಂಡರೆ ಸೋಮವಾರವೇ ಕೋರ್ಟ್ ಮಧ್ಯಂತರ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಹೀಗಾಗಿ ಸೋಮವಾರದ ದಿನ ಹೈಕೋರ್ಟ್ ಯಾವ ಆದೇಶ ನೀಡಬಹುದು ಎಂಬುದನ್ನು ಈ ಇಬ್ಬರೂ ನಾಯಕರು ಜೈಲಿನಲ್ಲಿದ್ದುಕೊಂಡೇ ಎದುರು ನೋಡುತ್ತಿದ್ದಾರೆ.

ಯಡಿಯೂರಪ್ಪ ಮತ್ತು ಕೃಷ್ಣಯ್ಯಶೆಟ್ಟಿ ಅವರ ಬಂಧನದ ಆದೇಶವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ನ.೩ರವರೆಗೆ ವಿಸ್ತ್ತರಿಸಿದೆ. ಹೀಗಾಗಿ ಸೋಮವಾರ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದರೆ ಅಥವಾ ನಿರಾಕರಿಸಿದರೆ ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಜೈಲಿನಲ್ಲೇ ದೀಪಾವಳಿ ಆಚರಿಸಬೇಕಾಗುವಂಥ ಪರಿಸ್ಥಿತಿ ತಲೆದೋರಲಿದೆ.

ಅನಾರೋಗ್ಯದ ನೆಪ: ಯಡಿಯೂರಪ್ಪ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಅನಾ ರೋಗ್ಯದ ನೆಪವನ್ನು ಮುಂದಿಟ್ಟಿದ್ದಾರೆ. ಅನಾರೋಗ್ಯಕ್ಕೆ ತುರ್ತು ಚಿಕಿತ್ಸೆ ಅಗತ್ಯವಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದಾರೆ.

ಹೈಕೋರ್ಟ್ ಜಾಮೀನು ನಿರಾಕರಿಸಿದರೆ ಯಡಿಯೂರಪ್ಪ ಅವರೂ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತದೆ. ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡುವವರೆಗೆ ಜೈಲಿನಲ್ಲೇ ಇರಬೇಕಾಗುತ್ತದೆ.

ವಿಶೇಷ ನ್ಯಾಯಾಲಯದಲ್ಲಿ ನಿರಾಣಿ ಪ್ರಕರಣ: ಈ ಮಧ್ಯೆ ಭೂ ಹಗರಣಕ್ಕೆ ಸಂಬಂಧಿಸಿ ದಂತೆ ಎ.ಅಲಂ ಪಾಶಾ ಎಂಬುವರು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಸಲ್ಲಿಸಿರುವ ಖಾಸಗಿ ದೂರು ಸೋಮವಾರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರ ರಾವ್ ಅವರ ಮುಂದೆ ವಿಚಾರಣೆಗೆ ಬರಲಿದೆ.

ಬೆಂಗಳೂರಿನ ಕೈಗಾರಿಕೋದ್ಯಮಿ ಪಾಶಾ ಕಳೆದ ಗುರುವಾರ ನಿರಾಣಿ ಸೇರಿದಂತೆ ೧೦ ಮಂದಿ ಯ ವಿರುದ್ಧ ದೂರು ನೀಡಿದ್ದರು. ಶನಿವಾರ ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದರು.

ದೇವನಹಳ್ಳಿ ತಾಲೂಕು ಹೂವಿನಾಯಕನಹಳ್ಳಿಯಲ್ಲಿ ಕೆ‌ಐ‌ಎಡಿಬಿ ಮೂಲಕ ಕೈಗಾರಿಕಾ ಉದ್ದೇಶ ಕ್ಕಾಗಿ ವಶಪಡಿಸಿಕೊಂಡ ಸರ್ವೆ ನಂ.೧೨೪, ೧೨೫, ೧೨೬ರಲ್ಲಿನ ೨೦ ಎಕರೆ ಹಾಗೂ ನೆಲ ಮಂಗಲ ತಾಲೂಕು ದಾಬಸ್‌ಪೇಟೆಯಲ್ಲಿ ೭ ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂಬುದು ಸಚಿವ ಮುರುಗೇಶ್ ನಿರಾಣಿ ಅವರ ಮೇಲಿರುವ ಆರೋಪ. ಈ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಬೇಕೇ ಎಂಬ ಬಗ್ಗೆ ನ್ಯಾಯಾಧೀಶರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Advertisement

0 comments:

Post a Comment

 
Top