PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ ಅ. ): ಸಾವಯವ ಕೃಷಿಕರ ಮನೆಯಂಗಳದಲ್ಲಿ ರೈತರೊಂದಿಗಿನ ಸಂವಾದ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಒಮ್ಮೆ ಏರ್ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಘೋಷಿಸಿದರು.
  ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಾವಯವ ಕೃಷಿಕರ ಮನೆಯಂಗಳದಲ್ಲಿ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಪ್ರತಿ ಬಾರಿಯೂ ಸಾವಯವ ಕೃಷಿಕರ ಮನೆಯಂಗಳಕ್ಕೆ ಮುಖ್ಯಮಂತ್ರಿಗಳು ತೆರಳಿ, ಅಲ್ಲಿ ರೈತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಏರ್ಪಡಿಸಲಾಗುತ್ತಿದೆ.  ಆದರೆ ರೈತರನ್ನೂ ಒಮ್ಮೆ ವಿಧಾನಸೌಧಕ್ಕೆ ಕರೆಯಿಸಿ, ಸಂವಾದ ಕಾರ್ಯಕ್ರಮ ನಡೆಸುವಂತೆ ಕೃಷಿಕರೊಬ್ಬರು ಸಂವಾದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರನ್ನು ವಿಧಾನಸೌಧಕ್ಕೆ ಆಹ್ವಾನಿಸಿ, ಸಾವಯವ ಕೃಷಿ ಅಳವಡಿಕೆ ಕುರಿತು ಶೀಘ್ರದಲ್ಲೆ ಸಂವಾದ ಏರ್ಪಡಿಸಲಾಗುವುದು.  ಈ ಮೂಲಕ ವಿಧಾನಸೌಧ ಎಂದೆಂದಿಗೂ ರೈತಪರ ಸೌಧ ಎಂಬುದನ್ನು ಸಾಬೀತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಘೋಷಿಸಿದರು.
ರೈತರ ಆತ್ಮಹತ್ಯೆ ಕಳವಳಕಾರಿ : ಇಡೀ ದೇಶ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಿಲ್ಲ.  ರೈತರ ಆತ್ಮಹತ್ಯೆಯ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.  ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ, ಛಲದಿಂದ ಪ್ರಗತಿ ಹೊಂದುವ ಕಾಲಕ್ಕಾಗಿ ಕಾಯಬೇಕು.  ರೈತರ ಪರವಾಗಿರುವ ಸರ್ಕಾರ ಅವರ ಅನುಕೂಲಕ್ಕಾಗಿ ಇಡೀ ದೇಶದಲ್ಲಿ ಕೇವಲ ಶೇ. ೧ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ರಾಜ್ಯವೆಂದರೆ ಅದು ಕರ್ನಾಟಕ ರಾಜ್ಯ ಮಾತ್ರ, ರೈತರಲ್ಲಿ ಮಾನಸಿಕ ಆತ್ಮಸ್ಥೈರ್ಯ ತುಂಬುವಂತ ಕೆಲಸವಾಗಬೇಕು. ಎಲ್ಲ ರೈತರು ತಾವು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗುವುದಿಲ್ಲ ಎಂಬುದಾಗಿ ಶಪಥ ಮಾಡಬೇಕು.  ರೈತರ ಎಲ್ಲ ಕಷ್ಟಗಳಿಗೆ ಸ್ಪಂದಿಸಲು ನಮ್ಮ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ.  ರೈತ ಸ್ವಾಭಿಮಾನಿ ಜೀವನವನ್ನು ನಡೆಸುವಂತೆ ಮಾಡಲು ಸಕಲ ರೀತಿಯಲ್ಲಿ ಯತ್ನಿಸಲಾಗುವುದು.  ಸಾವಯವ ಕೃಷಿ ಬೆಳೆಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮತ್ರಿ ಡಿ.ವಿ. ಸದಾನಂದಗೌಡ ಅವರು ರೈತರಿಗೆ ಅಭಯ ನೀಡಿದರು.
ಕುಡಿಯುವ ನೀರಿಗೆ ೩೬ ಕೋಟಿ : ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ಬರ ಪರಿಸ್ಥಿತಿಯಿಂದ ಪ್ರಮುಖವಾಗಿ ಕಾಣಿಸಿಕೊಳ್ಳುವ ಕುಡಿಯುವ ನೀರು ಸಮಸ್ಯೆಯನ್ನು ನಿವಾರಿಸಲು ತಕ್ಷಣವೇ ೩೬ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಅವರು ಹೇಳಿದರು.  ರಾಜ್ಯದಲ್ಲಿ ಕಂಡು ಬಂದಿರುವ ಬರ ಪರಿಸ್ಥಿತಿಯ ಪರಿಣಾಮ ಮೊದಲು ಕುಡಿಯುವ ನೀರಿನ ಮೇಲೆ ಬೀರಲಿದ್ದು, ಇದನ್ನು ನಿವಾರಿಸಲು, ಅಗತ್ಯವಿರುವ ಕಡೆ ಹೊಸದಾಗಿ ಕೊಳವೆ ಬಾವಿ ಕೊರೆದು, ತುರ್ತಾಗಿ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ೩೬ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಕೊಪ್ಪಳ ಜಿಲ್ಲೆಗೆ ೦೧ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ನೀರಿನ ಲಭ್ಯತೆಯನ್ನು ಪರಿಶೀಲಿಸಿ, ಕೂಡಲೆ ಬೋರ್‌ವೆಲ್ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಲು ಕ್ರಮ ಜರುಗಿಸಬೇಕು.  ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಈಗಾಗಲೆ ಜಾನುವಾರುಗಳಿಗಾಗಿ ಮೇವು ಸಂಗ್ರಹಿಸಲು ಸೂಚನೆ ನೀಡಲಾಗಿದೆ.  ದುಡಿಯುವ ಕೈಗಳಿಗೆ ಕೆಲಸ ನೀಡಲು, ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ವೇಗ ನೀಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಹಿರೇಸಿಂದೋಗಿಯಲ್ಲಿ ಆಸರೆ ಮನೆಗಳ ಹಸ್ತಾಂತರ : ಕಳೆದ ೨೦೦೯ ರಲ್ಲಿ ಉಂಟಾದ ಅತಿವೃಷ್ಠಿಯಿಂದ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ಥರಿಗೆ ಆಸರೆ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳನ್ನು ಇಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಹಸ್ತಾಂತರಿಸಿದರು.  ಕೊಪ್ಪಳ ತಾಲೂಕು ಹಿರೇಸಿಂದೋಗಿಯಲ್ಲಿ ಕಲ್ಯಾಣಿ ಸ್ಟೀಲ್ಸ್ ಅವರು ನಿರ್ಮಿಸಿಕೊಟ್ಟಿರುವ ೩೯೫ ಮನೆಗಳು, ಗಂಗಾವತಿ ತಾಲೂಕಿನ ಕುಂಟೋಜಿಯಲ್ಲಿ ಜಿಂದಾಲ್‌ನವರು ನಿರ್ಮಿಸಿರುವ ೪೭೨ ಹಾಗೂ ನಂದಿಹಳ್ಳಿ ಗ್ರಾಮದ ೭೭ ಮನೆಗಳು ಸೇರಿದಂತೆ ಒಟ್ಟು ೯೪೪ ಆಸರೆ ಮನೆಗಳನ್ನು ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಹಸ್ತಾಂತರಿಸಿದರು.
  ಸಾವಯವ ಕೃಷಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು ೧೪ ರೈತರು ಪಾಲ್ಗೊಂಡು ತಮ್ಮ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಲ್ಲಿ ನಿವೇದಿಸಿಕೊಂಡರು.
  ಡಂಬ್ರಳ್ಳಿ ಗ್ರಾಮದ ಸಾವಯವ ಕೃಷಿಕ ದಂಪತಿ ಆನಂದರಡ್ಡಿ ಹಾಗೂ ಪವಿತ್ರ ರಡ್ಡಿ ಇಮ್ಮಡಿ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಸಮಾರಂಭ ಕುರಿತು ಮಾತನಾಡಿದರು.
  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಸಮಾರಂಭದ ಪ್ರಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.  ಕಾರ್ಯಕ್ರಮದಲ್ಲಿ ಸಂಸದ ಶಿವರಾಮಗೌಡ, ಶಾಸಕರುಗಳಾದ ಸಂಗಣ್ಣ ಕರಡಿ, ಪರಣ್ಣ ಮುನವಳ್ಳಿ, ಶಿವರಾಜ್ ತಂಗಡಗಿ, ಅಮರೇಗೌಡ ಪಾಟೀಲ್ ಬಯ್ಯಾಪುರ, ಹಾಲಪ್ಪ ಆಚಾರ್, ಹೊಸಪೇಟೆ ಶಾಸಕ ಆನಂದ್‌ಸಿಂಗ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ಮುಂತಾದ ಗಣ್ಯರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top