PLEASE LOGIN TO KANNADANET.COM FOR REGULAR NEWS-UPDATES


ಹೊಸದಿಲ್ಲಿ, ಅ.29: ಇಲ್ಲಿನ ಗ್ರೇಟರ್ ನೊಯಿಡಾದ ಬುದ್ಧ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ರವಿವಾರ ನಡೆಯಲಿರುವ ಬಹುನಿರೀಕ್ಷಿತ ಚೊಚ್ಚಲ ಇಂಡಿಯನ್ ಗ್ರಾನ್ ಪ್ರಿ ಫಾರ್ಮುಲಾ ಒನ್ ರೇಸ್‌ಗೆ ಕ್ಷಣಗಣನೆ ಆರಂಭಗೊಂಡಿದೆ.
ಶುಕ್ರವಾರ ಮತ್ತು ಶನಿವಾರ ನಡೆದ ರೇಸ್‌ನ ಫ್ರೀ ಪ್ರಾಕ್ಟೀಸ್  ಮತ್ತು ಅರ್ಹತಾ ಸ್ಪರ್ಧೆ ಪ್ರೇಕ್ಷಕರಿಗೆ ಸಾಕಷ್ಟು ರೋಮಾಂಚನ ಲಭಿಸಿದೆ. ರವಿವಾರ 3 ಗಂಟೆಗೆ ಆರಂಭವಾಗಲಿರುವ ಅಂತಿಮ ರೇಸ್‌ನಲ್ಲಿ ಇನ್ನಷ್ಟು ರೋಮಾಂಚನ ನಿರೀಕ್ಷಿಸಲಾಗಿದೆ. ಅಂತಿಮ ರೇಸ್‌ಗಾಗಿ ಫಾರ್ಮುಲಾ ವನ್ ಸೂಪರ್‌ಸ್ಟಾರ್ ಚಾಲಕರು ಹಾಗೂ ಪ್ರಸಿದ್ಧ ತಂಡಗಳು ತಾಲೀಮು ನಡೆಸಿವೆ. ಸುಮಾರು 90000 ಮಂದಿ ರೇಸ್‌ನ್ನು ವೀಕ್ಷಿಸಲು ಆಗಮಿಸುವ ನಿರೀಕ್ಷೆಯಿದೆ.
ನಾವು ರವಿವಾರದ ರೇಸ್‌ಗಾಗಿ 85,000 ದಿಂದ 88,000 ದಷ್ಟು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ಟಿಕೆಟ್ ದರವು ದುಬಾರಿಯಾಗಿಲ್ಲ. ಎಲ್ಲಾ ಮೂರು ದಿನಗಳ ರೇಸ್‌ಗೆ ಗ್ರಾಂಡ್ ಸ್ಟಾಂಡ್ ಆಸನಗಳ ಟಿಕೆಟ್‌ಗಳನ್ನು 35000 ರೂ.ಗೆ ಮಾರಾಟ ಮಾಡಿದ್ದೇವೆ ಎಂದು ಇಂಡಿಯನ್ ಗ್ರಾನ್ ಪ್ರಿಯನ್ನು ಸಂಘಟಿಸುತ್ತಿರುವ ಜೇಪಿ ಸ್ಫೋರ್ಟ್ಸ್ ಇಂಟರ್‌ನ್ಯಾಶನಲ್‌ನ ಆಡಳಿತ ನಿರ್ದೇಶಕ ಸಮೀರ್ ಗೌರ್ ಮಾಹಿತಿ ನೀಡಿದ್ದಾರೆ.
ಎರಡು ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿ ಜಯಿಸಿರುವ ಸೆಬಾಸ್ಟಿಯನ್ ವೆಟೆಲ್ ಹಾಗೂ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಜಾಕೀ ಸ್ಟಿವರ್ಟ್ ಅವರು ಇಲ್ಲಿನ ಹೊಸ ಟ್ರಾಕ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಚೊಚ್ಚಲ ಗ್ಯಾಂಡ್ ಪ್ರಿಯಲ್ಲಿ ಮೈಕಲ್ ಶೂಮೇಕರ್, ಹ್ಯಾಮಿಲ್ಟನ್ ಹಾಗೂ ವೆಟೆಲ್ ಪ್ರಮುಖ, ಆಕರ್ಷಕ ಚಾಲಕರಾಗಿದ್ದಾರೆ.
‘‘ಬುದ್ಧ ಟ್ರಾಕ್ ನನಗೆ ತುಂಬಾ ಇಷ್ಟವಾಯಿತು. ಇದೊಂದು ಉತ್ತಮ ಟ್ರಾಕ್’’ ಎಂದು ಶನಿವಾರ ಅರ್ಹತಾ ಸುತ್ತಿನಲ್ಲಿ 5.14 ಕಿಮೀ. ಲ್ಯಾಪ್‌ನ್ನು 1 ನಿಮಿಷ 26.454 ಸೆಕೆಂಡ್‌ನಲ್ಲಿ ಕ್ರಮಿಸಿರುವ ಮೆಕ್‌ಲಾರೆನ್‌ನ ಚಾಲಕ ಲೊವಿಸ್ ಹ್ಯಾಮಿಲ್ಟನ್ ಹೇಳಿದ್ದಾರೆ.
ರವಿವಾರ ನಡೆಯುವ ರೇಸ್‌ನಲ್ಲಿ ಗೆಲ್ಲುವ ಚಾಲಕನಿಗೆ ನೀಡುವ ಟ್ರೋಫಿಯನ್ನು ಫಾರ್ಮುಲಾ ವನ್ ಮುಖ್ಯಸ್ಥ ಬೆರ್ನಿ ಎಕ್ಸೆಲ್‌ಸ್ಟೋನ್ ಅನಾವರಣಗೊಳಿಸಿದ್ದಾರೆ. ಮಿರುಗುವ ಟ್ರೋಫಿಯನ್ನು 24 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯಿಂದ ನಿರ್ಮಿಸಲಾಗಿದೆ. ದ್ವಿತೀಯ ಅಭ್ಯಾಸದ ವೇಳೆ ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಕಾರಿನ ಇಂಜಿನ್ ಕೆಟ್ಟುಹೋಗಿದ್ದರೆ, ಕೆಲವು ತಂಡಗಳ ಚಾಲಕರು ಟ್ರಾಕ್‌ನಲ್ಲಿ ಧೂಳು ಏಳುತ್ತಿರುವ ಬಗ್ಗೆ ದೂರನ್ನು ನೀಡಿದ್ದಾರೆ.

Advertisement

0 comments:

Post a Comment

 
Top