PLEASE LOGIN TO KANNADANET.COM FOR REGULAR NEWS-UPDATES










ಕೊಪ್ಪಳ ಅ. ೨೯ (ಕ.ವಾ): ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ  ಘೋಷಿಸಲಾಗಿದ್ದು, ಕೊಪ್ಪಳ ಜಿಲ್ಲೆಯೂ ಸಹ ಬರ ಪರಿಸ್ಥಿತಿ ಅನುಭವಿಸುವಂತಾಗಿದೆ.  ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ತಕ್ಷಣವೇ ೫ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಹೇಳಿದರು.
  ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ.  ರಾಜ್ಯಾದ್ಯಂತ ಬರ ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಈಗಾಗಲೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಆಡಳಿತದಲ್ಲಿ ಪಾರದರ್ಶಕತೆ, ಭ್ರಷ್ಠಾಚಾರಕ್ಕೆ ಕಡಿವಾಣ, ಕಡತಗಳ ತ್ವರಿತ ವಿಲೇವಾರಿಗೆ ಈಗಾಗಲೆ ಆದೇಶ ನೀಡಲಾಗಿದ್ದು, ಸದ್ಯದಲ್ಲೆ ಎಲ್ಲಾ ಇಲಾಖೆಗಳಿಗೂ ನಾಗರಿಕ ಸನ್ನದು ಜಾರಿಗೊಳಿಸಲಾಗುವುದು.  ಇದರಿಂದಾಗಿ ಕಡತ ವಿಲೇವಾರಿಯಲ್ಲಿ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.  ಕಚೇರಿಗಳಲ್ಲಿ ಬೆಳಿಗ್ಗೆ ಅರ್ಜಿ ಸಲ್ಲಿಸಿದರೆ, ಅದೇ ದಿನದಂದು ಅರ್ಜಿ ವಿಲೇವಾರಿಯಾಗುವಂತಹ ಪರಿಸ್ಥಿತಿ ಕಚೇರಿಗಳಲ್ಲಿ ನಿರ್ಮಾಣವಾಗಬೇಕು ಎಂದರು.
ವಿಧಾನಸೌಧದಲ್ಲಿ ೨೪ * ೭ : ರಾಜ್ಯದ ಯಾವುದೇ ಸಾಮಾನ್ಯ ಪ್ರಜೆ ಜಿಲ್ಲಾ ಮಟ್ಟದಲ್ಲಿ ತಮ್ಮ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ನೇರವಾಗಿ ವಿಧಾನಸೌಧದ ಕಚೇರಿಗೆ ದೂರವಾಣಿ ಕರೆ ಮಾಡುವುದರ ಮೂಲಕ ಅಥವಾ ಇ-ಮೇಲ್ ಕಳುಹಿಸುವುದರ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮಾಡಲು ಶೀಘ್ರದಲ್ಲೆ ವಿಧಾನಸೌಧದಲ್ಲಿ ದಿನದ ೨೪ ಗಂಟೆಯೂ ಕೆಲಸ ಮಾಡುವಂತಹ ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು.  ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಾಮಾನ್ಯ ಪ್ರಜೆಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ನೆರವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವಸತಿ ಯೋಜನೆಗೆ ಕಾಲಮಿತಿ : ವಿವಿಧ ಯೋಜನೆಗಳಡಿ ಬಡವರಿಗೆ ನಿರ್ಮಾಣವಾಗಬೇಕಾಗಿರುವ ವಸತಿಗಳಿಗೆ ಸಂಬಂಧಪಟ್ಟಂತೆ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಶೀಘ್ರವಾಗಿ ಕಟ್ಟಿ ವಿತರಿಸುವಂತಾಗಬೇಕು.  ಜಿಲ್ಲೆಯಲ್ಲಿ ಈಗಾಗಲೆ ೫೧೯೫ ಮನೆಗಳನ್ನು ವಿತರಿಸಲು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲು ಸೂಕ್ತ ಕಾಲಮಿತಿ ಯೋಜನೆಯನ್ನು ಹಾಕಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಹೊಂಡ ರಹಿತ ರಸ್ತೆಗೆ ಸೂಚನೆ : ರಾಜ್ಯಾದ್ಯಂತ ಎಲ್ಲ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದು, ಡಿಸೆಂಬರ್ ತಿಂಗಳೊಳಗೆ ಎಲ್ಲಾ ರಸ್ತೆಗಳು ಹೊಂಡ ರಹಿತವಾಗಿರಬೇಕು.  ಮೂರು ತಿಂಗಳ ನಂತರ ಪುನಃ ಕೊಪ್ಪಳ ಜಿಲ್ಲೆಗೆ ಪ್ರವಾಸ ಕೈಗೊಂಡು, ರಸ್ತೆಗಳನ್ನು ಪರಿಶೀಲಿಸುತ್ತೇನೆ.  ಒಂದು ವೇಳೆ ಯಾವುದೇ ರಸ್ತೆಯಲ್ಲಿ ತೆಗ್ಗು ಬಿದ್ದಿರುವುದು ಅಥವಾ ಹಾಳಾಗಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಭದ್ರತೆ : ಸಾಮಾಜಿಕ ಭದ್ರತೆ ಯೋಜನೆಯಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷ ವೇತನ, ಅಂಗವಿಕಲರ ವೇತನ ಹೀಗೆ ವಿವಿಧ ಯೋಜನೆಗಳಡಿ ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ಗುರುತಿಸಿ, ಅಂತಹ ಮಂಜೂರಾತಿಯನ್ನು ರದ್ದುಪಡಿಸಲು ಸೂಚಿಸಲಾಗಿದ್ದು, ಪುನರ್ ಪರಿಶೀಲನಾ ವರದಿಯನ್ನು ಕೂಡಲೆ ಸರ್ಕಾರಕ್ಕೆ ಸಲ್ಲಿಸಬೇಕು.  ನಂತರವಷ್ಟೆ ವಿವಿಧ ವೇತನಗಳನ್ನು ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಿದೆ ಎಂದರು.
ಗಂಗಾಕಲ್ಯಾಣ : ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಯಿಸಲಾಗಿರುವ ಫಲಾನುಭವಿಗಳ ಕೊಳವೆ ಬಾವಿಗಳಿಗೆ ಕಳೆದ ಮೂರ್‍ನಾಲ್ಕು ವರ್ಷಗಳಿಂದಲೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಬಗ್ಗೆ ಜೆಸ್ಕಾಂ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು, ನಂತರ ಇನ್ನೆರಡು ತಿಂಗಳ ಒಳಗಾಗಿ ಗಂಗಾ ಕಲ್ಯಾಣ ಯೋಜನೆಯ ಎಲ್ಲಾ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದಲ್ಲಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
  ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ, ಸಂಸದ ಶಿವರಾಮಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಶಾಸಕರುಗಳಾದ ಸಂಗಣ್ಣ ಕರಡಿ, ಅಮರೇಗೌಡ ಪಾಟೀಲ ಬಯ್ಯಾಪುರ, ಶಿವರಾಜ ತಂಗಡಗಿ, ಪರಣ್ಣ ಮುನವಳ್ಳಿ, ಹೊಸಪೇಟೆ ಶಾಸಕ ಆನಂದ್ ಸಿಂಗ್, ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top