ಬೆಂಗಳೂರು, ಅ.22: ಭ್ರಷ್ಟಾಚಾರಕ್ಕೆ ಸಂಬಂಧಿಸಿ ದಂತೆ ರಾಜ್ಯ ಬಿಜೆಪಿ ನಾಯಕರು ಸಾಲು ಸಾಲಾಗಿ ಜೈಲು ಪಾಲಾಗುತ್ತಿರುವುದರಿಂದ ಮುಜುಗರ ಕ್ಕೀಡಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಎಲ್.ಕೆ.ಅಡ್ವಾಣಿಯವರ ‘ಜನ ಚೇತನಾ ಯಾತ್ರೆ’ಯ ಬಹಿರಂಗ ಸಭೆಯನ್ನು ರದ್ದುಗೊಳಿಸಲಾಗಿದೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ‘ಜನ ಚೇತನಾ ಯಾತ್ರೆ’ಯ ಹಿನ್ನೆಲೆ ಯಲ್ಲಿ ಅ.30ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಜೆ 5 ಗಂಟೆಗೆ ಬಹಿರಂಗ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ರಾಜ್ಯದ ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯದ ಹಿರಿಯ ನಾಯಕರು ಭ್ರಷ್ಟಾಚಾರಕ್ಕೆ ಸಂಬಂಧಿಸಿ ಜೈಲು ಪಾಲಾಗತ್ತಿರುವು ದರಿಂದ ಮುಜುಗರಕ್ಕೀಡಾಗಿರುವ ಹಿನ್ನೆಲೆಯಲ್ಲಿ ಬಹಿರಂಗ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರ ವಿರೋಧ ಕಾನೂನಿನಡಿ ಜೈಲು ಸೇರಿದ್ದು ಅಡ್ವಾಣಿಯವರಿಗೆ ಭಾರೀ ಮುಜುಗರ ತಂದಿರುವುದು ಒಂದೆಡೆಯಾದರೆ, ಈ ಸಮಾವೇಶದ ಉಸ್ತುವಾರಿ ವಹಿಸಿಕೊಳ್ಳಬೇಕಾಗಿದ್ದ ಗೃಹ ಮತ್ತು ಸಾರಿಗೆ ಸಚಿವ ಅಶೋಕ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಪ್ರಮುಖ ಕಾರಣವಾಗಿದೆ. ಭೂ ಹಗರಣದ ಸುಳಿಯಲ್ಲಿ ಸಿಲುಕಿ ಮಾಜಿ ಸಚಿವ ಸುಬ್ರಹ್ಮಣ್ಯ ನಾಯ್ಡು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಜೈಲು ಸೇರಿರುವುದು ಪಕ್ಷಕ್ಕೆ ತೀವ್ರ ಇರಸುಮುರಸು ತಂದಿದ್ದು, ಆ ನಿಟ್ಟಿನಲ್ಲಿ ರಥಯಾತ್ರೆ ವೇಳೆ ಮುಜುಗರ ತಪ್ಪಿಸಿಕೊಳ್ಳಲು ಸಭೆ ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪರಿಗೆ ದಿಢೀರನೆ ಬುಲಾವ್ ನೀಡಿದ ಆರೆಸ್ಸೆಸ್ ನಾಯಕರು ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಚಾಮರಾಜಪೇಟೆಯ ಆರೆಸ್ಸೆಸ್ ಕೇಂದ್ರ ಕಚೇರಿ ಕೇಶವ ಕೃಪಾದಲ್ಲಿ ಆರೆಸ್ಸೆಸ್ ಮುಖಂಡರಾದ ಸತೀಶ್, ಸಂತೋಷ್ ಮತ್ತಿತರರು ಈಶ್ವರಪ್ಪರೊಂದಿಗೆ ಮಾತುಕತೆ ನಡೆಸಿದರು. ಹಲವು ಮಂದಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಜೈಲು ಪಾಲಾಗಿರುವುದರಿಂದ ಆಗಿರುವ ಮುಖಭಂಗವನ್ನು ತಪ್ಪಿಸಲು ಅ.30ರಂದು ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಅ.30ರಂದು ಅಡ್ವಾಣಿ ‘ಜನ ಚೇತನಾ ಯಾತ್ರೆ’ ಬೆಂಗಳೂರಿಗೆ ಆಗಮಿಸಲಿದ್ದು, ಬಹಿರಂಗ ಸಭೆ ಹೊರತು ಪಡಿಸಿದಂತೆ ಬೇರೆ ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಲಾಗಿದೆ.
ಪೂರ್ವನಿಗದಿಯಾದಂತೆ ಆಡ್ವಾಣಿಯವರ ‘ಜನಚೇತನಾ ರಥಯಾತ್ರೆ’ಯು ಅಕ್ಟೋಬರ್ 31ರಂದು ರಾಜ್ಯದ ಕರಾವಳಿ ಪ್ರದೇಶಗಳಾದ ಮಂಗಳೂರು,ಉಡುಪಿ ಹಾಗೂ ಹೊನ್ನಾವರಗಳಲ್ಲಿ ಸಂಚರಿಸಲಿದೆಯೆಂದು ಪಕ್ಷದ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ, ಉತ್ತರಕನ್ನಡದ ಅಂಕೋಲಾದಲ್ಲಿ ನವೆಂಬರ್ 1ರಂದು ನಡೆಯಲಿರುವ ರ್ಯಾಲಿಯಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲವೆಂದು ಅವು ಹೇಳಿವೆ. ಭೂಡಿನೋಟಿಫಿಕೇಶನ್ ಹಗರಣದ ಆರೋಪಗಳಿಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇನ್ನೋರ್ವ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಜೈಲು ಸೇರಿರುವುದು, ಪಕ್ಷಕ್ಕೆ ತೀರಾ ಮುಜುಗರವನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸದಿರಲು ಬಿಜೆಪಿ ತೀರ್ಮಾನಿಸಿದೆಯೆನ್ನಲಾಗಿದೆ.
ಏತನ್ಮಧ್ಯೆ ನಿಯಮಗಳನ್ನು ಉಲ್ಲಂಘಿಸಿ ಭೂ ಡಿನೋಟಿಫಿಕೇಶನ್ ನೀಡಿದ ಆರೋಪದಲ್ಲಿ ಗೃಹ ಸಚಿವ ಆರ್. ಅಶೋಕ್ ವಿರುದ್ಧ ಸಲ್ಲಿಸಲಾದ ಖಾಸಗಿ ದೂರೊಂದರ ತನಿಖೆ ನಡೆಸಲು ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿರುವುದು ಸರಣಿ ಹಗರಣಗಳಿಂದ ತತ್ತರಿಸಿರುವ ರಾಜ್ಯ ಬಿಜೆಪಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಂಗಳೂರಿನಲ್ಲಿ ಅಡ್ವಾಣಿಯ ರ್ಯಾಲಿಯ ಪೂರ್ವಸಿದ್ಧತೆಗಾಗಿ ಚರ್ಚಿಸಲು ಶನಿವಾರ ರಾಜ್ಯ ಬಿಜೆಪಿ ಕರೆದಿದ್ದ ಪಕ್ಷದ ನಾಯಕರ ಪ್ರಾಥಮಿಕ ಸಭೆ ಕೂಡಾ ರದ್ದುಗೊಂಡಿದೆ.
ಇದಕ್ಕೂ ಮೊದಲು ರಾಜ್ಯ ಬಿಜೆಪಿಯು ನೀಡಿದ ಪ್ರಕಟಣೆಯೊಂದು ಅಕ್ಟೋಬರ್ 30ರಂದು ಬಿಜೆಪಿಯು ಕೇರಳದ ಕಾಸರಗೋಡಿನ ಮೂಲಕ ರಾಜ್ಯವನ್ನು ಪ್ರವೇಶಿಸಲಿದ್ದು, ಅಂದು ಸಂಜೆ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆಂದು ತಿಳಿಸಿತ್ತು. ಪೂರ್ವನಿಗದಿಯಾದಂತೆ ಅಡ್ವಾಣಿಯ ರಥಯಾತ್ರೆಯು ಅಕ್ಟೋಬರ್ 31ರಂದು ಮಂಗಳೂರು,ಮೂಲ್ಕಿ, ಹೆಜಮಾಡಿ,ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ ಹಾಗೂ ಕುಮಟಾಗಳಲ್ಲಿ ಸಂಚರಿಸಲಿದೆ.‘ಉತ್ತಮ ಆಡಳಿತ ಹಾಗೂ ಸ್ವಚ್ಛ ರಾಜಕಾರಣಕ್ಕಾಗಿ’ ಎಂಬ ಘೋಷಣೆಯಡಿ ಲಾಲಕೃಷ್ಣ ಅಡ್ವಾಣಿಯವರ ನೇತೃತ್ವದಲ್ಲಿ ದೇಶದಾದ್ಯಂತ ಸಿತಾಬ ದಿಯಾರಾದಿಂದ ದಿಲ್ಲಿಯವರೆಗೆ ಅ.11ರಿಂದ ನ.20ರ ವರೆಗೆ ‘ಜನ ಚೇತನಾ ಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿತ್ತು. ಅ.30ರಂದು ಬೆಂಗಳೂರಿಗೆ ಆಗಮಿಸಲಿರುವ ಯಾತ್ರೆಯ ಹಿನ್ನೆಲೆಯಲ್ಲಿ ಬಹಿರಂಗ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.
ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಿಜೆಪಿ ಹಿರಿಯ ನಾಯಕರು ಜೈಲು ಸೇರಿರುವುದುರಿಂದ ಹಾಗೂ ಯಾತ್ರೆಯ ರಾಜ್ಯ ಉಸ್ತುವಾರಿಯನ್ನು ವಹಿಸಿರುವ ಗೃಹ ಸಚಿವ ಆರ್.ಅಶೋಕ್‌ರ ಮೇಲೆಯೇ ಡಿನೋಟಿಫಿಕೇಶನ್ ಹಗರಣದ ಆರೋಪ ಬಂದಿರುವುದರಿಂದ ಇನ್ನಷ್ಟು ಮುಜುಗರವನ್ನು ತಪ್ಪಿಸುವುದಕ್ಕಾಗಿ ಸಾರ್ವಜನಿಕ ಬಹಿರಂಗ ಸಭೆಯನ್ನು ರದ್ದುಗೊಳಿಸಲು ಆರೆಸ್ಸೆಸ್ ಸೂಚಿಸಿದೆ. ಈಶ್ವರಪ್ಪರೊಂದಿಗೆ ಆರೆಸ್ಸೆಸ್ ಮುಖಂಡರು ನಡೆಸಿದ ಮಾತುಕತೆಯ ವೇಳೆ ಗೃಹ ಸಚಿವ ಅಶೋಕ್, ಸಚಿವ ಮುರುಗೇಶ್ ನಿರಾಣಿ ಮೇಲಿರುವ ಆರೋಪದ ಕುರಿತು ಕೂಡಾ ಚರ್ಚೆ ನಡೆಸಲಾಗಿದೆ. ಸಭೆಯ ನಂತರ ಈಶ್ವರಪ್ಪರನ್ನು ಮಾಧ್ಯಮದವರು ಮಾತನಾಡಿಸಲು ಮುಂದಾದಾಗ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಆದರೆ ‘ಜನ ಚೇತನಾ ಯಾತ್ರೆ’ಯನ್ನು ಅಧಿಕೃತವಾಗಿ ರದ್ದುಗೊಳಿಸಿಲ್ಲ ಎಂದು ಬಿಜೆಪಿಯ ಮಾಧ್ಯಮ ವಕ್ತಾರ ಪ್ರಕಾಶ್ ತಿಳಿಸಿದ್ದು, ಈ ಸಂಬಂಧ ಯಾವುದೇ ನಿರ್ಧಾರ ಕೂಡಾ ತೆಗೆದುಕೊಂಡಿಲ್ಲ ಎಂದಿದ್ದಾರೆ
0 comments:
Post a Comment