PLEASE LOGIN TO KANNADANET.COM FOR REGULAR NEWS-UPDATES



ಬೆಂಗಳೂರು: `ಕೇಂದ್ರದ ಯುಪಿಎ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಮಾತ್ರ `ಜನ ಚೇತನ ಯಾತ್ರೆ`ಯ ಗುರಿಯಲ್ಲ, ಬಿಜೆಪಿ ಸರ್ಕಾರ ನಡೆಸಿರುವ ಭ್ರಷ್ಟಾಚಾರವನ್ನೂ ನಾನು ಸಹಿಸುವುದಿಲ್ಲ. ಈ ಕಾರಣಕ್ಕೇ ಲೋಕಾಯುಕ್ತ ವರದಿಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೆಸರು ಇದೆ ಎಂದ ತಕ್ಷಣ ಅವರ ವಿರುದ್ಧವೂ ಕ್ರಮ ತೆಗೆದುಕೊಂಡಿದ್ದು`-

ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಹೀಗೆ ಹೇಳುವ ಮೂಲಕ ರಾಜ್ಯದ ನಾಯಕರ ಮೇಲೂ ಚಾಟಿ ಬೀಸಿದರು. ಜನ ಚೇತನ ಯಾತ್ರೆಯ ಅಂಗವಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ ದರು.

`ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರ ಒಟ್ಟಿಗೆ ಸಾಗಲು ಸಾಧ್ಯವೇ ಇಲ್ಲ. ಈ ಮಾತನ್ನು ಕಾಂಗ್ರೆಸ್ಸಿಗರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹೇಳುತ್ತಿಲ್ಲ. ನಮ್ಮವರು ಭ್ರಷ್ಟಾಚಾರದಲ್ಲಿ ತೊಡಗಿದ್ದನ್ನು ಸಹಿಸಲು ಸಾಧ್ಯವೇ ಇಲ್ಲ` ಎಂದು ಹೇಳಿದರು.

ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಸುರಿಯಲಾರಂಭಿಸಿದ ಮಳೆಯ ನಡುವೆಯೇ ಭಾಷಣ ಆರಂಭಿಸಿದ ಅಡ್ವಾಣಿ, `ಕಾನೂನಿನ ಪ್ರಕಾರ ಆರೋಪಿಗಳು ಮತ್ತು ಅಪರಾಧಿಗಳು ಬೇರೆ ಆಗಿರಬಹುದು. ಆದರೆ ರಾಜ್ಯದ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ವರದಿ ಸಲ್ಲಿಸಿದ ತಕ್ಷಣ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಪಕ್ಷ ಸೂಚನೆ ನೀಡಿತು` ಎಂದು ನೆನಪಿಸಿದರು.

`ಪಕ್ಷದ ರಾಜ್ಯ ಘಟಕದ ಕಚೇರಿ `ಜಗನ್ನಾಥ ಭವನ`ದ ಉದ್ಘಾಟನೆಗೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿಗೆ ಬಂದಾಗಲೂ ಇದೇ ಮಾತು ಹೇಳಿದ್ದೆ. ಯಾತ್ರೆಯ ಅಂಗವಾಗಿ ನಾಗಪುರಕ್ಕೆ ತೆರಳಿದ್ದಾಗ ಕರ್ನಾಟಕದ ವಿದ್ಯಮಾನಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗಲೂ ಇದನ್ನೇ ತಿಳಿಸಿದ್ದೇ ನೆ. ಇವತ್ತೂ ಅದೇ ಮಾತು ಹೇಳುತ್ತೇನೆ; ಬಿಜೆಪಿಯವರು ಮಾಡುವ ಭ್ರಷ್ಟಾಚಾರವನ್ನೂ ನಾನು ಸಹಿಸಲಾರೆ` ಎಂದು ರಾಜ್ಯದ ಬಿಜೆಪಿ ಮುಖಂಡರ ಸಮ್ಮುಖದಲ್ಲೇ ಸ್ಪಷ್ಟಪಡಿಸಿದರು.

ಒಳ್ಳೆಯ ಆಡಳಿತ ಕೊಡಿ: `ರಾಜ್ಯದ ಮುಖ್ಯಮಂತ್ರಿಯಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿ ರುವ ಸದಾನಂದ ಗೌಡ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅವರು ರಾಜ್ಯಕ್ಕೆ ಸ್ವಚ್ಛ ಆಡಳಿತ ನೀಡುತ್ತಾರೆ ಎಂಬ ಭರವಸೆ ಇದೆ. ಆ ಪ್ರಕಾರವೇ ನಡೆದುಕೊಳ್ಳಬೇಕು. ಒಳ್ಳೆಯ ಆಡಳಿತ ನೀಡಿದರೆ ಜನ ನಮ್ಮನ್ನು ಕೈಬಿಡುವುದಿಲ್ಲ` ಎಂದು ಹೇಳಿದರು.

`2-ಜಿಗಿಂತ ದೊಡ್ಡ ಹಗರಣ`: ಎರಡನೆಯ ತಲೆಮಾರಿನ ತರಂಗಾಂತರ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರ ದೇಶದ ಇತಿಹಾಸದಲ್ಲಿ ನಡೆದ ಅತಿ ದೊಡ್ಡ ಮೊತ್ತದ ಅವ್ಯವಹಾರ ಆಗಿರಬಹುದು. ಆದರೆ `ವೋಟಿಗಾಗಿ ನೋಟು` ದೇಶದ ಪಾಲಿಗೆ ಅತ್ಯಂತ ಅವಮಾನಕರ ಹಗರಣ ಎಂದು ಕಿಡಿಕಾರಿದರು.

2008ರಲ್ಲಿ ಎಡ ಪಕ್ಷಗಳು ಯುಪಿಎಗೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಾಗ ಸರ್ಕಾರ ಅಲ್ಪ ಮತಕ್ಕೆ ಕುಸಿಯಿತು. ಅಲ್ಪಮತದ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್, `ಖರೀದಿಗೆ ಲಭ್ಯವಿ ರುವ` ವಿಪಕ್ಷಗಳ ಸಂಸದರನ್ನೇ ಖರೀದಿ ಮಾಡಿತು. ವಿಶ್ವದ ಯಾವುದೇ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಇಂಥ ಅವಮಾನಕರ ಹಗರಣ ನಡೆದಿರಲಿಕ್ಕಿಲ್ಲ ಎಂದು ಅಡ್ವಾಣಿ ಹೇಳಿದರು.

ಯಾತ್ರೆಯ ಯೋಚನೆ: `ಇದೇ ಸೆಪ್ಟೆಂಬರ್ ಆರಂಭದವರೆಗೂ ಜನ ಚೇತನ ಯಾತ್ರೆ ಕೈಗೊಳ್ಳುವ ಯಾವ ಉದ್ದೇಶವೂ ನನಗಿರಲಿಲ್ಲ. ಆದರೆ ವೋಟಿಗಾಗಿ ನೋಟು ಹಗರಣ ಹೊರ ಜಗತ್ತಿಗೆ ತಿಳಿಯಲು ಕಾರಣರಾದ ನನ್ನ ಪಕ್ಷದ ಇಬ್ಬರು ಸಂಸದರನ್ನು ಸೆ. 6ರಂದು ನ್ಯಾಯಾಲ ಯ ಜೈಲಿಗೆ ಕಳುಹಿಸಿದಾಗಲೇ ಭ್ರಷ್ಟಾಚಾರ ವಿರುದ್ಧ ಜನರನ್ನು ಬಡಿದೆಬ್ಬಿಸುವಂಥ ಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದೆ` ಎಂದು ವಿವರಿಸಿದರು.

ಕಪ್ಪು ಹಣ: ಬೆಂಗಳೂರಿನವರೇ ಆದ ಪ್ರೊ. ವೈದ್ಯನಾಥನ್ ಸಮಿತಿಯ ವರದಿಯ ಪ್ರಕಾರ ಸ್ವಿಟ್ಜರ್ಲೆಂಡ್‌ನ ವಿವಿಧ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಒಟ್ಟು ಮೊತ್ತ 25 ಲಕ್ಷ ಕೋಟಿ ರೂಪಾಯಿ. ಇಷ್ಟೂ ಹಣವನ್ನು ದೇಶಕ್ಕೆ ವಾಪಸ್ ತಂದು ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಬೇಕು. ಇದರಿಂದ ಎಲ್ಲ ಹಳ್ಳಿಗಳಿಗೆ ವಿದ್ಯುತ್, ನೀರು, ಆಸ್ಪತ್ರೆ, ಶಾಲೆ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದರು.

ಮಾಹಿತಿ ಹಕ್ಕು ಕಾಯ್ದೆ: ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ ಕೇಂದ್ರ ಸರ್ಕಾರಕ್ಕಿದೆ ಎಂದು ಆರೋಪಿಸಿದ ಅವರು, ತಮ್ಮ ಸರ್ಕಾರದ ಹಗರಣಗಳು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಬಹಿರಂಗ ಆಗಿದ್ದ ಕಾರಣದಿಂದಲೇ ಈ ಕಾಯ್ದೆಯಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ ಎಂದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಉತ್ತರಖಂಡ, ಚತ್ತೀಸ್‌ಗಡ ರಾಜ್ಯಗಳನ್ನು ರಚಿಸುವ ಸಂದರ್ಭದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯವನ್ನೂ ರಚಿಸಬಹುದಿತ್ತು. ಆದರೆ ಎನ್‌ಡಿಎ ಸರ್ಕಾರದ ಮಿತ್ರಪಕ್ಷವೊಂದು ತೆಲಂಗಾಣ ರಾಜ್ಯ ರಚನೆ ಪ್ರಸ್ತಾವ ವಿರೋಧಿಸಿದ ಕಾರಣ ಅದು ಸಾಧ್ಯವಾಗಲಿಲ್ಲ ಎಂದು ತೆಲಗು ದೇಶಂ ಪಕ್ಷವನ್ನು ಪರೋಕ್ಷವಾಗಿ ಚುಚ್ಚಿದರು.

ಬೈಕ್ ರ‌್ಯಾಲಿ: ಕೇರಳದ ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ನಗರದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಅಡ್ವಾಣಿ ಅವರನ್ನು ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿಯ ಮೂಲಕ ನ್ಯಾಷನಲ್ ಕಾಲೇಜು ಮೈದಾನಕ್ಕೆ ಕರೆತಂದರು. ಇದೇ ವೇಳೆ ಮಲ್ಲೇಶ್ವರದಲ್ಲಿರುವ ಬಿಜೆಪಿಯ ಹಳೆ ಕಚೇರಿ ಭಾವೂರಾವ್ ದೇಶಪಾಂಡೆ ಭವನದಿಂದಲೂ ಸಮಾವೇಶ ನಡೆಯುವ ಸ್ಥಳಕ್ಕೆ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು

-ಜೈಲ್ ನಾಯಕರಿಗೆ ಎಚ್ಚರಿಕೆ: ಈ ಹೋರಾಟ ಕಾಂಗ್ರೆಸ್ ವಿರುದ್ಧ ಅಷ್ಟೇ ಅಲ್ಲ: ಆಡ್ವಾಣಿ

ಬೆಂಗಳೂರು ಅ.೩೦: ತಾವು ನಡೆಸುತ್ತಿರುವ ಭ್ರಷ್ಟಾಚಾರದ ವಿರುದ್ಧದ ಯಾತ್ರೆ ಕೇಂದ್ರದಲ್ಲಿನ ಯುಪಿ‌ಎ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಮಾತ್ರವಲ್ಲ. ನಮ್ಮವರು ಭ್ರಷ್ಟಾಚಾರ ಮಾಡಿದರೂ ಈ ಹೋರಾಟ ಇರುತ್ತದೆ.

ಉತ್ತಮ ಆಡಳಿತ ಇರುವಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ನಮ್ಮವರು ಸೇರಿದಂತೆ ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ. ಯಾರೇ ಭ್ರಷ್ಟಾಚಾರ ಮಾಡಿದರೂ ಬಿಜೆಪಿ ಸಹಿಸು ವುದಿಲ್ಲ.

ಹೀಗೆಂದು ರಾಜ್ಯದಲ್ಲಿನ ತಮ್ಮದೇ ಪಕ್ಷದ ಸರ್ಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದು ಕೊಂಡವರು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರಾದ್ಯಂತ ‘ಜನಚೇತನ ಯಾತ್ರೆ’ ಹಮ್ಮಿಕೊಂಡಿರುವ ಮಾಜಿ ಉಪ ಪ್ರಧಾನಿ, ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ.ಆಡ್ವಾಣಿ.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ಮಾತುಗಳನ್ನು ಕೇವಲ ಯುಪಿ‌ಎ ಮತ್ತು ಕಾಂಗ್ರೆಸ್‌ಗೆ ಹೇಳುವುದಿಲ್ಲ. ನಮ್ಮವರಿಗೂ ಹೇಳುತ್ತೇನೆ. ನಮ್ಮಲ್ಲಿ ಭ್ರಷ್ಟಾಚಾರ ಇದ್ದರೂ ಅದನ್ನು ಸಹಿಸಿಕೊಳ್ಳ ಲು ಸಾಧ್ಯವಿಲ್ಲ ಎಂದರು.

ಹಿಂದೆಯೂ ಹೇಳಿದ್ದೆ..: ಕಳೆದ ಏ.೨೮ರಂದು ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಉದ್ಘಾಟನೆಗೆ ಬೆಂಗಳೂರಿಗೆ ಬಂದಿದ್ದಾಗ ಯುಪಿ‌ಎ, ಕಾಂಗ್ರೆಸ್‌ನ ದೋಷಗಳ ಬಗ್ಗೆ ಹೇಳಿ, ಇದನ್ನು ನಮ್ಮವರೂ ಸ್ವೀಕರಿಸಬೇಕು ಎಂದಿದ್ದೆ. ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇನೆ ಎಂದರು.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ವರದಿ ನೀಡಿದಾಗ ತಕ್ಷಣ ನಮ್ಮವರ ರಾಜಿನಾಮೆ ಪಡೆದುಕೊಳ್ಳುವ ತೀರ್ಮಾನವನ್ನು ರಾಷ್ಟ್ರೀಯ ಬಿಜೆಪಿ ಕೈಗೊಂಡಿತ್ತು. ವರದಿಯಲ್ಲಿ ನಮ್ಮವರ ಮೇಲೆ ಆರೋಪ ಇತ್ತೇ ಹೊರತು ಅದು ಸಾಬೀತಾಗಿರಲಿಲ್ಲ. ಹೀಗಿದ್ದರೂ ರಾಜಿನಾಮೆ ಪಡೆದು ನಾವು ಭ್ರಷ್ಟಾಚಾರದ ವಿರುದ್ಧ ಇದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದರು.

ಡೀವಿ ಉತ್ತಮ ಆಡಳಿತ ಕೊಡುತ್ತಾರೆ: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಜತೆ ಈಗಾಗಲೇ ಚರ್ಚಿಸಿದ್ದೇನೆ. ಅವರು ಸರಿಯಾದ ನಿಟ್ಟಿನಲ್ಲಿ ನಡೆಯುತ್ತಾರೆ ಎಂಬ ನಂಬಿಕೆ ಇದೆ. ಉತ್ತಮ ಆಡಳಿತವನ್ನು ರಾಜ್ಯಕ್ಕೆ ಕೊಡಲಿದ್ದಾರೆ. ಉತ್ತಮ ಆಡಳಿತ ಇರುವಲ್ಲಿ ಭ್ರಷ್ಟಾಚಾರ ಇರುವುದಿಲ್ಲ ಎಂಬುದನ್ನು ಅವರು ತೋರಿಸಿಕೊಡಲಿದ್ದಾರೆ ಎಂದು ಹೇಳಿದರು.

ಆಡ್ವಾಣಿ ಹೇಳಿದ್ದು...

-ಕೇಂದ್ರದ ಯುಪಿ‌ಎ ಸರ್ಕಾರ ಬಹುಮತ ಉಳಿಸಿಕೊಳ್ಳಲು ಸಂಸದರನ್ನು ಖರೀದಿಸಿತು. ಬಿಜೆಪಿ ಯ ಮೂವರು ಸಂಸದರು ಮತ ಲಂಚ ಪ್ರಕರಣವನ್ನು ಲೋಕಸಭೆಯಲ್ಲಿ ಬಹಿರಂಗಪಡಿಸಿದರು. ಮತ ಲಂಚ ಪ್ರಕರಣ ಬಯಲಿಗೆಳೆದ ಮಾಜಿ ಸಂಸದರನ್ನು ಬಂಧಿಸಿದಾಗ ಜನಚೇತನ ಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದೆ.

-ವಿಶ್ವವನ್ನೇ ಕಂಗೆಡಿಸಿದ ೨ಜಿ ತರಂಗಾಂತರ, ಆದರ್ಶ ಹೌಸಿಂಗ್ ಸೊಸೈಟಿ, ಕಾಮನ್‌ವೆಲ್ತ್ ಗೇಮ್ಸ್ ಹಗರಣಕ್ಕಿಂತಲೂ ಭಾರತೀಯ ಸಂಸದೀಯ ವ್ಯವಸ್ಥೆಯನ್ನು ಹಾಳು ಮಾಡಿದ ಮತ ಲಂಚ ಹಗರಣವೇ ಅತ್ಯಂತ ಘೋರ ಮತ್ತು ತಮಗೆ ಹೆಚ್ಚು ನೋವು ತಂದ ಹಗರಣವಾಗಿದೆ.

-ಪ್ರಧಾನಿಯಾಗುವ ಮುನ್ನ ಡಾ.ಮನಮೋಹನ್ ಸಿಂಗ್ ಅವರ ಬಗ್ಗೆ ಅಪಾರ ವಿಶ್ವಾಸ ಮತ್ತು ಗೌರವ ಇತ್ತು. ಆದರೆ, ಅವರು ಪ್ರಧಾನಿಯಾದ ಬಳಿಕ ದುಃಖವಾಗುತ್ತಿದೆ. ಎಲ್ಲಾ ಸರ್ಕಾರಗಳಿ ಗಿಂತ ಮನಮೋಹನ್ ಸಿಂಗ್ ಸರ್ಕಾರ ಹೆಚ್ಚು ಭ್ರಷ್ಟ.

-ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದು ಪಾರದರ್ಶಕತೆಗೆ ಒತ್ತು ನೀಡಿದ್ದೇವೆ ಎಂದು ಪ್ರಧಾನಿ ಹೇಳುತ್ತಾರೆ. ಈ ಕಾಯ್ದೆಯ ಪರಿಣಾಮವಾಗಿ ಹಗರಣಗಳು ಹೊರಬಿದ್ದ ಮೇಲೆ ಆ ಕಾಯ್ದೆಯನ್ನು ಮರು ಪರಿಶೀಲಿಸಬೇಕು ಎಂದು ಅವರೇ ಹೇಳುತ್ತಾರೆ. ಹೀಗಿರುವಾಗ ಅವರಿಂದ ಪಾರದರ್ಶಕತೆ ನಿರೀಕ್ಷಿಸಲು ಹೇಗೆ ಸಾಧ್ಯ?

-೨ಜಿ ತರಂಗಾಂತರ ಹಗರಣದಲ್ಲಿ ಜೈಲು ಸೇರಿದವರು ಡಿ‌ಎಂಕೆ ಪಕ್ಷದವರು ಮಾತ್ರ. ಹಾಗಿದ್ದರೆ ಕಾಂಗ್ರೆಸ್ ನಾಯಕರ ಪಾತ್ರ ಇಲ್ಲವೇ? ಅವರು ಹಗರಣದಲ್ಲಿ ಶಾಮೀಲಾಗಿರುವುದು ಬಹಿರಂಗ ಸತ್ಯ. ಈ ವಿಚಾರದಲ್ಲಿ ಗೃಹ ಸಚಿವರು ಮತ್ತು ಹಣಕಾಸು ಸಚಿವರು ನೀಡುವ ವಿಭಿನ್ನ ಹೇಳಿಕೆ ಗಳೇ ಕಾಂಗ್ರೆಸ್ ಕೈವಾಡ ಇದೆ ಎನ್ನಲು ಸಾಕ್ಷಿ. ಆದರೆ, ಅದನ್ನು ಮುಚ್ಚಿ ಹಾಕಲು ಪ್ರಧಾನಿ ಇಬ್ಬರನ್ನೂ ರಾಜಿ ಮಾಡಿಸುತ್ತಾರೆ.

-ಹಿಂದೆ ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣವನ್ನು ಸರ್ಕಾರಗಳು ವಾಪಸ್ ಪಡೆಯಲು ಅವಕಾಶ ಇರಲಿಲ್ಲ. ಆದರೆ, ೨೦೧೧ರಲ್ಲಿ ಅಲ್ಲಿನ ಸರ್ಕಾರ ಈ ಹಣವನ್ನು ವಾಪಸ್ ಮಾಡಲು ಕಾಯ್ದೆ ರೂಪಿಸಿತ್ತು. ಈ ಬಗ್ಗೆ ಮೂರು ಬಾರಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ಹಣ ವಾಪಸ್ ತರುವಂತೆ ಒತ್ತಾಯಿಸಿದ್ದೆ. ಆದರೆ, ಅವರು ಸ್ಪಂದಿಸಲೇ ಇಲ್ಲ.

-ಸ್ವಾತಂತ್ರ್ಯ ಹೋರಾಟಗಾರರ ತಪಸ್ಸಿನಿಂದ ನಮಗೆ ಸ್ವರಾಜ್ಯ ಸಿಕ್ಕಿದೆ. ಆದರೆ, ಇದನ್ನು ಕೆಲವ ರು ಸ್ವಾಹ ರಾಜ್ಯವನ್ನಾಗಿ ಮಾಡಿಕೊಂಡರು. ಅದನ್ನು ಸ್ವರಾಜ್ಯ ಮಾಡುವುದೇ ಬಿಜೆಪಿಯ ಗುರಿ. ಕಾರ್ಯಕ್ರಮದಲ್ಲಿ ಯಾತ್ರೆಯ ಸಂಚಾಲಕರೂ ಆಗಿರುವ ಸಂಸದ ಅನಂತಕುಮಾರ್, ಮುಖ್ಯ  ಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ನಾಯಕ ರಾದ ವೆಂಕಯ್ಯ ನಾಯ್ಡು, ರವಿಶಂಕರ ಪ್ರಸಾದ್, ಧರ್ಮೇಂದ್ರ ಪ್ರಧಾನ್, ಮುರಳೀಧರನ್, ಶ್ಯಾಮ್‌ಜಿ ಸೇರಿದಂತೆ ಸಚಿವರು, ಸಂಸದರು, ಶಾಸಕರು ಹಾಜರಿದ್ದರು.

ಮತ್ತೆ ಅನುರಣಿಸಿದ ಭಿನ್ನರಾಗ

-ಆಡ್ವಾಣಿ ‘ಜನಚೇತನ ಯಾತ್ರೆ’ಗೆ ಬಿ‌ಎಸ್‌ವೈ ಬಣ ಗೈರು

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ನಿಂತಿಲ್ಲ ಎಂಬುದು ಭಾನುವಾರ ಮತ್ತೊಮ್ಮೆ ಸಾಬೀತಾಗಿದೆ. ಬಹಿಷ್ಕಾರವೋ? ಗೈರು ಹಾಜರಿಯೋ? ಗೊತ್ತಿಲ್ಲ. ಒಟ್ಟಿನಲ್ಲಿ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ.ಆಡ್ವಾಣಿ ಅವರು ಹಮ್ಮಿಕೊಂಡಿರುವ ‘ಜನಚೇತನ ಯಾತ್ರೆ’ಯ ಬೆಂಗಳೂರಿನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಸಚಿವರು ಮತ್ತು ಬಹುತೇಕ ಶಾಸಕರು ಬಂದಿರಲಿಲ್ಲ. ಅವರೆಲ್ಲಾ ಮಂಗಳೂರಿಗೆ ತೆರಳುವ ಮುನ್ನ ಆಡ್ವಾಣಿ ಅವರನ್ನು ಸೋಮವಾರ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ಆಡ್ವಾಣಿ ಅವರು ಸರ್ಕಾರದಲ್ಲಿ ನಡೆ ಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಅವರಿಗೂ ಹಲವಾರು ಬಾರಿ ಬುದ್ಧಿವಾದ ಹೇಳಿದ್ದರು. ಈ ಸಂದರ್ಭದಲ್ಲೆಲ್ಲಾ ದೆಹಲಿಯ ಕೆಲವು ನಾಯಕರು ಯಡಿಯೂರಪ್ಪ ಪರ ನಿಂತಿದ್ದರಿಂದಾಗಿ ಆಡ್ವಾಣಿ ಮೌನಕ್ಕೆ ಶರಣಾಗಿದ್ದರು.

ಯಾರೂ ಬಂದಿರಲಿಲ್ಲ: ಹೀಗಾಗಿ ಭಾನುವಾರ ನಡೆಯುವ ಆಡ್ವಾಣಿ ಅವರ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಬೆಂಬಲಿತ ಸಚಿವರು ಮತ್ತು ಶಾಸಕರು ಪಾಲ್ಗೊಳ್ಳುವ ಬಗ್ಗೆ ಸ್ವತಃ ಬಿಜೆಪಿಯ ವರಿಗೇ ಅನುಮಾನವಿತ್ತು. ಈ ಅನುಮಾನ ನಿಜವಾಯಿತು.

ಬೆಂಗಳೂರಿನವರೇ ಆದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಯಾವುದೇ ಸಚಿವರೂ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅಷ್ಟೇ ಏಕೆ, ಯಡಿಯೂರಪ್ಪ ಬೆಂಬಲಿತ ಬಹುತೇಕ ಶಾಸಕರೂ ಗೈರು ಹಾಜರಾಗಿದ್ದರು. ಆದರೆ, ಸಂಸದ ಡಿ.ಬಿ.ಚಂದ್ರೇಗೌಡ ಹಾಜರಾಗಿದ್ದರು.

ಬಿ‌ಎಸ್‌ವೈ ನಿರ್ಲಕ್ಷಿಸಿದ್ದು ಕಾರಣ: ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರನ್ನು ಸಂಪೂರ್ಣ ನಿರ್ಲಕ್ಷಿಸಿದ್ದೇ ಅವರ ಬಣದವರು ಗೈರು ಹಾಜರಾಗಲು ಪ್ರಮುಖ ಕಾರಣ ಎನ್ನಲಾಗಿದೆ. ವೇದಿಕೆ ಮೇಲೆ ಸೇರಿದಂತೆ ಬಿಜೆಪಿ ವತಿಯಿಂದ ನಗರಾದ್ಯಂತ ಹಾಕಲಾಗಿದ್ದ ಕಟೌಟ್, ಬ್ಯಾನರ್‌ಗಳಲ್ಲಿ ಯಡಿಯೂರಪ್ಪ ಅವರ ಭಾವಚಿತ್ರ ಅಥವಾ ಹೆಸರು ಇರಲಿಲ್ಲ. ಇದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಅವರು ಈ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಆರ್. ಅಶೋಕ, ಎಸ್.ಎ.ರಾಮದಾಸ್, ಎಸ್.ಎ.ರವೀಂದ್ರನಾಥ್, ಬಿ.ಎನ್.ಬಚ್ಚೇಗೌಡ, ಎ. ನಾರಾಯಣಸ್ವಾಮಿ ಹಾಜರಿದ್ದರೆ, ಶೆಟ್ಟರ್ ಬಣದ ಬಹುತೇಕ ಶಾಸಕರು ವೇದಿಕೆಯ ಮುಂಭಾಗ ಕುಳಿತಿದ್ದರು

Advertisement

0 comments:

Post a Comment

 
Top