PLEASE LOGIN TO KANNADANET.COM FOR REGULAR NEWS-UPDATES


ದಲಿತ ಸಂಘರ್ಷ ಸಮಿತಿಗೆ ‘ಬಂಧುತ್ವ’ದ ತುರ್ತು ಅಗತ್ಯ : ಸಾಹಿತಿ-ಚಿಂತಕ ದೇವನೂರ ಮಹಾದೇವ
ಮೈಸೂರು, ಅ. 30: ಸೈದ್ಧಾಂತಿಕ ಕಾರಣಗಳಿಗಾಗಿ ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳಾಗಿ ವಿಂಗಡಣೆಯಾಗಿರುವುದು ಅಸಹಜವೇನಲ್ಲ ಎಂದು ಅಭಿಪ್ರಾಯಪಟ್ಟಿರುವ ಖ್ಯಾತ ಸಾಹಿತಿ-ಚಿಂತಕ ದೇವನೂರ ಮಹಾದೇವ, ಆದರೆ ವಿವಿಧ ಬಣಗಳು ಹಾಗೂ ಕಾರ್ಯಕರ್ತರ ಮಧ್ಯೆ ‘ಬಂಧುತ್ವ’ದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ರವಿವಾರ ಏರ್ಪಡಿಸಲಾಗಿದ್ದ ‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ‘ದಸಂಸ ಹೋರಾಟದ ಪಯಣ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ದಲಿತ ಸಂಘರ್ಷ ಸಮಿತಿಯ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದ ದೇವನೂರ, ಸಂಘಟನೆಯಲ್ಲಿ ಬಂಧುತ್ವದ ತುರ್ತು ಅಗತ್ಯ ಮತ್ತು ಅನಿವಾರ್ಯದ ಪ್ರತಿಪಾದನೆಗಾಗಿ ತನ್ನ ಕೆಲವು ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ವರದಯ್ಯ, ದೊಡ್ಡಣ್ಣ, ಸತ್ಯನಾರಾಯಣ ಶೆಟ್ಟಿ, ಕುಪ್ಪೆ ನಾಗರಾಜ್ ಮತ್ತು ಪಳನಿಯಪ್ಪ ಎಂಬ ಐವರು ಗೆಳೆಯರಿದ್ದರು. ಕ್ರಮವಾಗಿ ಅವರು ದಲಿತ (ಬಲಗೈ), ದಲಿತ (ಎಡಗೈ), ಕೊರಮ, ದೊಂಬಿದಾಸ ಹಾಗೂ ಪೌರಕಾರ್ಮಿಕ ಜನಾಂಗಕ್ಕೆ ಸೇರಿದ್ದರು. ಪಳನಿಯಪ್ಪ ಈ ಗುಂಪಿನ ನಾಯಕನಾಗಿದ್ದನು. ಅವರೆಲ್ಲರೂ ಸಾಂಘಿಕ ಪ್ರಯತ್ನದ ಮೂಲಕ ದಲಿತ ಸಂಘರ್ಷ ಸಮಿತಿಯನ್ನು ಸಂಘಟಿಸುತ್ತಿದ್ದರು. ಈ ಗೆಳೆಯರ ಮಧ್ಯೆ ಅಂದು ‘ಬಂಧುತ್ವ’ ಎಂಬುದು ಸಹಜ ಮತ್ತು ಅಪ್ರಜ್ಞಾಪೂರ್ವಕವಾಗಿತ್ತು.ಆದರೆ ಇಂದು ಅಂತಹ ‘ಬಂಧುತ್ವದ ಆದರ್ಶ’ ನಮ್ಮೆಲ್ಲರ ನಡುವೆ ಪ್ರಜ್ಞಾಪೂರ್ವಕವಾಗಿ ಏರ್ಪಡಬೇಕಾಗಿದೆ ಎಂದು ಅವರು ಉಪಮೆಯ ಮೂಲಕ ವಿವರಿಸಿದರು.
ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ದಿವಂಗತ ಪ್ರೊ.ಬಿ.ಕೃಷ್ಣಪ್ಪ, ಕವಿ ಡಾ.ಸಿದ್ದಲಿಂಗಯ್ಯ ಮತ್ತು ನನ್ನ ಮಧ್ಯೆ ಸೈದ್ಧ್ದಾಂತಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಕೃಷ್ಣಪ್ಪ ಕಟ್ಟಾ ಅಂಬೇಡ್ಕರ್ ವಾದಿ, ಸಿದ್ದಲಿಂಗಯ್ಯ ಕಮ್ಯುನಿಸ್ಟ್ ಹಾಗೂ ನಾನು ಸಮಾಜವಾದಿ. ಹೀಗಾಗಿ ನಾವು ಮೂವರು ಅನೇಕ ಸಭೆ, ಸಮಾರಂಭ ಹಾಗೂ ವೇದಿಕೆಗಳಲ್ಲಿ ಬಹಿರಂಗವಾಗಿಯೇ ಜಗಳ ಆಡುತ್ತಿದ್ದೆವು. ಆದರೆ ನಂತರ ಪರಸ್ಪರ ಹುಡುಕಿಕೊಂಡು ಹೋಗಿ, ಭೇಟಿಯಾಗಿ ಮಾತನಾಡುತ್ತಿದ್ದೆವು. ಸೈದ್ಧ್ದಾಂತಿಕ ಭಿನ್ನಾಭಿಪ್ರಾಯವಿದ್ದಾಗ್ಯೂ ನಮ್ಮ ಮಧ್ಯೆ ಬಂಧುತ್ವವಿದ್ದುದೇ ಇದಕ್ಕೆ ಕಾರಣ ಎಂದು ಅವರು ಸ್ಮರಿಸಿದರು. ದಲಿತ ಸಂಘರ್ಷ ಸಮಿತಿ ಅನೇಕ ಬಣಗಳಾಗಿ ವಿಭಜನೆಯಾಗಿದ್ದರೂ ಯಾವೊಂದು ಬಣ ಕೂಡ ಈವರೆಗೆ ಮತೀಯವಾದಿಗಳ ಜೊತೆ ಗುರುತಿಸಿಕೊಂಡಿಲ್ಲ. ಇದು ಸಂಘಟನೆಯ ಮೂಲ ಹಾಗೂ ದೊಡ್ಡಗುಣ ಎಂದು ಮಹಾದೇವ ಬಣ್ಣಿಸಿದರು.
ವಿಚಾರಗೋಷ್ಠಿಯ ಶೀರ್ಷಿಕೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಿನ್ನೆ-ಪರವಾಗಿಲ್ಲ, ಇಂದು-ಚೆನ್ನಾಗಿಲ್ಲ, ನಾಳೆ-ಏನಾಗುತ್ತದೋ ಗೊತ್ತಿಲ್ಲ. ಈ ನಡುವೆ, ನಿನ್ನೆಯನ್ನು ಬದಲಾಯಿಸುವುದು ಅಸಾಧ್ಯ. ಆದರೆ ಈವತ್ತು ವಿವೇಕದಿಂದ ವರ್ತಿಸಿದರೆ ನಾಳೆಯ ಬದುಕು ಚೆನ್ನಾಗಿರಲು ಸಾಧ್ಯ ಎಂದು ವ್ಯಾಖ್ಯಾನಿಸಿದರು. ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಒಂದಾಗದಿದ್ದರೂ ಪರವಾಗಿಲ್ಲ. ಆದರೆ ಎಲ್ಲ ಬಣ ಹಾಗೂ ಕಾರ್ಯಕರ್ತರು ಕನಿಷ್ಠ ಒಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳು ರೈತ ಸಂಘ ಸೇರಿದಂತೆ ಸಮಾನಮನಸ್ಕ ಎಲ್ಲ ಸಂಘಟನೆಗಳನ್ನು ಒಳಗೊಳ್ಳಬೇಕು ಎಂದು ದೇವನೂರು ಆಶಿಸಿದರು.
ನಿರಾಶೆಯ ನಡುವೆಯೂ ಆಶಾವಾದ: ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಮರ್ಶಕ ಪ್ರೊ.ಜಿ.ಎಚ್.ನಾಯಕ್ ಮಾತನಾಡಿ, ಗಾಂಧೀಜಿ ಹಿಂದುತ್ವವಾದಿ ಧೋರಣೆ ಹೊಂದಿದ್ದರು ಎಂಬುದು ಸುಳ್ಳಲ್ಲ. ಅವರ ಹೋರಾಟದ ಕಾಲಘಟ್ಟದಲ್ಲಿ ಭಾರತೀಯತೆ ಎಂಬುದು ಹಿಂದುತ್ವದ ಭಾಗವೇ ಆಗಿತ್ತು. ಆದುದರಿಂದ ಭಾರತೀಯತೆ, ಅರ್ಥಾತ್ ಹಿಂದುತ್ವದ ವೈಭವೀಕರಣ ಅಂದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿತ್ತು. ಆದರೆ, ಪ್ರಸ್ತುತ ಹಿಂದುತ್ವದ ರೂಪ ಹಾಗೂ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಗಾಂಧಿಯ ರಾಮ ಮತ್ತು ಬಿಜೆಪಿಯ ರಾಮ ಯಾರೆಂಬುದನ್ನು ಪತ್ತೆ ಹಚ್ಚಲು ತನಿಖಾ ಸಮಿತಿಯನ್ನೇ ನೇಮಕ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಸ್ವಾತಂತ್ರದ ಸಂದರ್ಭದಲ್ಲಿ ಭಾರತೀಯ ವಿದ್ಯಾವಂತರ ಸಂಖ್ಯೆ ವಿರಳವಾಗಿತ್ತು. ಈಗ ಎಲ್ಲರೂ ವಿದ್ಯಾವಂತರು; ಆದರೆ ಜನಪರವಾಗಿ ಚಿಂತಿಸುವವರ ಕೊರತೆಯಿದೆ ಎಂದು ಅವರು ವಿಷಾದಿಸಿದರು. ರಾಜಕೀಯ ಪಕ್ಷಗಳು ಗಬ್ಬೆದ್ದುಹೋಗಿವೆ. ದುಷ್ಟಾಚಾರ ಮತ್ತು ಭ್ರಷ್ಟಾಚಾರಕ್ಕೆ ಯಾವ ಪಕ್ಷವೂ ಹೊರತಲ್ಲ. ಆದರೆ ಪ್ರಮಾಣದಲ್ಲಷ್ಟೇ ವ್ಯತ್ಯಾಸವಿದೆ ಎಂದು ಪ್ರೊ.ನಾಯಕ್ ನುಡಿದರು. ನಡುವೆಯೂ ದಲಿತ ಸಂಘರ್ಷ ಸಮಿತಿ, ರೈತ ಸಂಘ ಹಾಗೂ ಕೆಲವು ಮಹಿಳಾ ಸಂಘಟನೆಗಳ ಬಗ್ಗೆ ವೈಯಕ್ತಿಕವಾಗಿ ನಾನು ಈಗಲೂ ಆಶಾವಾದಿಯಾಗಿದ್ದೇನೆ. ಆದುದರಿಂದ ಈ ಸಂಘಟನೆಗಳು ಒಗ್ಗೂಡಿ, ಜೀವಂತಿಕೆಯನ್ನು ಪಡೆದುಕೊಂಡು ಹೋರಾಟ ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.
ಆತ್ಮವಿಮರ್ಶೆಗೆ ಸಲಹೆ:
ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಶಿವಸುಂದರ್, ಚಳವಳಿ ಹಾಗೂ ಚಳವಳಿಗಾರರಿಗೆ ಆತ್ಮವಿಮರ್ಶೆಯ ಕೊರತೆಯಿದ್ದು, ಅದನ್ನು ನಿವಾರಿಸಿಕೊಳ್ಳಬೇಕು. ತಪ್ಪುಗಳನ್ನು ಒಪ್ಪಿ, ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಆ ಮೂಲಕ ಸಮಾಜಕ್ಕೆ ತಮ್ಮ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿಎಲ್‌ನ ಡಾ.ವಿ.ಲಕ್ಷ್ಮೀನಾರಾಯಣ ವಿಚಾರಗೋಷ್ಠಿಯ ವಿಷಯ ಕುರಿತು ಮಾತನಾಡಿದರು. ಬಿ.ಡಿ.ಶಿವಬುದ್ಧಿ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದ

Advertisement

0 comments:

Post a Comment

 
Top