ಕೊಪ್ಪಳ ಅ ಕೊಪ್ಪಳ ತಾಲೂಕು ಡೊಂಬರಳ್ಳಿ ಗ್ರಾಮದಲ್ಲಿ ಅ. ೨೯ ರಂದು ಸಾವಯವ ಕೃಷಿಕರ ಮನೆಯಂಗಳದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ರಸ್ತೆ, ವೇದಿಕೆ, ಸೇರಿದಂತೆ ಗ್ರಾಮದಲ್ಲೀಗ ಸಿದ್ಧತೆಯ ಭರಾಟೆ ಭರದಿಂದ ಸಾಗಿದ್ದು, ಕಳೆದೆರಡು ದಿನಗಳಿಂದ ಡೊಂಬರಳ್ಳಿ ಗ್ರಾಮದಲ್ಲಿ ಮೊಕ್ಕಾಂ ಹೂಡಿರುವ ಅಧಿಕಾರಿಗಳು, ಸಿದ್ಧತೆಯಲ್ಲಿ ತೊಡಗಿದ್ದಾರೆ. ಗ್ರಾಮದ ಮುಖ್ಯ ರಸ್ತೆಗಳ ದುರಸ್ಥೆ ಕೈಗೊಳ್ಳುವುದು, ಅಗತ್ಯವಿರುವ ಕಡೆ ಮುರ್ರಂ ಹಾಕುವುದು, ಗ್ರಾಮದ ಮಾರುತೇಶ್ವರ ದೇವಸ್ಥಾನದ ರಸ್ತೆ, ಪಾದಗಟ್ಟೆ ರಸ್ತೆ, ವೇದಿಕೆಗೆ ಹೋಗುವ ರಸ್ತೆಗಳ ದುರಸ್ತೆ ಕಾರ್ಯ ಭರದಿಂದ ಸಾಗಿದೆ. ಜೆಸ್ಕಾಂ ಇಲಾಖೆಯೂ ಸಹ ಗ್ರಾಮಕ್ಕೆ ಹೆಚ್ಚುವರಿಯಾಗಿ ಬೇಕಾಗುವ ಪರಿವರ್ತಕಗಳ ಅಳವಡಿಕೆ, ಕಂಬಗಳ ಬದಲಾವಣೆ ಕಾರ್ಯಕ್ಕೆ ತನ್ನ ಸಿಬ್ಬಂದಿಯನ್ನು ತೊಡಗಿಸಿದೆ. ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ನೇರವಾಗಿ ಡೊಂಬರಳ್ಳಿಗೆ ಆಗಮಿಸುವ ಸಾಧ್ಯತೆ ಇದ್ದು, ಡೊಂಬರಳ್ಳಿ ಬಳಿಯ ಹೊಲದಲ್ಲಿಯೇ ಹೆಲಿಪ್ಯಾಡ್ ನಿರ್ಮಿಸುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಲೋಕೋಪಯೋಗಿ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈಗಾಗಲೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಶಾಸಕ ಸಂಗಣ್ಣ ಕರಡಿ ಅವರು ವೇದಿಕೆ ನಿರ್ಮಾಣ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದ್ದು, ವೇದಿಕೆ ನಿರ್ಮಾಣ ಕಾರ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಅ. ೨೯ ರಂದೇ ಹಿರೇಸಿಂದೋಗಿಯ ಆಸರೆ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮವನ್ನು ನಿಗದಿಪಡಿಸಿರುವುದರಿಂದ, ಜಿಲ್ಲಾಧಿಕಾರಿಗಳು, ಶಾಸಕ ಸಂಗಣ್ಣ ಕರಡಿ ಅವರು ಹಿರೇಸಿಂದೋಗಿಗೆ ಭೇಟಿ ನೀಡಿ ಆಸರೆ ಮನೆಗಳನ್ನು ಪರಿಶೀಲನೆ ಮಾಡಿದರು, ಕೊಪ್ಪಳದಿಂದ ಹಿರೇಸಿಂದೋಗಿ ಮಾರ್ಗವಾಗಿ ಇರುವ ರಸ್ತೆಯನ್ನು ಸಜ್ಜುಗೊಳಿಸಲು ದುರಸ್ತಿ ಕೈಗೊಳ್ಳಲಾಗುತ್ತಿದೆ. ಅ. ೨೯ ರಂದು ಮುಖ್ಯಮಂತ್ರಿಗಳು ಡೊಂಬರಳ್ಳಿ ಗ್ರಾಮದ ಸಾವಯವ ಕೃಷಿಕರಾದ ಪವಿತ್ರ ಆನಂದರೆಡ್ಡಿ ಮತ್ತು ಆನಂದರೆಡ್ಡಿ ಕರಕರೆಡ್ಡಿ ಇಮ್ಮಡಿ ಅವರ ಮನೆ ಮತ್ತು ಕ್ಷೇತ್ರಗಳಿಗೆ ಭೇಟಿ ನೀಡುವರಲ್ಲದೆ, ಕೃಷಿಕರೊಂದಿಗೆ, ಕೃಷಿ ಕಾರ್ಮಿಕರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ಖಚಿತಗೊಂಡಿದೆ. ಈ ಕುರಿತಂತೆ ಸಕಲ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ ಅವರು.
0 comments:
Post a Comment