PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ ಅ.   ಕೊಪ್ಪಳ ತಾಲೂಕು ಡೊಂಬರಳ್ಳಿ ಗ್ರಾಮದಲ್ಲಿ ಅ. ೨೯ ರಂದು ನಡೆಯಲಿರುವ ಸಾವಯವ ಕೃಷಿಕರ ಮನೆಯಂಗಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಜರುಗಬೇಕು ಮತ್ತು ಇಡೀ ರಾಜ್ಯದಲ್ಲಿಯೇ ಇದು ಹೊಸ ಆಯಾಮವನ್ನು ಸೃಷ್ಟಿ ಮಾಡುವಂತಹ ಕಾರ್ಯಕ್ರಮವಾಗಬೇಕು ಎಂದು ಸಾವಯವ ಕೃಷಿ ಮಿಷನ್ ರಾಜ್ಯಾಧ್ಯಕ್ಷ ಎ. ಆನಂದ್ ಅವರು ಅಭಿಪ್ರಾಯಪಟ್ಟಿದ್ದಾರೆ.
  ಮುಖ್ಯಮಂತ್ರಿಗಳ ಸಾವಯವ ಕೃಷಿಕರ ಮನೆಯಂಗಳದಲ್ಲಿ ಕಾರ್ಯಕ್ರಮ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಜರುಗುವ ಬಗ್ಗೆ ಸೋಮವಾರ ಸಿದ್ಧತೆ ಕುರಿತಂತೆ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು ಇದೊಂದು ಮಾದರಿ ಗ್ರಾಮವಾಗಿರುವುದರಿಂದ ಅತ್ಯಂತ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಆಚರಣೆ ಮಾಡುವ ಮೂಲಕ ಸಾವಯವ ಕೃಷಿಗೆ ಹೊಸ ದಿಕ್ಕನ್ನು ತೋರಿಸಬೇಕು ಎಂದರು.  ಕಾರ್ಯಕ್ರಮದಲ್ಲಿ ಅರ್ಥಪೂರ್ಣ ಚರ್ಚೆ, ಸಂವಾದದ ಮೂಲಕ ಹೊಸ, ಹೊಸ ವಿಚಾರಗಳು ಮಂಡನೆಯಾಗಬೇಕು.  ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿನ ತೊಂದರೆಗಳು, ಅದರಿಂದ ರೈತರು ಅನುಭವಿಸುತ್ತಿರುವ ನೋವುಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಪರಿಹಾರಕ್ಕೆ ಸಂಬಂಧಿಸಿದಂತೆಯೂ ಚರ್ಚೆ ಆಗಬೇಕು.  ಉಪ ಚುನಾವಣೆಯ ನಂತರ ಗ್ರಾಮಕ್ಕೆ ಪ್ರಥಮ ಬಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದರಿಂದ ಸಾಂಪ್ರದಾಯಕವಾಗಿ ಗ್ರಾಮಸ್ಥರು ಸ್ವಾಗತ ಮಾಡಿ, ನಂತರ ರೈತರ ಮನೆ ಅಥವಾ ತೋಟದಲ್ಲಿ ಸಹಭೋಜನ ಮುಗಿದ ನಂತರ ನಡೆಯುವ ಸಂವಾದ ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯ ಮೀಸಲಾಗಬೇಕು.  ರೈತರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದೆ ನಿವೇದನೆ ಮಾಡಿಕೊಳ್ಳುವಂತಾಗಬೇಕು.  ಅದು ರಾಜ್ಯದ ಎಲ್ಲ ರೈತರಿಗೆ ಪ್ರಯೋಜನವಾಗುವಂತಿರಬೇಕು.  ಈ ಕಾರ್ಯಕ್ರಮದಿಂದ ಸುತ್ತಮುತ್ತಲ ಪ್ರದೇಶದಲ್ಲಿನ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಮೂಲಕ ಸಾವಯವ ಕೃಷಿಯ ಕ್ರಾಂತಿಗೆ ನಾಂದಿಯಾಗಬೇಕು.  ರೈತರಲ್ಲಿ ಜಾಗೃತಿ ಮೂಡಬೇಕಲ್ಲದೆ, ಸಾವಯವ ಕೃಷಿ ಮಿಷನ್ ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.  ಕಾರ್ಯಕ್ರಮದಲ್ಲಿ ರೈತರು ಮತ್ತು ಮುಖ್ಯಮಂತ್ರಿಗಳು ಕೇಂದ್ರಬಿಂದು ಆಗುವಂತಾಗಬೇಕು.  ಇದಕ್ಕಾಗಿ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಕರೆಕೊಟ್ಟಾಗ.  ನಮ್ಮಿಂದ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಭರವಸೆ ನೀಡಿದರು. 
  ಇದು, ನಮ್ಮೂರಿನಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮ, ಕೇವಲ ನಮ್ಮೂರಿಗೇ ಸೀಮಿತವಾಗದೆ, ಇಡೀ ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಆಗಬೇಕು ಎನ್ನುವುದೇ ನಮ್ಮ ಬೇಡಿಕೆಯಾಗಿದೆ.  ಆದ್ದರಿಂದ ಇದಕ್ಕೆ ಎಲ್ಲ ಗ್ರಾಮಸ್ಥರು ಹಬ್ಬದ ವಾತಾವರಣ ಸೃಷ್ಟಿಮಾಡಿ ಆಚರಿಸಲಾಗುವುದು.   ಗ್ರಾಮದ ಹೊರವಲಯದ ಕ್ರಾಸ್‌ನಿಂದ ಅಲಂಕೃತ ಎತ್ತಿನ ಬಂಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಗ್ರಾಮಕ್ಕೆ ಕರೆತರುವುದು ಔಚಿತ್ಯಪೂರ್ಣವಾಗುವುದು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
  ಕೃಷಿ ಇಲಾಖೆ ಜಂಟಿನಿರ್ದೇಶಕ ಬಾಲರೆಡ್ಡಿ, ಸಹಾಯಕ ಕೃಷಿನಿರ್ದೇಶಕಿ ಮಂಜುಳಾ, ತಾ.ಪಂ. ಸದಸ್ಯ ಮುದೇಗೌಡ, ತೋಟನಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹನುಮರಡ್ಡಿ, ರಾಮರಡ್ಡಿ ಕರಡ್ಡಿ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top