ಓಸ್ಲೊ, ಅ.: ಲೈಬೀರಿಯಾದ ಅಧ್ಯಕ್ಷೆ ಎಲೆನ್ ಜಾನ್ಸನ್ ಸರ್ಲೀಫ್, ಅಲ್ಲಿನ ಶಾಂತಿ ಕಾರ್ಯಕರ್ತೆ ಲೀಮಾ ಬೋವಿ ಹಾಗೂ ಯಮನ್‌ನ ತವಕ್ಕಲ್ ಕರ್ಮನ್‌ರವರು ಮಹಿಳಾ ಹಕ್ಕುಗಳಿಗಾಗಿ ಮಾಡಿದ ಕೆಲಸಕ್ಕಾಗಿ 2011ನೆ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಹಿಳೆಯರ ಸುರಕ್ಷೆ ಹಾಗೂ ಶಾಂತಿ ಸ್ಥಾಪನೆಯಲ್ಲಿ ಸಂಪೂರ್ಣ ಪಾಲ್ಗೊಳ್ಳುವಿಕೆಯ ಮೂಲಕ ಮಹಿಳೆಯರ ಹಕ್ಕುಗಳಿಗಾಗಿ ಹಿಂಸಾ ರಹಿತ ಹೋರಾಟ ಮಾಡಿರುವ ಮೂವರು ಮಹಿಳೆಯರನ್ನು ನಾರ್ವೆಯ ನೊಬೆಲ್ ಸಮಿತಿ ಗೌರವಿಸಿದೆ.
ಸಮಾಜದ ಎಲ್ಲ ಹಂತಗಳಲ್ಲೂ ಅಭಿವೃದ್ಧಿಯ ಮೇಲೆ ಪ್ರಭಾವ ಬೀರಲು ಪುರುಷರಿಗೆ ಸಮಾನವಾಗಿ ಮಹಿಳೆಯರೂ ಅವಕಾಶ ಪಡೆಯುವ ಹೊರತು ಪ್ರಜಾಪ್ರಭುತ್ವ ಹಾಗೂ ಶಾಶ್ವತ ಶಾಂತಿಯನ್ನು ಗಳಿಸಲು ಸಾಧ್ಯವಿಲ್ಲವೆಂದು ಪ್ರಶಸ್ತಿ ಸಮಿತಿ ಅಭಿಪ್ರಾಯಿಸಿದೆ. 32ರ ಹರೆಯದ ಕರ್ಮನ್ ಮೂರು ಮಕ್ಕಳ ತಾಯಿಯಾಗಿದ್ದು, ‘ವಿಮೆನ್ ಜರ್ನಲಿಸ್ಟ್ ವಿದೌಟ್ ಚೈನ್’ ಎಂಬ ಮಾನವ ಹಕ್ಕು ಗುಂಪಿನ ಮುಖ್ಯಸ್ಥೆಯಾಗಿದ್ದಾರೆ. ಅವರು ಕಳೆದ ಜನವರಿಯಲ್ಲಿ ಆರಂಭವಾಗಿ ಅರಬ್ ಜಗತ್ತನ್ನು ಅಲ್ಲಾಡಿಸಿದ ಅಧಿಕಾರ ವಿರೋಧಿ ಅಲೆಯ ಭಾಗವಾದ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಪ್ರತಿಭಟನೆ ಸಂಘಟಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ತಾನು ಈ ಪ್ರಶಸ್ತಿಯಿಂದ ಆನಂದಗೊಂಡಿದ್ದೇನೆ. ಪ್ರಶಸ್ತಿಯನ್ನು ಯಮನ್‌ನ ಕ್ರಾಂತಿಕಾರಿ ಯುವಕರಿಗೆ ಹಾಗೂ ಜನರಿಗೆ ಅರ್ಪಿಸುತ್ತೇನೆಂದು ಕರ್ಮನ್ ಹೇಳಿದ್ದಾರೆ. ಕರ್ಮನ್‌ರನ್ನು ಗೌರವಿಸುವ ಮೂಲಕ ನೊಬೆಲ್ ಸಮಿತಿಯು ಅರಬ್ ರಾಷ್ಟ್ರದಾದ್ಯಂತ ಆಡಳಿತ ಶಾಹಿಯನ್ನು ಪ್ರಶ್ನಿಸಿದ ಅರಬ್ ಸ್ಫೂರ್ತಿಯ ಪರಿಣಾಮವನ್ನು ಗುರುತಿಸಿದಂತಾಗಿದೆ. ಕರ್ಮನ್, ಸಲೇಹ್ ವಿರೋಧಿ ಹೋರಾಟದ ಕೇಂದ್ರವಾಗಿದ್ದ ದಕ್ಷಿಣ ಯಮನ್‌ನ ತೈಝ್ ನಿವಾಸಿ. ಅವರು ಪತ್ರಕರ್ತೆಯಾಗಿದ್ದು, ಇಸ್ಲಾಮಿಕ್ ಪಕ್ಷ ‘ಇಸ್ಲಾಹ್’ನ ಸದಸ್ಯೆ. ಅವರ ತಂದೆ ಸಲೇಹ್‌ರ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದರು. ಕರ್ಮನ್‌ರನ್ನು ಸಲೇಹ್ ವಿರುದ್ಧ ಹೋರಾಟ ನಡೆಸಿದುದಕ್ಕಾಗಿ ಜನವರಿಯಲ್ಲಿ ಕೆಲವು ಗಂಟೆಗಳ ಕಾಲ ಬಂಧಿಸಲಾಗಿತ್ತು. ಅವರನ್ನು ಬಿಡುಗಡೆಗೊಳಿಸುವಂತೆ ಪ್ರತಿ ಭಟನಕಾರರು ಅಧಿಕಾರಿಗಳನ್ನು ಒತ್ತಾಯಿಸಿದ ಕಾರಣ ಅವರನ್ನು ವಿಮುಕ್ತಿಗೊಳಿಸಲಾಗಿತ್ತು.
72ರ ಹರೆಯದ ಜಾನ್ಸನ್ ಸಲೀಫ್ ಹಾರ್ವಡ್‌ನಲ್ಲಿ ತರಬೇತಿ ಪಡೆದ ಆರ್ಥಿಕ ತಜ್ಞರಾಗಿದ್ದು, 2005ರಲ್ಲಿ ಪ್ರಜಾ ತಾಂತ್ರಿಕವಾಗಿ ಮೊದಲ ಬಾರಿಗೆ ಆಫ್ರಿಕಾದ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆಯಾಗಿದ್ದಾರೆ. 2003ರ ವರೆಗೆ ಲೈಬೀರಿಯ ನಾಗರಿಕ ಯುದ್ಧಗಳಿಂದ ಜರ್ಝರಿತವಾಗಿತ್ತು. ಅದೀಗಲೂ ವಿಶ್ವಸಂಸ್ಥೆಯ ಶಾಂತಿ ಪಡೆಗಳ ನೆರವಿನಿಂದ ದೇಶದಲ್ಲಿ ಶಾಂತಿ ಕಾಪಾಡಲು ಶ್ರಮಿಸುತ್ತಿದೆ. ಸರ್ಲೀಫ್ ಅಧಿಕಾರ ಸ್ವೀಕರಿಸಿದಾಗ ಲೈಬೀರಿಯದ ಸುಧಾರಕಿ ಹಾಗೂ ಶಾಂತಿಯ ರಕ್ಷಕಿಯೆಂದು ಗುರುತಿಸಲ್ಪಟ್ಟಿದ್ದರು. ಅವರು ಈ ತಿಂಗಳು ಮರು ಆಯ್ಕೆಯನ್ನು ಬಯಸಿದ್ದು, ವಿರೋಧಿ ಅಭ್ಯರ್ಥಿಗಳು ಆಕೆಯ ವಿರುದ್ಧ ಮತ ಖರೀದಿ ಹಾಗೂ ಪ್ರಚಾರಕ್ಕಾಗಿ ಸರಕಾರಿ ನಿಧಿ ದುರುಪಯೋಗದ ಆರೋಪ ಮಾಡಿದ್ದಾರೆ. ಆದರೆ, ಸರ್ಲೀಫ್ ಪಾಳಯ ಆರೋಪಗಳನ್ನು ತಳ್ಳಿ ಹಾಕಿದೆ.
ತನ್ನ ದೇಶದಲ್ಲಿ ಶಾಂತಿ ಸ್ಥಾಪನೆ, ಆರ್ಥಿಕಾಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ ಹಾಗೂ ಮಹಿಳೆಯರ ಸ್ಥಾನಮಾನ ಬಲಪಡಿಸಿದುದಕ್ಕಾಗಿ ಅವರನ್ನು ನೊಬೆಲ್ ಸಮಿತಿ ಗೌರವಿಸಿದೆ. ಲೈಬೀರಿಯದ ಸಮರ ವೀರರ ವಿರುದ್ಧ ಕ್ರೈಸ್ತ ಹಾಗೂ ಮುಸ್ಲಿಂ ಮಹಿಳೆಯರ ಗುಂಪೊಂದನ್ನು ಸಂಘಟಿಸಿರುವ ಬೋವಿ, ಲೈಬೀರಿಯದ ಸುದೀರ್ಘ ಸಂಘರ್ಷಕ್ಕೆ ಅಂತ್ಯ ಹಾಡಲು ಹಾಗೂ ಚುನಾವಣೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಜಾತಿ ಹಾಗೂ ಜನಾಂಗೀಯ ಎಲ್ಲೆಗಳನ್ನು ಮೀರಿ ಮಹಿಳೆಯರನ್ನು ಸಂಘಟಿಸಿದುದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಗಳಿಸಿದ್ದಾರೆ. 2009ರಲ್ಲಿ ಆಕೆ ಲೈಬೀರಿಯದ ಮಹಿಳೆಯರಲ್ಲಿ ಧೈರ್ಯ ತುಂಬಿದುದಕ್ಕಾಗಿ ‘ಪ್ರೊಫೈಲ್ ಇನ್ ಕರೇಜ್’ ಪ್ರಶಸ್ತಿಗೆ ಪಾತ್ರರಾಗಿದ್ದರು. ಇದು 1957ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದ ಜಾನ್.ಎಫ್. ಕೆನಡಿಯವರ ಪುಸ್ತಕವೊಂದರ ಹೆಸರಲ್ಲಿ ನೀಡುವ ಪುರಸ್ಕಾರವಾಗಿದೆ.
0 comments:
Post a Comment