ನಾಡು ದಸರಾ ರಜಾ-ಮಜಾದಲ್ಲಿ ಮೈಮರೆತಿರುವ ಹೊತ್ತಿನಲ್ಲೇ, ಬಿಸಿಲು ತನ್ನ ಝಳವನ್ನು ಇನ್ನಷ್ಟು ತೀವ್ರವಾಗಿಸಿದೆ. ಎರಡು ದಿನಗಳ ಹಿಂದೆಯಷ್ಟೆ ಸರಕಾರ 70 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿತ್ತು. ಆದರೆ ಇದೀಗ ಆ ತಾಲೂಕುಗಳ ಸಂಖ್ಯೆ ಇನ್ನಷ್ಟು ಹೆಚ್ಚಳವನ್ನು ಕಂಡಿವೆ. ಒಟ್ಟು 84 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಮತ್ತೊಮ್ಮೆ ಪ್ರಕಟಿಸಲಾಗಿದೆ. ಈ ಪ್ರಕಟಣೆಯ ಬೆನ್ನಿಗೇ ಗುಲ್ಬರ್ಗದಲ್ಲಿ ಬರದಿಂದ ತತ್ತರಿಸಿದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸರಕಾರ ಬರಪೀಡಿತ ತಾಲೂಕನ್ನು ಪ್ರಕಟಿಸಿದೆಯಾದರೂ, ಆ ತಾಲೂಕುಗಳಿಗೆ ಯಾವ ರೀತಿಯ ನೆರವನ್ನು ನೀಡಬೇಕು ಎನ್ನುವುದರ ಕುರಿತಂತೆ ಇನ್ನೂ ಸ್ಪಷ್ಟ ಯೋಜನೆಯನ್ನು ಹಾಕಿಕೊಂಡಂತಿಲ್ಲ. ಒಂದೆಡೆ ಸರಕಾರ ತನ್ನದೇ ಆದ ರಾಜಕೀಯ ಭಿನ್ನಾಭಿಪ್ರಾಯಗಳಿಂದ ತತ್ತರಿಸುತ್ತಿದೆ.
ಅಧಿಕಾರಿಗಳಾದರೂ ನೆರವಿಗೆ ಧಾವಿಸಿದ್ದಾರೆಯೋ ಎಂದು ನೋಡಿದರೆ, ಅವರಿನ್ನೂ ದಸರಾ ರಜೆಯಲ್ಲಿ ಮೈಮರೆತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೊಪ್ಪಳದಂತಹ ಪ್ರದೇಶದಲ್ಲಿ ಒಂದಿಷ್ಟು ಮಳೆ ಹನಿದಿದೆಯಾದರೂ, ಅದರಿಂದ ಬೆಳೆದ ಬೆಳೆಗೆ ಇನ್ನಷ್ಟು ಹಾನಿಯಾಗಿದೆ. ರಾಜ್ಯದಲ್ಲಿ ಮಳೆ ಮತ್ತು ಬರ ರಾಜಕೀಯದ ಒಂದು ಭಾಗವೇ ಆಗಿ ಬಿಟ್ಟಿದೆ. ಯಡಿಯೂರಪ್ಪ ಸರಕಾರ ತೀವ್ರ ಅತಂತ್ರ ಸ್ಥಿತಿಯಲ್ಲಿದ್ದಾಗ, ರಾಜ್ಯ ತೀವ್ರ ನೆರೆ ಹಾನಿಯನ್ನು ಎದುರಿಸಿತು. ಬಳ್ಳಾರಿಯಲ್ಲಿ ನೆರೆಯಿಂದ ಜನರ ಬದುಕು ಕೊಚ್ಚಿ ಹೋಗುತ್ತಿರುವಾಗ, ಬಿಜೆಪಿಯ ಮುಖಂಡರು ಪರಸ್ಪರ ಕಿತ್ತಾಡುವುದರಲ್ಲಿ ಮೈ ಮರೆತಿದ್ದರು. ಅಧಿಕಾರಿಗಳು ಸ್ಪಂದನಾಹೀನರಾಗಿದ್ದರು. ಬಳಿಕ, ನೆರೆ ಪರಿಹಾರ ಹಣ ಸಂಗ್ರಹಿಸುವ ರಾಜಕಾರಣ ನಡೆಯಿತು. ವಿವಿಧ ರಾಜಕೀಯ ಮುಖಂಡರು ಬೀದಿ ಪ್ರದರ್ಶನಕ್ಕಿಳಿದರು.
ಜನರಿಗೆ ನ್ಯಾಯ ನೀಡಬೇಕಾದ ಸರಕಾರ ಬೀದಿ ಬೀದಿಯಲ್ಲಿ ಪ್ರಹಸನ ನಡೆಸಿತು. ಎಲ್ಲ ಪಕ್ಷಗಳ ಮುಖಂಡರೂ ಕೋಟಿ ಕೋಟಿ ರೂ. ಸಂಗ್ರಹಿಸಿದರು. ಆದರೆ ಸಂಗ್ರಹಿಸಿದ ಹಣ ಎಲ್ಲಿಗೆ ಹೋಯಿತು, ಯಾರು ಅದರ ಪ್ರಯೋಜನವನ್ನು ಪಡೆದರು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿಯಿತು. ಪಕ್ಷದೊಳಗಿನ ಬಿಕ್ಕಟ್ಟು, ನಾಯಕರ ಮೇಲಿನ ಆರೋಪ ಇತ್ಯಾದಿಗಳನ್ನು ಮುಚ್ಚಿ ಹಾಕುವುದಕ್ಕಾಗಿ ಬರಸಂತ್ರಸ್ತರನ್ನು ಮುಂದಿಡಲಾಯಿತೇ ಹೊರತು, ಸರಕಾರದ ಯೋಜನೆಗಳು ಸಂತ್ರಸ್ತರಿಗೆ ತಲುಪಲೇ ಇಲ್ಲ. ಕೆಲವು ಜಾತಿ ಮತ್ತು ಧಾರ್ಮಿಕ ಸಂಘಟನೆಗಳು ಕಟ್ಟಿಸಿದ ಮನೆಯನ್ನು ಉದ್ಘಾಟಿಸಿ, ಮುಖ್ಯಮಂತ್ರಿ ಮೀಸೆ ತಿರುವಿಕೊಂಡರು. ಉಳಿದಂತೆ, ನೆರೆ ಸಂತ್ರಸ್ತರ ಹೆಸರಿನಲ್ಲಿ ಕಂಡಕಂಡವರೆಲ್ಲ ದುಡ್ಡು ಮಾಡಿಕೊಂಡರು. ಬಳ್ಳಾರಿಯ ಜನರ ಸಂಕಷ್ಟಗಳನ್ನು ಪರಿಹರಿಸಲು ರೆಡ್ಡಿ ಸಹೋದರರಷ್ಟೇ ಸಾಕಿತ್ತು. ಬಳ್ಳಾರಿಯ ಮಣ್ಣನ್ನು ತೋಡಿ ಕೋಟಿ ಕೋಟಿ ರೂ. ಬಾಚಿಕೊಂಡ ಅವರಿಗೆ ಬಳ್ಳಾರಿಯ ಜನರ ಸಂಕಷ್ಟದೊಂದಿಗೆ ಸ್ಪಂದಿಸುವ ಹೊಣೆಗಾರಿಕೆಯಿತ್ತು. ಇಂದು ಆ ನೆರೆ ಸಂತ್ರಸ್ತರ ಶಾಪ, ನಿಟ್ಟುಸಿರು, ಕಣ್ಣೀರು ಇದರ ಫಲವಾಗಿಯೇ ಜನಾರ್ದನ ರೆಡ್ಡಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಈ ನೆರೆ ಸಂತ್ರಸ್ತರ ದುಃಖವೇ ಸಾಕು, ಯಡಿಯೂರಪ್ಪರಂತಹ ಬಿಜೆಪಿಯ ನಾಯಕರು ಜೈಲು ಸೇರುವುದಕ್ಕೆ.
ಇದೀಗ ಸದಾನಂದ ಗೌಡರ ಆಡಳಿತದಲ್ಲಿ ಬರ ಆಗಮಿಸಿದೆ. ಎಷ್ಟು ತಾಲೂಕುಗಳು ಬರ ಪೀಡಿತವಾಗಿವೆ ಎಂಬ ಮಾಹಿತಿಯನ್ನು ನೀಡುವುದರಿಂದ ಮುಖ್ಯಮಂತ್ರಿಯ ಕರ್ತವ್ಯ ಪೂರ್ತಿಯಾಗುವುದಿಲ್ಲ. ಪರಿಸ್ಥಿತಿ ಕೈ ಮೀರುವ ಮೊದಲು, ಅಧಿಕಾರಿಗಳು ಆಯಾ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಸ್ವತಃ ಮುಖ್ಯಮಂತ್ರಿ ಈ ಭೇಟಿಯ ನೇತೃತ್ವವನ್ನು ವಹಿಸಬೇಕು. ಮುಖ್ಯಮಂತ್ರಿಯೇ ಕಾರ್ಯರಂಗಕ್ಕೆ ಇಳಿಯುತ್ತಾರೆನ್ನುವುದು ಅಧಿಕಾರಿಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ. ಅನಿವಾರ್ಯವಾಗಿ ಅವರೂ ಪರಿಹಾರ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ಆದರೆ ವಿಷಾದನೀಯ ಸಂಗತಿಯೆಂದರೆ, ರೈತರು ಸರಕಾರದಿಂದ ನಿರೀಕ್ಷಿಸುವುದನ್ನೇ ಬಿಟ್ಟಿದ್ದಾರೆ. ಈ ಹಿಂದಿನ ಪರಿಹಾರವೇ ಅವರಿಗೆ ತಲುಪಿಲ್ಲ. ಹೀಗಿರುವಾಗ, ಹೊಸ ಪರಿಹಾರ ತಲುಪುತ್ತದೆಯೆಂದು ಅವರು ನಿರೀಕ್ಷೆಗಳನ್ನಿಟ್ಟುಕೊಳ್ಳುವುದಾದರೂ ಹೇಗೆ? ಇಷ್ಟೇ ಅಲ್ಲ. ಸರಕಾರ ನೀಡುವ ಪರಿಹಾರವಾದರೂ ಎಷ್ಟು? ಮಳೆಯಿಂದ ಬೆಳೆ ನಾಶವಾಗಲಿ ಬರದಿಂದ ನಾಶವಾಗಲಿ. ಸರಕಾರ ಕೊಟ್ಟಂತೆ ನಟಿಸುತ್ತದೆಯಷ್ಟೇ ಹೊರತು, ಅದು ರೈತರ ಬದುಕಿನಲ್ಲಿ ವಿಶೇಷ ಬದಲಾವಣೆಯನ್ನು ತರುವುದಿಲ್ಲ. ಕೆಲವೊಮ್ಮೆ ಸರಕಾರದಿಂದ ಪರಿಹಾರ ಮಂಜೂರಾಗುತ್ತದೆಯಾದರೂ, ರೈತರಿಗೆ ನೀಡುವಾಗ ಅಧಿಕಾರಿಗಳು ಸತಾಯಿಸುತ್ತಾರೆ. ಆದುದರಿಂದ ಈ ಬಾರಿಯೂ ರೈತರ ಸ್ಥಿತಿ ಶೋಚನೀಯವಾಗಿಯೇ ಇರುತ್ತದೆ.
ಸದಾನಂದ ಗೌಡರು ಗ್ರಾಮೀಣ ಪ್ರದೇಶದಿಂದ ಬಂದವರು. ರೈತರ ಕಷ್ಟ ಅವರಿಗೆ ಗೊತ್ತು. ಒಬ್ಬ ನಾಯಕನಿಗಿರಬೇಕಾದ ಕ್ರಿಯಾಶೀಲತೆಯೂ ಅವರಲ್ಲಿದೆ. ಪಕ್ಷದೊಳಗಿನ ಭಿನ್ನಮತ, ರಾಜಕೀಯ ಇತ್ಯಾದಿಗಳನ್ನು ಕೊಡವಿ, ಅವರು ಎದ್ದು ನಿಲ್ಲಬೇಕು. ತನ್ನತನವನ್ನು ಸಾಬೀತು ಪಡಿಸಬೇಕು. ಇರುವಷ್ಟು ದಿನ ತಾನು ರೈತರ, ಬಡವರ, ಕೂಲಿ ಕಾರ್ಮಿಕರ ಮುಖ್ಯಮಂತ್ರಿ ಎನ್ನುವುದನ್ನು ಸಾಬೀತು ಪಡಿಸಬೇಕು. ಅದಕ್ಕೊಂದು ಅವಕಾಶ ಅವರಿಗೆ ಎದುರಾಗಿದೆ. ಅದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕರ್ನಾಟಕ ಕುತೂಹಲದಿಂದ ನೋಡುತ್ತಿದೆ.
ವಾರ್ತಾಭಾರತಿ ಸಂಪಾದಕೀಯ
0 comments:
Post a Comment