ಕೊಪ್ಪಳ ಅ. ೧೦ : ಭತ್ತದ ಕಣಜ ಗಂಗಾವತಿಯಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ನಿರ್ವಹಣೆ ಸಮಿತಿಯ ಪಾತ್ರ ಬಹುಮುಖ್ಯವಾಗಿದ್ದು, ಸಮಿತಿಯ ಎಲ್ಲಾ ಸದಸ್ಯರು ಸಮಯ ಪ್ರಜ್ಞೆಯಿಂದ ವೇದಿಕೆಯ ಕಾರ್ಯಗಳನ್ನು ನಿರ್ವಹಿಸಿ ಸಮ್ಮೆಳನವನ್ನು ಯಶಸ್ವಿಗೊಳಿಸೋಣ ಎಂದು ವೇದಿಕೆ ನಿರ್ವಹಣಾ ಸಮಿತಿಯ ಅಧ್ಯಕ್ಷ ಪ್ರಮೋದ್ ತುರವಿಹಾಳ ಹೇಳಿದರು.
ಗಂಗಾವತಿ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿ ಕಛೇರಿಯಲ್ಲಿ ವೇದಿಕೆ ನಿರ್ವಹಣಾ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಮ್ಮೇಳನದ ಭಾಗಶ: ಯಶಸ್ಸು ವೇದಿಕೆ ನಿರ್ವಹಣಾ ಸಮಿತಿಯ ಮೇಲಿದ್ದು, ಇದೊಂದು ಸಮಯಪ್ರಜ್ಞೆ ಮುಖ್ಯವಾಗಿರುವ ಸಮಿತಿಯಾಗಿದೆ. ಸಮಿತಿಯು ಸಮ್ಮೇಳನದ ಇತರೆ ಸಮಿತಿಗಳ ಜೊತೆ ಆರೋಗ್ಯಪೂರ್ಣ ಸಂಪರ್ಕವನ್ನು ಹೊಂದಿರಬೇಕು. ಪ್ರತಿ ಗೋಷ್ಠಿಗೆ ನಿರೂಪಕರಿದ್ದಂತೆ ನಿರ್ವಾಹಕರನ್ನು ನೇಮಿಸಬೇಕೆಂದರು. ಸಮಿತಿಯು ಪ್ರತಿ ಗೋಷ್ಠಿಯ ನಿಖರ ಸಮಯ, ಭಾಗವಹಿಸುವ ಅತಿಥಿಗಳ ವಾಸ್ತವ್ಯ ಮುಂತಾದ ನಿಖರ ಮಾಹಿತಿಯನ್ನು ಹೊಂದಿರಬೇಕು. ಸ್ವಾಗತ ಸಮಿತಿಯು ಇದಕ್ಕೆ ಪೂರಕ ವಿವರ ನೀಡಬೇಕು ಎಂದರು. ಸಮಿತಿಯು ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದರು.
ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸೋಣ
ಸಮ್ಮೇಳನ ಯಶಸ್ಸಿಗೆ ವೇದಿಕೆ ನಿರ್ವಹಣಾ ಸಮಿತಿಯ ಪಾತ್ರ ಬಹುಮುಖ್ಯವಾಗಿದ್ದು, ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಮ್ಮೆಳನವನ್ನು ಶೋಭಾಯಮಾನವಾಗಿಸೋಣ ಎಂದು ವೇದಿಕೆ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಪ್ರೋ.ಶಿವರಡ್ಡಿ ಹೇಳಿದರು. ಪ್ರಧಾನ ವೇದಿಕೆಗೆ ಕೊಡುವಷ್ಟು ಪ್ರಾಶಸ್ತ್ಯವನ್ನು ಸಮಾಂತರ ವೇದಿಕೆಗೂ ಕೊಡಬೇಕು, ಈ ಸಮಿತಿಯು ವೇದಿಕೆಯನ್ನು ನಿಯಂತ್ರಣಮಾಡುವ ಶಕ್ತಿಯನ್ನು ಹೊಂದಿರುತ್ತದೆ ಎಂದರು.
ಸಭೆಯಲ್ಲಿ ಸಮ್ಮೆಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ ಮಾಹಿತಿ ನೀಡುತ್ತಾ, ಸಮ್ಮೇಳನದಲ್ಲಿ ಒಂದು ಪ್ರಧಾನ ವೇದಿಕೆ ಹಾಗೂ ಎರಡು ಸಮನಾಂತರ ವೇದಿಕೆಗಳು ಇದ್ದು, ಕೇಂದ್ರ ಪರಿಷತ್ ನಿಗದಿಗೊಳಿಸಿದ ಕಾರ್ಯಕ್ರಮ ಪಟ್ಟಿಯ ಪ್ರಕಾರ ಕಾರ್ಯಕ್ರಮಗಳು ಜರುಗುತ್ತವೆ , ಒಂದು ಗೋಷ್ಠಿಯು ಸಂಪೂರ್ಣವಾಗಿ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಆಶಯಗಳನ್ನು ಒಳಗೊಂಡಿರುತ್ತದೆ ಎಂದರು.
ಸಭೆಯಲ್ಲಿ ಲಿಂಗಾರೆಡ್ಡಿ ಆಲೂರ, ಕೆ.ಬಸವರಾಜ, ಎ.ಕೆ.ಮಹೇಶಕುಮಾರ, ಪತ್ರಕರ್ತರಾದ ರಮೇಶನಾಯಕ, ಕೆ.ನಿಂಗಜ್ಜ ಇತರರು ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆ ನಿರ್ವಹಣಾ ಸಮಿತಿ ಸಹಕಾರ್ಯದರ್ಶಿ ಶರಣಪ್ಪ ಪರಕಿ, ಸಮ್ಮೇಳನ ಸಹಕಾರ್ಯದರ್ಶಿ ಬಸವರಾಜ ಕೋಟಿ, ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಬಿ.ಗೊಂಡಬಾಳ ಉಪಸ್ಥಿತರಿದ್ದರು. ತಾಲೂಕಾ ಕ.ಸಾ.ಪ ಗೌರವ ಕಾರ್ಯದರ್ಶಿ ಬಸವರಡ್ಡಿ ಆಡೂರ ನಿರೂಪಿಸಿ ವಂದಿಸಿದರು.
ಸಮ್ಮೆಳನಕ್ಕೆ ಎಲ್ಲರನ್ನೂ ಸ್ವಾಗತಿಸೋಣ, ಗೌರವಿಸೋಣ: ಟಿ. ಆಂಜನೇಯ
ಕೊಪ್ಪಳ ಅ.೧೦ : ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೆಳನ ಗಂಗಾವತಿಗೆ ದೊರಕಿರುವುದು ಸೌಭಾಗ್ಯವೇ ಸರಿ, ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ಸ್ವಾಗತಿಸಿ, ಗೌರವಿಸೋಣ ಎಂದು ಸ್ವಾಗತ, ವಿಚಾರಣೆ ಹಾಗೂ ಮಾಹಿತಿ ಸಮಿತಿಯ ಅಧ್ಯಕ್ಷ ಟಿ.ಆಂಜನೇಯ ಹೇಳಿದರು.
ಗಂಗಾವತಿ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು..
ಸಮ್ಮೇಳನದಲ್ಲಿ ಪ್ರತಿಯೊಂದು ಸಮಿತಿಗೂ ಕೂಡ ತನ್ನದೇ ಆದ ಜವಾಬ್ದಾರಿಗಳಿವೆ. ಸಮ್ಮೆಳನಕ್ಕೆ ಆಗಮಿಸುವ ಪ್ರತಿನಿಧಿಗಳು ಸಮ್ಮೇಳನದ ಮಾಹಿತಿಗಾಗಿ ಸ್ವಾಗತ ಹಾಗೂ ವಿಚಾರಣಾ ಮಾಹಿತಿ ಕೇಂದ್ರವನ್ನು ಹುಡುಕುವುದು ಸಹಜ. ಆದ್ದರಿಂದ ಅತ್ಯಂತ ಗುರುತರವಾದ ಜವಾಬ್ದಾರಿ ಸಮಿತಿಯ ಮೇಲಿದ್ದು ಪ್ರತಿಯೊಬ್ಬರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸೋಣ ಎಂದರು.
ಸಭೆಯಲ್ಲಿ ಜಿಲ್ಲಾ ಕ.ಸಾ.ಪ ಗೌರವಕಾರ್ಯದರ್ಶಿ ಎಸ್.ಬಿ. ಗೊಂಡಬಾಳ ಮಾತನಾಡಿ, ಸ್ವಾಗತ ಹಾಗೂ ವಿಚಾರಣಾ ಸಮಿತಿಯಲ್ಲಿರುವವರು ಸಾಹಿತಿಗಳೊಂದಿಗೆ, ಪ್ರತಿನಿಧಿಗಳೊಂದಿಗೆ ಸೌಜನ್ಯಪೂರಿತವಾಗಿ, ಸಂಯಮದಿಂದ ನಡೆದುಕೊಳ್ಳಬೇಕು ಎಂದರು.
ಸಮ್ಮೆಳನ ಸಹಕಾರ್ಯದರ್ಶಿ ಹಾಗೂ ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ ಮಾತನಾಡಿ, ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಸ್ವಾಗತ, ವಿಚಾರಣೆ ಹಾಗೂ ಮಾಹಿತಿ ಕೇಂದ್ರದಿಂದ ನೀಡಲಾಗುತ್ತದೆ. ಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಮ್ಮೇಳನಕ್ಕೆ ಕೀರ್ತಿ ತನ್ನಿ ಎಂದು ಕರೆನೀಡಿದರು.
ಸಭೆಯಲ್ಲಿ ರಘುನಾಥ ಸಂಗಳದ, ಎಸ್.ಎ.ರಡ್ಡೇರ, ಶಿವನಗೌಡ ಸೂಳೆಕಲ್, ಬಸವರಾಜ ರ್‍ಯಾವಳದ, ಚಂದ್ರೇಗೌಡ ಪೋ||ಪಾ|| ಇತರರು ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸಹಕಾರ್ಯದರ್ಶಿ ಚನ್ನಬಸಪ್ಪ ವಕ್ಕಳದ, ಮೆರವಣಿಗೆ ಸಮಿತಿ ಅಧ್ಯಕ್ಷ ಅಖ್ತರಸಾಬ ಪಾಡಗುತ್ತಿ, ಸಮ್ಮೇಳನ ಸಹಕಾರ್ಯದರ್ಶಿ ಬಸವರಾಜ ಕೋಟಿ, ಜಿಲ್ಲಾ ಗೌರವಕಾರ್ಯದರ್ಶಿ ಎಸ್.ಬಿ.ಗೊಂಡಬಾಳ ಉಪಸ್ಥಿತರಿದ್ದರು. ತಾಲೂಕಾ ಕಾರ್ಯದರ್ಶಿ ಬಸವರಡ್ಡಿ ಆಡೂರ ನಿರೂಪಿಸಿ ವಂದಿಸಿದರು.
0 comments:
Post a Comment