ಬೆಂಗಳೂರು,ಅ.16: ಭೂಮಿ ಡಿನೋಟಿಫೈ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ತೀವ್ರ ಎದೆನೋವು, ಬೆನ್ನುನೋವು ಕಾಣಿಸಿ ಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ರವಿವಾರ ಮಧ್ಯರಾತ್ರಿ ಹೊತ್ತಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಅವರನ್ನು ವಿಶೇಷ ಭದ್ರತೆಯಲ್ಲಿ ಆಂಬ್ಯುಲೆನ್ಸ್ ವಾಹನದಲ್ಲಿ ಕರೆತಂದು ಆಸ್ಪತ್ರೆಯ ಮೂರನೆ ಮಹಡಿಯಲ್ಲಿನ ಕೊಠಡಿ ಸಂಖ್ಯೆ-304ರ ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ.ಐದು ಮಂದಿಯ ವೈದ್ಯರ ತಂಡ ಯಡಿಯೂರಪ್ಪರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಎದೆನೋವು, ಸಕ್ಕರೆ ಖಾಯಿಲೆ, ಮೂತ್ರಪಿಂಡ ಸಮಸ್ಯೆ ಮತ್ತು ತೀವ್ರ ರಕ್ತದೊತ್ತಡದಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.ಮೂತ್ರಪಿಂಡ ಸಮಸ್ಯೆ ಹಿನ್ನೆಲೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದ ನಂತರವಷ್ಟೆ ಯಡಿಯೂರಪ್ಪನವರ ಆರೋಗ್ಯದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯ. ಅಲ್ಲದೆ, ಅವರಿಗೆ ಎದೆನೋವು ಮತ್ತು ಸಕ್ಕರೆ ಖಾಯಿಲೆ ಗಂಭೀರವಾಗಿರುವ ಕಾರಣ ಎಚ್ಚರಿಕೆಯಿಂದ ಚಿಕಿತ್ಸೆ ನೀಡುವ ಅಗತ್ಯವಿದೆ.ನಾಳೆ(ಅ.17) ಯಡಿಯೂರಪ್ಪ ನವರಿಗೆ ಆಂಜಿಯೋಗ್ರಾಮ್ ಮಾಡಲಾಗುವುದು ಎಂದು ಮಂಜುನಾಥ್ ಇದೇ ಸಂದರ್ಭದಲ್ಲಿ ಹೇಳಿದರು.
ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಯೋಗಕ್ಷೇಮ ವಿಚಾರಿಸಲು ಮುಖ್ಯಮಂತ್ರಿ ಸದಾನಂದಗೌಡ ಸೇರಿದಂತೆ ಸಂಪುಟ ಸಚಿವರ ದಂಡು ಆಸ್ಪತ್ರೆಗೆ ಭೇಟಿ ನೀಡಿತು.ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರವಿವಾರ ಬೆಳಗಿನಜಾವ ಕೇಂದ್ರ ಕಾರಾಗೃಹದಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿ ಮಾಜಿ ಮುಖ್ಯಮಂತ್ರಿಯವರ ಆರೋಗ್ಯ ವಿಚಾರಿಸಲು ಸಿಎಂ ಸದಾನಂದಗೌಡ,ಸಚಿವರಾದ ಅಶೋಕ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಸಿ.ಸಿ.ಪಾಟೀಲ್, ಬಸವರಾಜ್ ಬೊಮ್ಮಾಯಿ, ರೇಣುಕಾಚಾರ್ಯ ಸೇರಿದಂತೆ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದರು.
ಅಲ್ಲದೆ,ಶಾಸಕರಾದ ಬೇಳೂರು ಗೋಪಾಲಕೃ, ಬಿ.ಪಿ.ಹರೀಶ್, ಹರತಾಳು ಹಾಲಪ್ಪ, ಜೀವರಾಜ್, ಎಸ್.ಆರ್.ವಿಶ್ವನಾಥ್, ಸುರೇಶ್‌ಗೌಡ,ಯಡಿಯೂರಪ್ಪನವರ ಆಪ್ತ ಸಹಾಯಕ ಸಿದ್ದಲಿಂಗಸ್ವಾಮಿ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪರ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿದ್ದು,ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ.ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವಂತೆ ಕಾಣುತ್ತದೆ ಎಂದರು.
ಭದ್ರತೆ ಪರಿಶೀಲಿಸಿದ ಮಿರ್ಜಿ: ಮಾಜಿ ಸಿಎಂ ಯಡಿಯೂರಪ್ಪ ನಗರದ ಜಯದೇವ ಹೃದ್ರೋಗಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಭದ್ರತೆ ಪರಿಶೀಲಿಸಲು ರವಿವಾರ ಬೆಳಗ್ಗೆಯೇ ಆಸ್ಪತ್ರೆಗೆ ಧಾವಿಸಿದರು.ಯಡಿಯೂರಪ್ಪರನ್ನು ಇರಿಸಲಾಗಿರುವ ಕೊಠಡಿ ಹಾಗೂ ಆಸ್ಪತ್ರೆಯ ಸುತ್ತ ಕೈಗೊಳ್ಳಲಾಗಿರುವ ಭದ್ರತೆಯನ್ನು ಪರಿಶೀಲಿಸಿ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಸಿಐಡಿ ವಿಭಾಗದ ಎಡಿಜಿಪಿ ಶಂಕರ್ ಬಿದರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಯಡ್ಡಿ ನಿವಾಸದಲ್ಲಿ ನೀರವ ಮೌನ: ಸದಾ ಚುಟುವಟಿಕೆಗಳಿಂದ ಗಿಜಿಗುಡುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲೀಗ ನೀರವ ಮೌನ ಅವರಿಸಿದೆ.ಅಧಿಕಾರ ಕಳೆದುಕೊಂಡರೂ ಸರಕಾರದ ಮೇಲೆ ಹಿಡಿತ ಸಾಧಿಸಿದ್ದ ಯಡಿಯೂರಪ್ಪ,ತಮ್ಮ ಹಿಂಬಾಲಕರನ್ನಿಟ್ಟುಕೊಂಡು ತಿರುಗಾಡುತ್ತಿದ್ದರು.ಆದರೆ, ಬಂಧನದ ಹಿನ್ನೆಲೆಯಲ್ಲಿ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸ ಜನರಿಲ್ಲದೆ ಬಿಕೋ ಎನ್ನುತ್ತಿದೆ.
0 comments:
Post a Comment