ಬೆಂಗಳೂರು, ಅ.10: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಉಂಟಾಗಿರುವುದರಿಂದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಂದು ಗಂಟೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 8ರಿಂದ 9 ಗಂಟೆಗಳ ಕಾಲ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲು ಸರಕಾರ ನಿರ್ಧರಿಸಿದೆ. ನಗರದ ಶಕ್ತಿ ಭವನದಲ್ಲಿಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರ ಅಧ್ಯಕ್ಷತೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಇತರ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶೋಭಾ, ಇಂದಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು. ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಎಲ್ಲ ಕಡೆಗಳಲ್ಲಿ ಸಂಜೆ 1 ಗಂಟೆ ವಿದ್ಯುತ್ ಕಡಿತಗೊಳಿಸಲಾಗುವುದು. ಸಂಜೆ 6ರಿಂದ 10ರೊಳಗೆ ಒಂದು ತಾಸು ವಿದ್ಯುತ್ ಕಡಿತಗೊಳ್ಳಲಿದೆ. ಈ ಸಂಬಂಧ ಬೆಸ್ಕಾಂ, ಎಸ್ಕಾಂ, ಮೆಸ್ಕಾಂನವರು ಬೇರೆ ಬೇರೆ ಸಮಯವನ್ನು ನಿಗದಿಗೊಳಿಸಲಿದ್ದಾರೆ ಎಂದವರು ತಿಳಿಸಿದರು. ರಾಜ್ಯಕ್ಕೆ ಬರಬೇಕಾಗಿರುವ ಕಲ್ಲಿದ್ದಲು ಕೊರತೆಯಿಂದಾಗಿ ರಾಯಚೂರಿನ 4 ಘಟಕಗಳು ನಿಲುಗಡೆ ಆಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಮಸ್ಯೆ ಇನ್ನೂ ಹೆಚ್ಚಾಗಿದೆ ಎಂದು ಶೋಭಾ ಹೇಳಿದರು.
ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಂದು ಗಂಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 8ರಿಂದ 9 ತಾಸು ಲೋಡ್ ಶೆಡ್ಡಿಂಗ್ ಮಾಡಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದರು. ರಾಜ್ಯದಲ್ಲಿ ಸರಾಸರಿ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಿದ್ದು, ಉತ್ಪಾದನಾ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದ ಸಚಿವೆ, ಇಂತಹ ಸಂದರ್ಭದಲ್ಲಿ ಆರ್‌ಟಿಪಿಸಿಯ ನಾಲ್ಕು ಘಟಕಗಳು ಕಲ್ಲಿದ್ದಲು ಕೊರತೆ ಯಿಂದಾಗಿ ವಿದ್ಯುತ್ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಿವೆ. ಇದರಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದರು.
ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುವುದಿಲ್ಲ. ನಗರ ಪ್ರದೇಶಗಳಲ್ಲಿ ಒಂದು ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಇಲ್ಲಿಯ ವರೆಗೆ ಆರು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಇನ್ನು ಮುಂದೆ ಕೇವಲ ಮೂರು ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಕೇವಲ ಸಿಂಗಲ್ ಫೇಸ್ ವಿದ್ಯುತ್ತನ್ನು ಮಾತ್ರ ನೀಡಲಾಗುವುದು ಎಂದು ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.
ತಿಂಗಳಂತ್ಯದೊಳಗೆ ವಿದ್ಯುತ್ ಸಮಸ್ಯೆ ಪರಿಹಾರ
ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ಈ ತಿಂಗಳ ಕೊನೆಯೊಳಗೆ ಪರಿಹರಿಸಲಾಗುವುದು ಎಂದ ಶೋಭಾ ಕರಂದ್ಲಾಜೆ, ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುವುದು. ಛತ್ತೀಸ್‌ಗಢದಿಂದ 200 ಮೆಗಾವಾಟ್ ವಿದ್ಯುತ್ತನ್ನು ಖರೀದಿಸಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಮತ್ತೆ ಹೆಚ್ಚುವರಿಯಾಗಿ 250 ಮೆಗಾ ವಾಟ್ ವಿದ್ಯುತ್ ಖರೀದಿಸಲಾಗುವುದು ಎಂದರು.ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಉತ್ಪಾದಿಸಲಾಗುವ ವಿದ್ಯುತನ್ನು ಖರೀದಿಸಲು ಸರಕಾರ ನಿರ್ಧರಿಸಿದ್ದು, ಜೊತೆಗೆ ಹೊರ ರಾಜ್ಯ ಗಳಿಂದಲೂ ವಿದ್ಯುತನ್ನು ಖರೀದಿಸಲಾಗುವುದು ಎಂದರು.
ಆಂಧ್ರ ಪ್ರದೇಶದ ತೆಲಂಗಾಣದಲ್ಲಿ ನಡೆಯುತ್ತಿರುವ ಹೋರಾಟದಿಂದಾಗಿ ದಕ್ಷಿಣದ ಎಲ್ಲ ರಾಜ್ಯಗಳಲ್ಲಿಯೂ ಕಲ್ಲಿದ್ದಲು ಸಮಸ್ಯೆ ಉಂಟಾಗಿದೆ. ಕಲ್ಲಿದ್ದಲು ಪೂರೈಕೆಗಾಗಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡುವಂತೆ ಕೇದಂ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸಚಿವೆ ತಿಳಿಸಿದರು
0 comments:
Post a Comment