ಬೆಂಗಳೂರು, ಅ.27: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಹೆಸರಿಸ ಲಾಗಿರುವ 700ಕ್ಕೂ ಹೆಚ್ಚು ಅಧಿಕಾರಿಗಳ ಭವಿಷ್ಯ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ. ಅಕ್ರಮ ಗಣಿಗಾರಿಕೆಯ ವರದಿಯು ಸರಕಾರಕ್ಕೆ ಸಲ್ಲಿಕೆಯಾಗಿ ಗುರುವಾರಕ್ಕೆ ಮೂರು ತಿಂಗಳಾಯಿತು. ಆದುದರಿಂದ, ಈ ಅವಧಿಯಲ್ಲಿ ಸರಕಾರ ವರದಿಯ ಜಾರಿಯ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಲೋಕಾಯುಕ್ತ ಸಂಸ್ಥೆಗೆ ಉತ್ತರ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದು, ಸರಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ರಾಜ್ಯದ 700ಕ್ಕೂ ಹೆಚ್ಚು ಅಧಿಕಾರಿಗಳು ಕಾನೂನು ಕ್ರಮ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಗಣಿ, ಅರಣ್ಯ, ಕಂದಾಯ ಹಾಗೂ ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಉನ್ನತ ಸ್ತರದಲ್ಲಿರುವ ಐಎಎಸ್, ಐಪಿಎಸ್ ಸೇರಿದಂತೆ 787 ಅಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ವಿವಿಧ ಹಂತಗಳಲ್ಲಿ ಸಾಥ್ ನೀಡಿದ್ದಾರೆ ಎಂದು ಕಳೆದ ಜುಲೈ 27ರಂದು ಸರಕಾರಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಲೋಕಾಯುಕ್ತರು ನಮೂದಿಸಿದ್ದಾರೆ.
ಲೋಕಾಯುಕ್ತರ ವರದಿ ಸಲ್ಲಿಕೆಯಾದ ನಂತರ ರಾಜ್ಯ ರಾಜಕಾರಣದಲ್ಲಿ ಉಂಟಾದ ಬೆಳವಣಿಗೆಯ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜುಲೈ 31ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಅನಂತರ, ಆಗಸ್ಟ್ 4ರಂದು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಲೋಕಾಯುಕ್ತರ ವರದಿಯನ್ನು ಅಧ್ಯಯನ ಮಾಡಿ, ಅದರಲ್ಲಿ ಹೆಸರಿಸಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಲಾಗಿರುವ ಶಿಫಾರಸುಗಳನ್ನು ಪರಾಮರ್ಶಿಸಿ ವರದಿ ನೀಡುವಂತೆ ಸೂಚಿಸಿದ್ದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ನೇತೃತ್ವದ ಸಮಿತಿಯು ಲೋಕಾಯುಕ್ತರ ವರದಿಯನ್ನು ಪರಾಮರ್ಶಿಸಿ ಅ.24ರಂದು 316 ಪುಟಗಳ ತನ್ನ ವರದಿಯನ್ನು ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್‌ಗೆ ಹಸ್ತಾಂತರಿಸಿದೆ. ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯ ಕುರಿತು ಚರ್ಚೆ ನಡೆಸಿ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರಕಾರ ನಿರ್ಧಾರ ಕೈಗೊಳ್ಳಲಿದೆ. ಸಚಿವ ಸಂಪುಟವು ಕೆ.ಜೈರಾಜ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಹೆಸರಿಸಲಾಗಿರುವ ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ಮಾಡಿರುವ ಇನ್ನಿತರ ಶಿಫಾರಸುಗಳನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕೆ.ಜೈರಾಜ್ ವರದಿಗೆ ಅಧಿಕಾರಿಗಳ ಅಪಸ್ವರ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯಕ್ತರ ವರದಿಯಲ್ಲಿ ಹೆಸರಿಸಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕೆ.ಜೈರಾಜ್ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿಯ ಕುರಿತು ಐಎಎಸ್ ಅಧಿಕಾರಿಗಳು ಅಪಸ್ವರ ಎತ್ತಿದ್ದಾರೆ. ಲೋಕಾಯಕ್ತರ ವರದಿಯಲ್ಲಿ ಹೆಸರಿಸಲಾಗಿರುವ ಐಎಎಸ್ ಅಧಿಕಾರಿ ರಾಮಪ್ರಸಾದ್‌ರನ್ನೇ ಸಮಿತಿಯ ಸಂಚಾಲಕರನ್ನಾಗಿ ನೇಮಕ ಮಾಡಿರುವ ಉದ್ದೇಶವೇನು? ಸರಕಾರಕ್ಕೆ ವರದಿ ಸಲ್ಲಿಸುವ ಮೊದಲು ಬಳ್ಳಾರಿಯ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿಲ್ಲ. ಸಮಿತಿಯು ವರದಿಯನ್ನು ಸಿದ್ಧಪಡಿಸುವಾಗ ಸಹಜ ನ್ಯಾಯವನ್ನು ಪಾಲಿಸಲಾಗಿಲ್ಲ. ಬಿಜೆಪಿ ಅಧಿಕಾರವಧಿಯ ಕೆಲವು ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ಈ ವಿಚಾರವನ್ನು ಸರಕಾರ ಹಾಗೂ ನ್ಯಾಯಾಂಗದ ಅಂಗಳದಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
- ಅಮ್ಜದ್‌ಖಾನ್ ಎಂ, ಕೌದೇನಹಳ್ಳಿ
0 comments:
Post a Comment