PLEASE LOGIN TO KANNADANET.COM FOR REGULAR NEWS-UPDATES


ಮತ್ತೆ ಬಂದಿದೆ ರಾಜ್ಯೋತ್ಸವ. ತಿಜೋರಿಯಲ್ಲಿ ಭದ್ರವಾಗಿಟ್ಟ ಕನ್ನಡ ಬಾವುಟಗಳನ್ನು ಹೊರ ತೆಗೆದು ಧೂಳು ಕೊಡವಿ ಕೊಳ್ಳುವುದಕ್ಕೊಂದು ದಿನ. ಕನ್ನಡ ಹೋರಾಟಗಾರರಿಗೆ, ಅನ್ಯ ಭಾಷಿಗರ ಮೇಲೆ ಸಿಟ್ಟು ಕಾರುವುದಕ್ಕೊಂದು ದಿನ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ, ಕನ್ನಡದ ಕುರಿತಂತೆ ಒತ್ತಾಯಗಳನ್ನು ಹೇರುವುದಕ್ಕೊಂದು ದಿನ. ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯುವುದಕ್ಕೆ, ತಾಯಿ ಭುವನೇಶ್ವರಿಯ ಮುಂದೆ ತೆಂಗಿನ ಕಾಯಿ ಒಡೆಯುವುದಕ್ಕೆ...ಹೀಗೆ ಕನ್ನಡ ಪ್ರೇಮವನ್ನು ಘೋಷಿಸಿಕೊಳ್ಳುವುದಕ್ಕಾಗಿಯೇ ಬರುತ್ತಿದೆ ನವೆಂಬರ್ 1. ಇನ್ಫೋಸಿಸ್‌ನ ನಾರಾಯಣಮೂರ್ತಿ ಕೂಡ ಅಂದು ಕಷ್ಟಪಟ್ಟು ನಾಲ್ಕು ಕನ್ನಡ ಮಾತುಗಳನ್ನು ಉದುರಿಸಿ, ತನ್ನ ಋಣವನ್ನು ತೀರಿಸುತ್ತಾರೆ. ರಾಜಕಾರಣಿಗಳಂತೂ ಕನ್ನಡಿಗರಿಗೆ ಭರವಸೆಗಳ ಸುರಿಮಳೆಯನ್ನೇ ಹರಿಯ ಬಿಡುತ್ತಾರೆ.ರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆಯೇ ನಿಜವಾದ ಕನ್ನಡಿಗರು, ಕನ್ನಡದಲ್ಲಿ ಸಾಧನೆ ಮಾಡಿದ ಸಾಧಕರು ತಲೆ ಮರೆಸಿ ಓಡಾಡುವುದಕ್ಕೆ ಶುರು ಮಾಡುತ್ತಾರೆ.
ಯಾಕೆಂದರೆ, ಸರಕಾರ ಎಲ್ಲಿ ತಮ್ಮನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಬಿಡುತ್ತದೆಯೋ ಎಂಬ ಭಯ ಅವರಿಗೆ. ಸಾಧಾರಣವಾಗಿ ರಾಜ್ಯೋತ್ಸವ ಹತ್ತಿರ ಬರುತ್ತಿದ್ದ ಹಾಗೆಯೇ ಈ ಪ್ರಶಸ್ತಿಯ ರಾಜಕಾರಣ ಆರಂಭವಾಗಿ ಬಿಡುತ್ತದೆ. ಉದ್ಯಮಿಗಳು, ಪಕ್ಷದ ಕಾರ್ಯಕರ್ತರು, ನಿಗಮ, ಮಂಡಳಿ ವಂಚಿತರು ಹೀಗೆ... ಎಲ್ಲರೂ ಈ ಪ್ರಶಸ್ತಿಗಾಗಿ ಸರದಿಯಲ್ಲಿ ನಿಲ್ಲ ತೊಡಗುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕಿದವರ ಸಂಖ್ಯೆ 10 ಸಾವಿರ ದಾಟಿರುತ್ತದೆ. ಇಷ್ಟು ಜನರಲ್ಲಿ, ಕನ್ನಡ ಅಕ್ಷರಮಾಲೆಯಲ್ಲಿ ಸ್ವರಗಳೆಷ್ಟು, ವ್ಯಂಜನಗಳೆಷ್ಟು ಎಂದು ಕೇಳಿದರೆ ಗೊತ್ತಿದ್ದವರು ಒಂದೋ ಎರಡೋ ಮಂದಿ ಮಾತ್ರ.
ಸರಕಾರಕ್ಕೂ ಅತೃಪ್ತರನ್ನು ತೃಪ್ತಿಗೊಳಿಸಲು ಇದೊಂದು ಅವಕಾಶ. ವಿವಿಧ ಶಾಸಕರು, ಮಂತ್ರಿಗಳ ಶಿಫಾರಸನ್ನು ಹೊಂದಿದವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ.ಅಂದ ಹಾಗೆ 90 ಮಂದಿ ಈ ಹಿನ್ನೆಲೆಯಿಂದ ಬಂದವರಾದರೂ, ಉಳಿದ ಹತ್ತು ಮಂದಿ ಕನ್ನಡದ ನಿಜವಾದ ಸಾಧಕರಾಗಿರುತ್ತಾರೆ. ಆದರೆ ಈ ಸಾಧಕರು ಮಾತ್ರ ಅಯೋಗ್ಯರ ಜೊತೆಗೆ ತಮ್ಮ ಪ್ರಶಸ್ತಿಯನ್ನು ಪಡೆದುಕೊಳ್ಳಬೇಕು. ಸರಕಾರ ಈ ಸಾಧಕರನ್ನು ಸುಮ್ಮನೆ ಹೆಸರಿಗಷ್ಟೇ ಗುರುತಿಸುತ್ತದೆ. ಅಂದರೆ, ಅಯೋಗ್ಯರನ್ನು ಯೋಗ್ಯರನ್ನಾಗಿ ಮಾಡುವುದಕ್ಕಾಗಿ ನಿಜವಾದ ಒಂದಿಷ್ಟು ಸಾಧಕರು ಬೇಕೇ ಬೇಕಲ್ಲ? ಆದುದರಿಂದ ಅಪ್ರಯತ್ನವಾಗಿ ಈ ಸಾಧಕರು ಪಟ್ಟಿಯಲ್ಲಿ ಜಾಗವನ್ನು ಪಡೆದುಕೊಳ್ಳ ಬೇಕಾಗುತ್ತದೆ.
ದುರದೃಷ್ಟವಶಾತ್ ನಿಜವಾದ ಸಾಧಕರು ಈ ಪ್ರಶಸ್ತಿಯಿಂದಾಗಿ ಇನ್ನಷ್ಟು ಅವಮಾನಿತರಾಗ ಬೇಕಾಗುತ್ತದೆ. ತಮ್ಮದೇ ಗಲ್ಲಿಯಲ್ಲಿ ಅದೇನೋ ರಾಜಕೀಯ ಮಾಡುತ್ತಾ ಓಡಾಡುತ್ತಿದ್ದ ವ್ಯಕ್ತಿಯ ಜೊತೆಗೆ ಹಿರಿಯ ಸಾಹಿತಿಯೊಬ್ಬರು ಪ್ರಶಸ್ತಿಯನ್ನು ಹಂಚಿಕೊಳ್ಳುವುದೆಂದರೆ ಆ ಸಾಹಿತಿಗೆ ಮಾಡುವ ಅವಮಾನವಲ್ಲವೇ? ರಾಜಕಾರಣಿಗಳ ಚೇಲಾಗಿರಿ ಮಾಡುತ್ತಿರುವ ಒಬ್ಬ ಸಾಮಾನ್ಯ ಪತ್ರಕರ್ತನೂ, ಪತ್ರಿಕೋದ್ಯಮದಲ್ಲಿ ನಿಜವಾದ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತನೂ ಒಂದೇ ವೇದಿಕೆಯಲ್ಲಿ, ಒಂದೇ ಪ್ರಶಸ್ತಿಯನ್ನು ಹಂಚಿಕೊಳ್ಳುವುದೆಂದರೆ, ನಿಜವಾದ ಸಾಧಕನಿಗೆ ಅದು ಅಗೌರವವಲ್ಲವೇ? ಆದುದರಿಂದಲೇ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗುತ್ತದೆ ಎನ್ನುವಾಗ ನಿಜವಾದ ಸಾಧಕರೆಲ್ಲ ತಲೆ ಮರೆಸಿ ಓಡಾಡುತ್ತಿದ್ದರು.
ಪ್ರಶಸ್ತಿ ಹಂಚಿಕೆ ಮುಗಿದ ನಂತರವೇ ಅವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗಾಗಿ ಒಂದು ಸಮಿತಿಯಿರುತ್ತದೆಯಾದರೂ, ಅದು ಹೆಸರಿಗಷ್ಟೇ. ಆ ಸಮಿತಿ ಸೂಚಿಸಿದ ವ್ಯಕ್ತಿ ಯಾವತ್ತೂ ಅಂತಿಮವಾಗುವುದಿಲ್ಲ. ಆ ಪಟ್ಟಿಯಲ್ಲಿ ಶಾಸಕರು, ಸಚಿವರು, ಮುಖ್ಯಮಂತ್ರಿ, ಅವರ ಸಂಬಂಧಿಕರು ಸಂಪೂರ್ಣ ಹಸ್ತಕ್ಷೇಪ ಮಾಡಿದ ಬಳಿಕ, ಹೆಸರುಗಳು ಘೋಷಣೆಯಾಗುತ್ತವೆ. ಇದು ಪ್ರತಿ ವರ್ಷ ನಡೆಯುತ್ತಿದ್ದ ಪದ್ಧತಿ. ಆದರೆ ಈ ಬಾರಿ ‘ಪ್ರಶಸ್ತಿ ಅರ್ಹರಿಗೆ ಮಾತ್ರ’ ಎಂದು ಘೋಷಣೆ ಮಾಡಿದ್ದಾರೆ ನೂತನ ಮುಖ್ಯಮಂತ್ರಿ ಸದಾನಂದ ಗೌಡ. ಬರೇ ಹೇಳಿಕೆ ನೀಡಿರುವುದಷ್ಟೇ ಅಲ್ಲ, ಈ ರಾಜ್ಯೋತ್ಸವ ಪ್ರಶಸ್ತಿಗೆ ಕೆಲವು ಮಾನದಂಡಗಳನ್ನೂ ಇಟ್ಟಿದ್ದಾರೆ.
ಅದರಲ್ಲಿ ಮುಖ್ಯವಾಗಿ, ಈ ಬಾರಿ ಕೇವಲ 50 ಮಂದಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದು ಕಾರ್ಯರೂಪಕ್ಕೆ ಬಂದರೆ, ಮುಖ್ಯಮಂತ್ರಿಯ ಅರ್ಧ ಕೆಲಸ ಪೂರ್ಣವಾದ ಹಾಗೆ. ಪ್ರಶಸ್ತಿ ನೂರರ ಗಡಿ ದಾಟಿದರೆ ತನ್ನಷ್ಟಕ್ಕೇ ಅದು ತನ್ನ ಗೌರವವನ್ನು, ಘನತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಶಿಫಾರಸು ಮಾಡಿದಂತೆ ಪ್ರಶಸ್ತಿ ಪಡೆಯುವವರ ಪಟ್ಟಿ ಬೆಳೆಯುತ್ತಾ ಹೋದರೆ ಸಾಧಕರಿಗೂ ಅವಮಾನ. ಈ ಹಿನ್ನೆಲೆಯಲ್ಲಿ ಅದೆಷ್ಟೇ ಒತ್ತಡ ಬಂದರೂ 50ರ ಗಡಿಯನ್ನು ದಾಟುವುದಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ಅವಕಾಶ ನೀಡಬಾರದು. 50 ವರ್ಷ ದಾಟಿದವರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು ಎನ್ನುವುದು ಇನ್ನೊಂದು ಮಾನದಂಡ.
ರಾಜ್ಯದಲ್ಲಿ 50 ವರ್ಷ ದಾಟಿದ ಅರ್ಹ ಸಾಧಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಸಾಧಕರನ್ನು ಬದಿಗೆ ತಳ್ಳಿ, ಅನರ್ಹ ಎಳೆ ತರುಣರು ಈ ಹಿಂದೆ ಸಾಕಷ್ಟು ಮಂದಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೈವಶ ಮಾಡಿಕೊಂಡಿದ್ದಾರೆ. ಹಿರಿಯ ಸಾಧಕ ಜೀವಗಳು ಇದರಿಂದ ಅದೆಷ್ಟು ನೊಂದಿರಬಹುದು? ಈ ಹಿನ್ನೆಲೆಯಲ್ಲಿ 50 ವರ್ಷ ಮೇಲ್ಪಟ್ಟ ಹಿರಿಯ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುವುದು ಶ್ಲಾಘನಾರ್ಹ. ಇದೇ ಸಂದರ್ಭದಲ್ಲಿ 50 ವರ್ಷವೇ ಪ್ರಶಸ್ತಿಗೆ ಅರ್ಹತೆಯೆಂದಾಗಬಾರದು. ಬದಲಿಗೆ 50 ವರ್ಷ ಮೇಲ್ಪಟ್ಟ ಸಾಧಕರಿಗೆ ಆದ್ಯತೆಯೆಂದಿದ್ದರೆ ಇನ್ನಷ್ಟು ಅರ್ಥಪೂರ್ಣ. ಯಾಕೆಂದರೆ ಈ ದೇಶದಲ್ಲಿ ಅದೆಷ್ಟೋ ತರುಣರು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರಿದ್ದಾರೆ.
ಪದ್ಮಶ್ರಿ, ಪದ್ಮ ಭೂಷಣವನ್ನು ಪಡೆದವರಿದ್ದಾರೆ. ಕೆಲವೊಮ್ಮೆ, ಸಣ್ಣ ವಯಸ್ಸಿನಲ್ಲಿ ಬಹಳಷ್ಟು ಸಾಧಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುವುದು ಅವರನ್ನು ಇನ್ನಷ್ಟು ದೊಡ್ಡ ಕಾರ್ಯಕ್ಕೆ ಪ್ರೇರೇಪಿಸಬಹುದು. ಆದುದರಿಂದ, ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ ಯುವಕರಿಗೆ ಪ್ರಶಸ್ತಿ ನೀಡಲು ಸಮಿತಿ ಯಾವ ಕಾರಣಕ್ಕೂ ಹಿಂಜರಿಯಬಾರದು. ಹಾಗೆಯೇ, 50 ವರ್ಷವಾಗುವುದೇ ಒಬ್ಬನ ಸಾಧನೆ ಎಂಬ ತಪ್ಪು ಕಲ್ಪನೆಗೂ ಒಳಗಾಗ ಬಾರದು. ಸರಕಾರ ಮಾಡಬೇಕಾದ ಮುಖ್ಯ ಕೆಲಸವೆಂದರೆ,ಅರ್ಹರ ಪಟ್ಟಿಯನ್ನು ತಯಾರಿಸುವ ಹೊಣೆಯನ್ನು ಆಯ್ಕೆ ಸಮಿತಿಗೆ ಬಿಟ್ಟು ಬಿಡುವುದು. ಒಮ್ಮೆ, ಸಮಿತಿಯಿಂದ ಆಯ್ಕೆಯಾದ ಪಟ್ಟಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಇರುವುದು.
ಇಷ್ಟಾದರೂ ಸಾಕು ರಾಜ್ಯೋತ್ಸವ ಪ್ರಶಸ್ತಿಯ ಘನತೆ ಉಳಿಯುತ್ತದೆ.ಈ ಬಾರಿಯ ಪ್ರಶಸ್ತಿ ಅರ್ಹ ಕನ್ನಡ ಸಾಧಕರಿಗೆ ಸಿಗಲಿ. ಈ ಮೂಲಕ ಕಳೆದುಕೊಂಡ ತನ್ನ ಗೌರವವನ್ನು ರಾಜ್ಯೋತ್ಸವ ಪ್ರಶಸ್ತಿಯು ಮತ್ತೆ ತನ್ನದಾಗಿಸಿಕೊಳ್ಳಲಿ. ಕನ್ನಡದ ಉಳಿವು, ಏಳಿಗೆಗೆ ಈ ಪ್ರಶಸ್ತಿ ಸ್ಫೂರ್ತಿಯಾಗಲಿ. - ವಾರ್ತಾಭಾರತಿ

Advertisement

0 comments:

Post a Comment

 
Top