ಕೊಪ್ಪಳ ಅ. : ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಂದ ಭತ್ತ, ಮೆಕ್ಕೆಜೋಳ ಮತ್ತು ಸಜ್ಜೆ ಖರೀದಿಸಲು ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
ಜಿಲ್ಲೆಯ ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದಲ್ಲಿ ಸಜ್ಜೆ ಮತ್ತು ಮೆಕ್ಕೆಜೋಳ ಖರೀದಿಕೇಂದ್ರ ಪ್ರಾರಂಭಿಸಲಾಗಿದೆ. ಅದೇ ರೀತಿ ಗಂಗಾವತಿ ಮತ್ತು ಕಾರಟಗಿಯ ಎಪಿಎಂಸಿ ಆವರಣದಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಬೆಂಬಲ ಬೆಲೆಯಲ್ಲಿ ಜಿಲ್ಲೆಯ ರೈತರಿಂದ ಉತ್ತಮ ಗುಣಮಟ್ಟದ (ಈಂಕಿ) ಬೆಳೆಯನ್ನು ಖರೀದಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ ರೂ. ೧೦೮೦ ಮತ್ತು ಗ್ರೇಡ್-ಎ ಭತ್ತ ರೂ. ೧೧೧೦, ಮೆಕ್ಕೆಜೋಳ- ರೂ. ೯೮೦, ಸಜ್ಜೆ- ರೂ. ೯೮೦ ರಂತೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುವುದು. ಈ ಸೌಲಭ್ಯ ಕಂದಾಯ ಇಲಾಖೆಯಿಂದ ದೃಢೀಕರಿಸಿದ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಇರುತ್ತದೆ. ಅಲ್ಲದೆ ಸೌಲಭ್ಯವನ್ನು ಪ್ರಸ್ತುತ ಜಾರಿಯಲ್ಲಿರುವ ಆರ್.ಟಿ.ಸಿ. ಪಹಣಿ ದೃಢೀಕರಣದೊಂದಿಗೆ ನೀಡುವ ರೈತರಿಗೆ ಮಾತ್ರ ನೀಡಲಾಗುವುದು. ಸಣ್ಣ ಮತ್ತು ಅತಿ ಸಣ್ಣ ರೈತರು ಗ್ರಾಮ ಲೆಕ್ಕಿಗರಿಂದ ಈ ವರ್ಷ ಬೆಳೆ ಬೆಳೆದ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಭಾರತ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಎಫ್.ಎ.ಕ್ಯೂ. ಗುಣಮಟ್ಟದ ಬಗ್ಗೆ ಕೃಷಿ ಇಲಾಖೆ, ಖರೀದಿ ಸಂಸ್ಥೆ ಅಧಿಕಾರಿಗಳು ರೈತರ ಧಾನ್ಯವನ್ನು ಪರಿಶೀಲಿಸಿ ದೃಢೀಕರಿಸಿದ ನಂತರ ಖರೀದಿಸಲಾಗುವುದು. ಹೆಚ್ಚಿನ ವಿವರಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕೊಪ್ಪಳ, ದೂರವಾಣಿ ಸಂ: ೨೨೧೩೪೦, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ, ಕೊಪ್ಪಳ- ೦೮೫೩೯- ೨೩೦೦೧೦, ಗಂಗಾವತಿ- ೦೮೫೩೩ ೨೩೦೨೭೪ ಕ್ಕೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment