ಕಲ್ಲಿದ್ದಲು ಖಾಲಿ, ಏಳನೇ ಘಟಕವೀಗ ದುರಸ್ತಿಯಲ್ಲಿ ; ವಿದ್ಯಾರ್ಥಿಗಳ ಓದಿನ ಮೇಲೆ ಕರಿನೆರಳು
ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಂಡಿರುವ ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ನಗರ ಪ್ರದೇಶ ಗಳಲ್ಲಿ ಎರಡು ಅಥವಾ ಮೂರು ಗಂಟೆ ಲೋಡ್ ಶೆಡ್ಡಿಂಗ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರು ಗಂಟೆ ಲೋಡ್ ಶೆಡ್ಡಿಂಗ್ ಮಾಡುವ ಸಂಭವ ಇದೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.
ಬೆಂಗಳೂರು ನಗರದಲ್ಲಿ ಎರಡು ಗಂಟೆ ಮಾತ್ರ ಲೋಡ್ ಶೆಡ್ಡಿಂಗ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ರಾಜ್ಯಕ್ಕೆ ಪ್ರತಿದಿನ ಸರಾಸರಿ 160 ದಶಲಕ್ಷ ಯೂನಿಟ್ ವಿದ್ಯುತ್ ಅಗತ್ಯವಿದೆ. ಆದರೆ ಶನಿವಾರದ ವೇಳೆಗೆ ರಾಜ್ಯದ ವಿದ್ಯುತ್ ಪೂರೈಕೆ ದಿನವೊಂದಕ್ಕೆ 136 ದಶಲಕ್ಷ ಯೂನಿಟ್ ಆಗಿತ್ತು.
`ಲೋಡ್‌ಶೆಡ್ಡಿಂಗ್ ಅನಿವಾರ್ಯ`: ತೀವ್ರವಾಗಿರುವ ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ. ಯಾವ ಪ್ರದೇಶದಲ್ಲಿ ಎಷ್ಟು ವಿದ್ಯುತ್ ಕಡಿತ ಮಾಡಲಾಗುವುದು ಎಂಬ ವಿಷಯವನ್ನು ಸೋಮವಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತಿಳಿಸಿದರು.
`ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ತೆಲಂಗಾಣ ಹೋರಾಟದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿದೆ.
ಲೋಡ್ ಶೆಡ್ಡಿಂಗ್ ಅನಿವಾರ್ಯ. ಯಾರೋ ಮಾಡಿದ ಪಾಪದ ಕೂಪದಲ್ಲಿ ನಾವು ಬಿದ್ದಿದ್ದೇವೆ, ಅದರಿಂದ ಹೊರಬರುವ ಯತ್ನ ಮಾಡುತ್ತಿದ್ದೇವೆ` ಎಂದು ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು ಹೇಳಿದರು.
ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರನ್ನು ರಾಜ್ಯದ ನಿಯೋಗ ಇದೇ 14 ರಂದು ನವದೆಹಲಿಯಲ್ಲಿ ಭೇಟಿ ಮಾಡಲಿದೆ. ರಾಜ್ಯಕ್ಕೆ ಪ್ರತಿನಿತ್ಯ ಹೆಚ್ಚುವರಿಯಾಗಿ 10 ಸಾವಿರ ಟನ್ ಕಲ್ಲಿದ್ದಲು ಪೂರೈಸುವಂತೆ ಅವರನ್ನು ಕೋರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಲ್ಲಿದ್ದಲು ಪೂರೈಕೆಯಲ್ಲಿ ಆಗಿರುವ ವ್ಯತ್ಯಯದ ಕಾರಣ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಎಂಟು ಘಟಕಗಳ ಪೈಕಿ ಕೇವಲ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕೆಲವೊಮ್ಮೆ ಕೇವಲ ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸ ಲಾಗುತ್ತಿದೆ ಎಂದು ಅವರು ತಿಳಿಸಿದರು.
ಈಶ್ವರಪ್ಪ ಒತ್ತಾಯ: ಕೇಂದ್ರದಲ್ಲಿ ಸಚಿವರಾಗಿರುವ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಮತ್ತಿತರರು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಮತ್ತು ಕೇಂದ್ರ ವಿದ್ಯುತ್ ಗ್ರಿಡ್‌ನಿಂದ ವಿದ್ಯುತ್ ನೀಡುವಂತೆ ಒತ್ತಡ ಹೇರಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
-ಅಂಧಾ ದರ್ಬಾರ್
ಮಿಕ್ಸರ್‌ನಿಂದ ಸಿಕ್ಸರ್‌ವರೆಗೆ ಎಲ್ಲದಕ್ಕೂ ವಿದ್ಯುತ್ ಬೇಕೇ ಬೇಕು. ಆದರೆ, ರಾಜ್ಯದಲ್ಲೀಗ ವಿದ್ಯುತ್ತಿನದ್ದೇ ಸಮಸ್ಯೆ. ಬೆಳಕು ನೀಡಬೇಕಾದ ಸರ್ಕಾರವೇ ಕಲ್ಲಿದ್ದಲು ಕೊರತೆ ನೀಗಿಸುವ ದಾರಿ ಕಾಣದೆ ಕತ್ತಲಿನ ಹಾದಿ ಹಿಡಿದಿದೆ. ಸದ್ಯಕ್ಕಂತೂ ಈ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸು ತ್ತಿಲ್ಲ. ಬದಲಾಗಿ, ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳೇಹೆಚ್ಚಾಗಿದೆ. ಕರೆಂಟ್ ಕಣ್ಣಾ ಮುಚ್ಚಾಲೆಯ ನಡುವೆ ಸೀಮೆ ಎಣ್ಣೆ, ಕ್ಯಾಂಡಲ್‌ಗಳ ಕೊರತೆಯೂ ರಾಜ್ಯವನ್ನು ಕತ್ತಲಿನಿಂದ ಕಗ್ಗತ್ತಲಿಗೆ ತಳ್ಳುತ್ತಿದೆ.
ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ಸಿಗದೇ ಇದ್ದರೂ ಶಾಕಿಂಗ್ ಸುದ್ದಿ. ಇಡೀ ರಾಜ್ಯ ಸೋಮವಾರದಿಂದ ಅಧಿಕೃತವಾಗಿ ಅಕ್ಷರಶಃ ಕತ್ತಲಲ್ಲಿ ಮುಳುಗಲಿದೆ.
ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ನಾಲ್ಕು ಗಂಟೆ, ಇತರೆ ನಗರ ಮತ್ತು ಪಟ್ಟಣಗಳಲ್ಲಿ ಆರು ಗಂಟೆ, ಗ್ರಾಮಾಂತರ ಪ್ರದೇಶಗಳಲ್ಲಿ ೮ ರಿಂದ ೧೦ ಗಂಟೆ ವಿದ್ಯುತ್ ಖೋತಾ ಆಗಲಿದೆ.
ಅಷ್ಟೇ ಅಲ್ಲ, ಕೃಷಿ ಪಂಪ್‌ಸೆಟ್‌ಗಳು ದಿನದ ನಾಲ್ಕು ಗಂಟೆ ಕಾರ್ಯನಿರ್ವಹಿಸುವುದೂ ದುಸ್ತರ ವಾಗಲಿದೆ.
ಈಗಾಗಲೇ ರಾಜ್ಯವನ್ನು ಬಾಧಿಸುತ್ತಿರುವ ವಿದ್ಯುತ್, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ತಂದೊಡ್ಡುವುದು ಖಚಿತ. ಕಲ್ಲಿದ್ದಲು ಕೊರತೆ ಕೇವಲ ರಾಜ್ಯವನ್ನು ಮಾತ್ರ ಸಂಕಷ್ಟಕ್ಕೆ ದೂಡಿಲ್ಲ. ಇಡೀ ದೇಶದಲ್ಲೇ ಕಲ್ಲಿದ್ದಲು ಸಮಸ್ಯೆ ತಲೆದೋರಿದ್ದು, ವಿದ್ಯುತ್ ಉತ್ಪಾದನೆ ಇನ್ನಷ್ಟು ಕಡಿಮೆ ಯಾಗಲಿದೆ. ಹಣ ಕೊಟ್ಟರೂ ವಿದ್ಯುತ್ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ.
ರಾಜ್ಯದ ಪ್ರತಿದಿನದ ವಿದ್ಯುತ್ ಬೇಡಿಕೆ ೧೬೦ ದಶಲಕ್ಷ ಯೂನಿಟ್ ತಲುಪಿದೆ. ಆದರೆ, ಪೂರೈಕೆ ಯಾಗುತ್ತಿರುವ ವಿದ್ಯುತ್ ಪ್ರಮಾಣ ಕೇವಲ ೧೩೬ ದಶಲಕ್ಷ ಯೂನಿಟ್ ಮಾತ್ರ. ಕಲ್ಲಿದ್ದಲು ಕೊರತೆ ದಿನಕಳೆದಂತೆ ತೀವ್ರಗೊಳ್ಳುತ್ತಿರುವುದರಿಂದ ಪೂರೈಕೆ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ.
ರಾಜ್ಯದಲ್ಲಿ ಒಟ್ಟಾರೆ ಉತ್ಪಾದನೆಯಾಗುತ್ತಿರುವ ವಿದ್ಯುತ್ ಪ್ರಮಾಣ ೭೬ ದಶಲಕ್ಷ ಯೂನಿಟ್ ಮಾತ್ರ. ಇದರಲ್ಲಿ ಜಲ ವಿದ್ಯುತ್ ಘಟಕಗಳಿಂದ ೫೦ ದಶಲಕ್ಷ ಯೂನಿಟ್ ಮತ್ತು ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ ೨೬.೨ ದಶಲಕ್ಷ ಯೂನಿಟ್ ವಿದ್ಯುತ್ ಸಿಗುತ್ತಿದೆ. ಉಳಿದ ವಿದ್ಯುತ್ತನ್ನು ಕೇಂದ್ರ ಗ್ರಿಡ್ ಮತ್ತು ಹೊರ ರಾಜ್ಯಗಳಿಂದ ಖರೀದಿಸಲಾಗುತ್ತಿದೆ.
ಸಮಸ್ಯೆಗೆ ಕಾರಣವೇನು? :ರಾಜ್ಯದ ಜಲ ವಿದ್ಯುತ್ ಘಟಕಗಳಲ್ಲಿ ಬೇಸಿಗೆಗೆ ಬೇಕಾದ ನೀರನ್ನು ಉಳಿಸಿಕೊಂಡು ಗರಿಷ್ಠ ಪ್ರಮಾಣದಲ್ಲಿ (೫೦ ದಶಲಕ್ಷ ಯೂನಿಟ್) ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆದರೂ ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಅರ್ಧದಷ್ಟು ಕಡಿಮೆಯಾಗಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. ಜತೆಗೆ ಕೇಂದ್ರ ಗ್ರಿಡ್‌ನಿಂದ ಪೂರೈಕೆಯಾಗಬೇಕಾದ ವಿದ್ಯುತ್‌ನಲ್ಲೂ ಕೊರತೆ ಕಂಡುಬಂದಿದೆ.
ರಾಜ್ಯದ ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ಘಟಕಗಳಿಂದ ಪ್ರತಿನಿತ್ಯ ೩೫ ದಶಲಕ್ಷ ಯೂನಿಟ್ ವಿದ್ಯುತ್ ಲಭ್ಯವಾಗಬೇಕಿತ್ತು. ಆದರೆ, ಕಲ್ಲಿದ್ದಲು ಸಮಸ್ಯೆಯಿಂದಾಗಿ ಈ ಎರಡೂ ಘಟಕಗಳಿಂದ ಒಟ್ಟಾರೆ ರಾಜ್ಯಕ್ಕೆ ಸಿಗುವ ವಿದ್ಯುತ್ ಕೇವಲ ೨೬.೨ ದಶಲಕ್ಷ ಯೂನಿಟ್ ಮಾತ್ರ. ಅಂದರೆ ಸುಮಾರು ೯ ದಶಲಕ್ಷ ಯೂನಿಟ್ ವಿದ್ಯುತ್ ಕೊರತೆಯಾಗಿದೆ.
ಅದೇ ರೀತಿ ಕೇಂದ್ರ ಗ್ರಿಡ್‌ನಿಂದ ರಾಜ್ಯಕ್ಕೆ ಪ್ರತಿನಿತ್ಯ ೧೦೦೦ ದಿಂದ ೧೨೦೦ ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗಬೇಕಿತ್ತು. ಆದರೆ, ರಾಷ್ಟ್ರೀಯ ಥರ್ಮಲ್ ಕಾರ್ಪೋರೇಷನ್‌ನಲ್ಲೂ ಕಲ್ಲಿದ್ದಲು ಕೊರತೆ ಉಂಟಾಗಿರುವುದರಿಂದ ಕೇಂದ್ರ ಗ್ರಿಡ್‌ನಿಂದ ಬರುವ ವಿದ್ಯುತ್ ಪ್ರಮಾಣ ೭೦೦ ಮೆಗಾವ್ಯಾಟ್‌ಗೆ ಇಳಿದಿದೆ. ಇಲ್ಲಿ ೩೦೦ರಿಂದ ೫೦೦ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಉಂಟಾಗಿದೆ.
ಇನ್ನು ಉಡುಪಿ ವಿದ್ಯುತ್ ಕಂಪನಿಯಿಂದ ಪ್ರತಿದಿನ ೫೦೦ ಮೆಗಾ ವ್ಯಾಟ್ ವಿದ್ಯುತ್ ರಾಜ್ಯಕ್ಕೆ ಸಿಗುತ್ತಿತ್ತು. ವಾರ್ಷಿಕ ನಿರ್ವಹಣೆಗೆಂದು ಈ ಘಟಕವೂ ಸ್ಥಗಿತಗೊಂಡು ಬರಬೇಕಿದ್ದ ೫೦೦ ಮೆಗಾ ವ್ಯಾಟ್ ಖೋತಾ ಆಗಿದೆ.
ಎಲ್ಲೂ ಇಲ್ಲ ಕಲ್ಲಿದ್ದಲು :ರಾಯಚೂರು ವಿದ್ಯುತ್ ಘಟಕಗಳಿಗೆ ಪೂರೈಕೆಯಾಗುವ ಕಲ್ಲಿದ್ದಲಿನಲ್ಲಿ ಶೇ. ೫೦ರಷ್ಟು ಆಂಧ್ರ ಪ್ರದೇಶದ ಸಿಂಗರೇಣಿಯಿಂದ ಬರುತ್ತದೆ. ಆದರೆ, ಈಗ ಅಲ್ಲಿಂದ ಬರುವ ಕಲ್ಲಿದ್ದಲು ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಮಹಾರಾಷ್ಟ್ರದ ಮಹಾನದಿಯಿಂದ ಪ್ರತಿನಿತ್ಯ ೨ ರಿಂದ ೩ ರೇಲ್ವೆ ರೇಕ್‌ಗಳಷ್ಟು ಕಲ್ಲಿದ್ದಲು ತರಿಸಿಕೊಳ್ಳಲಾಗುತ್ತಿದೆ.
ರಾಯಚೂರು ಶಾಖೋತ್ಪನ್ನ ಘಟಕದಲ್ಲಿ ಸಂಗ್ರಹಿಸಿಡಲಾಗಿದ್ದ ಕಲ್ಲಿದ್ದಲು ಖಾಲಿಯಾಗಿದೆ. ಹೀಗಾಗಿ ಪ್ರತಿನಿತ್ಯ ಬರುತ್ತಿರುವ ಕಲ್ಲಿದ್ದಲನ್ನು ಆಧರಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಲ್ಲಿದ್ದಲು ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯವಾದರೂ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತ ಗೊಳ್ಳುವ ಆತಂಕ ಎದುರಾಗಿದೆ.
ವಿದ್ಯುತ್ ಪೂರೈಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮುಂದೆ ಇರುವುದು ಎರಡು ದಾರಿ ಮಾತ್ರ. ಮೊದಲನೆಯದ್ದು ಹೊರ ರಾಜ್ಯಗಳಿಂದ ಅಗತ್ಯ ಕಲ್ಲಿದ್ದಲು ಖರೀದಿಸುವುದು. ಆದರೆ, ದೇಶಾ ದ್ಯಂತ ಕಲ್ಲಿದ್ದಲು ಕೊರತೆ ಇರುವುದರಿಂದ ಈ ದಾರಿ ಮುಚ್ಚಿದಂತಾಗಿದೆ.
ಇನ್ನು ಎರಡನೆಯದ್ದು ಅಧಿಕೃತ ಲೋಡ್‌ಶೆಡ್ಡಿಂಗ್. ಹೀಗೆ ಮಾಡಿದರೆ ನಿಗದಿಪಡಿಸಿದ ಸಮಯದಲ್ಲಿ ರಾಜ್ಯವನ್ನು ಕತ್ತಲಲ್ಲಿ ಮುಳುಗಿಸಿ ಉಳಿದ ಸ್ವಲ್ಪ ಅವಧಿಯಲ್ಲಾದರೂ ಬೆಳಕು ಕೊಡಬಹುದು. ಈಗ ಸದ್ಯಕ್ಕೆ ತೆರೆದಿರುವುದು ಇದೊಂದೇ ದಾರಿಯಾಗಿದ್ದರಿಂದ ಲೋಡ್‌ಶೆಡ್ಡಿಂಗ್ ಕುರಿತು ಅಧಿಕೃತವಾಗಿ ಘೋಷಣೆ ಮಾಡಲು ಸರ್ಕಾರ ಮುಂದಾಗಿದೆ.
ಲೋಡ್‌ಶೆಡ್ಡಿಂಗ್ ಕಡಿಮೆ ಮಾಡಿದರೆ ಅವ್ಯವಸ್ಥೆ: ರಾಜ್ಯದಲ್ಲಿ ಲಭ್ಯವಿರುವ ವಿದ್ಯುತ್ ಆಧರಿಸಿ ರಾಜ್ಯಾದ್ಯಂತ ಲೋಡ್‌ಶೆಡ್ಡಿಂಗ್‌ಗೆ ನಿಗದಿಪಡಿಸಬಹುದಾದ ಅವಧಿ ಹೀಗಿದೆ. ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ನಾಲ್ಕು ಗಂಟೆ, ಇತರೆ ನಗರ ಮತ್ತು ಪಟ್ಟಣಗಳಲ್ಲಿ ಆರು ಗಂಟೆ, ಗ್ರಾಮಾಂತರ ಪ್ರದೇಶಗಳಲ್ಲಿ ೮ ರಿಂದ ೧೦ ಗಂಟೆ ಲೋಡ್‌ಶೆಡ್ಡಿಂಗ್ ಮಾಡಬೇಕು. ಆದರೆ, ಇಷ್ಟೊಂದು ಅವಧಿ ಲೋಡ್‌ಶೆಡ್ಡಿಂಗ್ ಮಾಡಿದರೆ ರಾಜ್ಯದ ಜನರ ಕೋಪಕ್ಕೆ ತುತ್ತಾಗಬೇಕಾ ಗುತ್ತದೆ ಎಂಬ ಆತಂಕ ಸರ್ಕಾರದ್ದು.
ಹೀಗಾಗಿ ಲೋಡ್‌ಶೆಡಿಂಗ್ ಅವಧಿಯನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಬೆಂಗಳೂರಿನಲ್ಲಿ ೨ ಗಂಟೆ, ಇತರೆ ನಗರ ಮತ್ತು ಪಟ್ಟಣಗಳಲ್ಲಿ ೪ ಗಂಟೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ೮ ಗಂಟೆ ಲೋಡ್‌ಶೆಡ್ಡಿಂಗ್ ಘೋಷಣೆ ಮಾಡಬೇಕು ಎಂಬುದು ಸರ್ಕಾರದ ಆಲೋಚನೆ. ಹಾಗೇನಾದರೂ ಮಾಡಿದಲ್ಲಿ ಅಧಿಕೃತ ಲೋಡ್‌ಶೆಡ್ಡಿಂಗ್ ಜತೆಗೆ ಅನಧಿಕೃತಕ ವಾಗಿಯೂ ಲೋಡ್‌ಶೆಡ್ಡಿಂಗ್ ಮುಂದುವರಿಯಲಿದೆ. ಮೇಲಾಗಿ ಪೂರೈಕೆಯಲ್ಲಿ ಮತ್ತಷ್ಟು ಅವ್ಯವಸ್ಥೆ ಕಾಣಿಸಿಕೊಳ್ಳಲಿದೆ.
ಸದ್ಯಕ್ಕೆ ಸಮಸ್ಯೆ ಬಗೆಹರಿಯುವ ಲಕ್ಷಣವಿಲ್ಲ: ಕಲ್ಲಿದ್ದಲು ಸಮಸ್ಯೆ ಬಗೆಹರಿಯದೆ ವಿದ್ಯುತ್ ಸಮಸ್ಯೆ ನಿವಾರಣೆಯಾಗುವುದಿಲ್ಲ. ಆದರೆ, ಸದ್ಯಕ್ಕಂತೂ ಸಮಸ್ಯೆ ಇತ್ಯರ್ಥವಾಗುವ ಯಾವುದೇ ಲಕ್ಷಣ ಕಂಡುಬಂದಿಲ್ಲ. ಇದಕ್ಕೆ ಮೂಲ ಕಾರಣ ತೆಲಂಗಾಣ ಹೋರಾಟ. ರಾಜ್ಯಕ್ಕೆ ಕಲ್ಲಿದ್ದಲು ಪೂರೈಸುವ ಪ್ರಮುಖ ಕೇಂದ್ರ ಆಂಧ್ರಪ್ರದೇಶದ ಸಿಂಗರೇಣಿ. ಇದು ತೆಲಂಗಾಣ ಪ್ರಾಂತ್ಯದ ವ್ಯಾಪ್ತಿಗೆ ಬರುತ್ತದೆ.
ತೆಲಂಗಾಣವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಣೆ ಮಾಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಎಂದು ಘೋಷಣೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಇದರ ಪರಿಣಾಮ ತೆಲಂಗಾಣ ಹೋರಾಟ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಹೋರಾಟ ತಣ್ಣಗಾಗದೆ ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆ ಪುನಾರಂಭವಾಗುವುದಿಲ್ಲ.
ಬೇರೆ ರಾಜ್ಯಗಳಲ್ಲಿ ಕಲ್ಲಿದ್ದಲು ಇದೆಯಾದರೂ ಅದನ್ನು ಈಗಾಗಲೇ ಇತೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನು ಕೆಲವು ಕಲ್ಲಿದ್ದಲು ಗಣಿಗಳನ್ನು ಖಾಸಗಿ ವಿದ್ಯುತ್ ಕಂಪನಿಗಳಿಗೆ ನೀಡ ಲಾಗಿದೆ. ಹೀಗಾಗಿ ಅಲ್ಲಿಂದಲೂ ಕಲ್ಲಿದ್ದಲು ಬರುವ ಸೂಚನೆ ಇಲ್ಲ. ಇದರ ಪರಿಣಾಮ ರಾಜ್ಯದಲ್ಲಿ ಕಗ್ಗತ್ತಲ ಪರಿಸ್ಥಿತಿ ಮುಂದುವರಿಯಲಿದೆ.
ವಿದ್ಯಾರ್ಥಿಗಳ ಓದಿನ ಮೇಲೆ ಕರಿನೆರಳು
ಬೆಂಗಳೂರು: ವಿದ್ಯುತ್ ಲೋಡ್‌ಶೆಡ್ಡಿಂಗ್‌ನ ಪರಿಣಾಮ ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಕರಾಳ ಛಾಯೆ ಬೀರುತ್ತಿದೆ. ವಿದ್ಯಾರ್ಥಿಗಳು ಸೀಮೆಎಣ್ಣೆ ದೀಪದ, ಕ್ಯಾಂಡಲ್ ಬೆಳಕಿನಲ್ಲಿ ಪರೀಕ್ಷೆಗೆ ತಯಾರಾಗುವಂತಹ ವಾತಾವರಣ ಸೃಷ್ಟಿಯಾಗಿದೆ.
ಮುಂದಿನ ತಿಂಗಳಲ್ಲಿ ಪದವಿ ಸೇರಿದಂತೆ ವಿವಿಧ ಕೋರ್ಸ್‌ಗಳ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಇದಕ್ಕಾಗಿ ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ನಡೆಸಬೇಕಿದೆ. ಆದರೆ, ವಿದ್ಯುತ್ ಕೈ ಕೊಡುತ್ತಿರುವುದು ವಿದ್ಯಾರ್ಥಿಗಳನ್ನು ಧೃತಿಗೆಡಿಸಿದೆ.
ಸಾಲು ಸಾಲು ಪರೀಕ್ಷೆಗಳು :ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆಯಲಿರುವ ಪೂರ್ವ ಸಿದ್ಧತಾ ಪರೀಕ್ಷೆಗೆ ಮುಂಚಿತವಾಗಿ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಬೇಕಾಗಿದೆ. ಪೂರ್ವಭಾವಿ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಯಾರಿಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಉಂಟಾದರೆ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಪದವಿ ತರಗತಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಲಿವೆ. ಈಗಾಗಲೇ ಅನೇಕ ಕಾಲೇಜುಗಳಲ್ಲಿ ಪರೀಕ್ಷಾ ದಿನಾಂಕಗಳು ನಿಗದಿಗೊಂಡು, ವಿದ್ಯಾರ್ಥಿಗಳುಅಧ್ಯಯನದಲ್ಲಿ ತೊಡಗಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಸ್ಯೆ: ಲೋಡ್‌ಶೆಡ್ಡಿಂಗ್ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಗ್ರಾಮೀಣ ಪ್ರದೇಶ ದಲ್ಲಿ ಹೆಚ್ಚಿನ ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುವ ಸಂಭವ ಇರುವುದರಿಂದ ವಿದ್ಯಾರ್ಥಿಗಳು ಕತ್ತಲೆಯಲ್ಲಿ ಕಾಲ ಕಳೆಯಬೇಕಾಗುತ್ತದೆ. ನಗರ ಪ್ರದೇಶದ ವಿದ್ಯಾರ್ಥಿಗಳು ವಿದ್ಯುತ್ ಕೊರತೆ ಸರಿದೂಗಿಸಲು ಪರ್ಯಾಯ ಮಾರ್ಗಗಳ ಮೊರೆ ಹೋಗುತ್ತಾರೆ.
ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದೀಪಗಳ ಹೊರತಾಗಿ ಪರ್ಯಾಯ ಮಾರ್ಗವಿಲ್ಲ. ಆದ್ದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯ ಮೇಲೆ ವಿದ್ಯುತ್ ವ್ಯತ್ಯಯ ಕೆಟ್ಟ ಪರಿಣಾಮ ಬೀರಲಿದೆ.
ಅರ್ಧಕ್ಕೆ ನಿಂತಿವೆ ಅರ್ಧವಾರ್ಷಿಕ ಪರೀಕ್ಷೆ: ಪ.ಪೂ. ಕಾಲೇಜುಗಳಲ್ಲಿ ಸಹ ಅರ್ಧವಾರ್ಷಿಕ ಪರೀಕ್ಷೆ ಗಳು ನಡೆಯಬೇಕಾಗಿದೆ. ರಾಜ್ಯದ ಕೆಲವು ಕಾಲೇಜುಗಳಲ್ಲಿ ಮಾತ್ರ ಅರ್ಧವಾರ್ಷಿಕ ಪರೀಕ್ಷೆಗಳು ಜರುಗಿವೆ. ಉಳಿದೆಡೆ ಜರುಗಬೇಕಾಗಿರುವ ಪರೀಕ್ಷೆಗಳ ಮೇಲೆ ಲೋಡ್ ಶೆಡ್ಡಿಂಗ್ ಪರಿಣಾಮ ಬೀರಲಿದೆ.
0 comments:
Post a Comment