PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಅ.22: ಭೂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಕೃಷ್ಣಯ್ಯ ಶೆಟ್ಟಿಯ ನ್ಯಾಯಾಂಗ ಬಂಧನದ ಅವಧಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ನ.3ರವರೆಗೆ ವಿಸ್ತರಿಸಿ ಶನಿವಾರ ಆದೇಶ ಹೊರಡಿಸಿದೆ. ಸಿರಾಜಿನ್ ಬಾಷಾ ದಾಖಲಿ ಸಿದ್ದ ಎರಡು ಮತ್ತು ಮೂರನೆ ದೂರಿನ ಸಂಬಂಧ ಜಾಮೀನು ನಿರಾಕರಿಸಿ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿಯವರನ್ನು ಅ.22ರವರೆಗೆ ನ್ಯಾಯಾಂಗ ಬಂಧನಕ್ಕೆ ಒ್ಪಪಿಸಿದ್ದ ಲೋಕಾ ಯುಕ್ತ ವಿಶೇಷ ಕೋರ್ಟ್, ಉಳಿದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಶುಕ್ರವಾರಕ್ಕೆ ನ್ಯಾಯಾಂಗ ಬಂಧನದ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಕೋರ್ಟ್‌ಗೆ ಶನಿವಾರ ಹಾಜರು ಪಡಿಸಬೇಕಾಗಿತ್ತು. ಅನಾರೋಗ್ಯದ ಕಾರಣದಿಂದ ಯಡಿಯೂರಪ್ಪ ಗೈರಾದರೆ, ಕೃಷ್ಣಯ್ಯ ಶೆಟ್ಟಿಯನ್ನು ಜೈಲಧಿಕಾರಿಗಳು ಹಾಜರು ಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎನ್.ಕೆ. ಸುಧೀಂದ್ರ ರಾವ್ ಅವರು, ಅವರಿಬ್ಬರ ನ್ಯಾಯಾಂಗ ಬಂಧನದ ಅವಧಿಯನ್ನು ನ.3ರವರೆಗೆ ವಿಸ್ತರಿಸಿ, ವಿಚಾರಣೆ ಮುಂದೂಡಿದರು.
ನ್ಯಾಯಾಂಗ ಬಂಧನದ ಅವಧಿ ನ.3ವರೆಗೆ ವಿಸ್ತರಣೆ ಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಚಿತ್ತ ಈಗ ಹೈಕೋರ್ಟ್‌ನತ್ತ ನೆಟ್ಟಿದೆ. ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿಯ ಮಧ್ಯಾಂತರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಲಿದೆ. ಆದುದರಿಂದ ಯಡ್ಡಿಗೆ ದೀಪಾವಳಿಯ ಉಡುಗೊರೆಯಾಗಿ ಜಾಮೀನು ಲಭಿಸುತ್ತದೆಯೊ ಅಥವಾ ಇಲ್ಲವೆ ಎನ್ನುವುದು ಈಗ ಎಲ್ಲರಲ್ಲೂ ಕೆರಳಿರುವ ಕುತೂಹಲ. ಆಗೊಮ್ಮೆ ಮಧ್ಯಾಂತರ ಜಾಮೀನು ದೊರೆಯದಿದ್ದಲ್ಲಿ ಯಡಿಯೂರಪ್ಪ ಜೈಲಿನಲ್ಲಿಯೇ ದೀಪಾವಳಿ ಆಚರಿಸಬೇಕಾಗುತ್ತದೆ ಅಥವಾ ಜಾಮೀನು ಅರ್ಜಿಯೇ ವಜಾಗೊಂಡಲ್ಲಿ ನ.3ರವರಗೆ ಜೈಲುವಾಸವೇ ಗತಿಯಾಗಲಿದೆ.
ಯಡ್ಡಿ ಗೈರು, ಶೆಟ್ಟಿ ಹಾಜರು: ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ನಡೆಸಿದ ವಿಚಾರಣೆಗೆ ಕೃಷ್ಣಯ್ಯ ಶೆಟ್ಟಿ ಅವರನ್ನು ಜೈಲಧಿಕಾರಿಗಳು ಹಾಜರು ಪಡಿಸಿದರು. ಆದರೆ ಮಾಜಿ ಸಿಎಂ ಯಡಿಯೂರಪ್ಪ ಗೈರು ಹಾಜರಾಗಿದ್ದರು. ‘ಯಡಿಯೂರಪ್ಪ ವಿಪರೀತ ಜ್ವರದಿಂದ ಬಳಲುತ್ತಿದ್ದು, ತೀವ್ರ ಆಯಾಸಗೊಂಡಿದ್ದಾರೆ. ಆದುದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಲಿಲ್ಲ’, ಆದುದರಿಂದ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು’ ಎಂದು ಕೋರಿ ಜೈಲಧಿಕಾರಿಗಳು ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದರು. ಆ ಮನವಿಯನ್ನು ಕೋರ್ಟ್ ಮಾನ್ಯ ಮಾಡಿತು.
ಕೋರ್ಟ್ ಸುಪರ್ದಿಗೆ ಪಾಸ್‌ಪೋರ್ಟ್: ಸಿರಾಜಿನ್ ಬಾಷಾರ 2 ಮತ್ತು 3ನೆ ದೂರಿನ ಮೊದಲ ಆರೋಪಿ ಯಡಿಯೂರಪ್ಪರನ್ನು ಹೊರತುಪಡಿಸಿ, ಉಳಿದ 24ಮಂದಿ ಸಹ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು. ಯಡಿಯೂರಪ್ಪರ ಪುತ್ರರಾದ ಬಿ.ವೈ.ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಸಹ ಆರೋಪಿಗಳಾದ ಉಪೆೇಂದ್ರ, ಪ್ರವೀಣ್ ಚಂದ್ರ ಮತ್ತು ನಮ್ರತಾ ಶಿಲ್ಪಿ ಹಾಜರಾಗಿ ಷರತ್ತಿನನ್ವಯ ತಮ್ಮ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಿದರು. ಶಾಸಕ ಹೇಮಚಂದ್ರ ಸಾಗರ್ ಕೂಡ ವಿಚಾರಣೆಗೆ ಹಾಜರಿದ್ದರು.
ತಮ್ಮ ಮಾಲಕತ್ವದ ಧವಳಗಿರಿ ಪ್ರಾಪರ್ಟಿಸ್ ಮತ್ತು ಭಗತ್ ಹೋಮ್ಸ್ ಸಂಸ್ಥೆಗಳ ಹಣಕಾಸಿನ ವ್ಯವಹಾರಗಳ ಕುರಿತ, ಮತ್ತವರ ಮೂರು ವರ್ಷಗಳ ಬ್ಯಾಂಕ್ ವಹಿವಾಟುಗಳ ಕುರಿತ ಧೃಢೀಕೃತ ದಾಖಲೆಗಳು ಸಲ್ಲಿಸಬೇಕೆಂದು ರಾಘವೇಂದ್ರ, ವಿಜಯೇಂದ್ರ ಸೋಹನ್ ಕುಮಾರ್‌ಗೆ ಕೋರ್ಟ್ ಕಳೆದ ಬಾರಿ ಷರತ್ತು ವಿಧಿಸಿತ್ತು. ಆ ಷರತ್ತಿಗೆ ಹೈಕೋರ್ಟ್ ಎರಡು ವಾರಗಳ ಕಾಲ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಅವರು ಯಾವುದೆ ದಾಖಲೆಗಳನ್ನು ಒದಗಿಸಲಿಲ್ಲ. ಆ ಸಂಬಂಧ ಹೈಕೋರ್ಟ್‌ನ ಆದೇಶ ಪ್ರತಿಯನ್ನು ವಕೀಲ ರವಿ ಬಿ.ನಾಯಕ್ ಹಾಜರುಪಡಿಸಿದರು

Advertisement

0 comments:

Post a Comment

 
Top