PLEASE LOGIN TO KANNADANET.COM FOR REGULAR NEWS-UPDATES

ಐವರು ನೂತನ ಸಚಿವರ ಪ್ರಮಾಣ - ಮೂವರು ಹೊಸಬರು, ಇಬ್ಬರು ಹಳಬರಿಗೆ ಸ್ಥಾನ - ಜಾರಕಿಹೊಳಿ, ಅಸ್ನೋಟಿಕರ್, ರಾಜೂ, ಯೋಗೇಶ್ವರ್, ವರ್ತೂರ್‌ರಿಗೆ ಮಂತ್ರಿಗಿರಿ - ರೆಡ್ಡಿ ಸಹೋದರರು ಸೇರಿದಂತೆ ಹಲವರ ಗೈರು -

ಬೆಂಗಳೂರು. ಆ.11: ಸಚಿವ ಸ್ಥಾನಕ್ಕಾಗಿ ಪಕ್ಷದೊಳಗೆ ತೀವ್ರ ಪೈಪೋಟಿ, ಲಾಬಿ, ಒತ್ತಡ ತಂತ್ರಗಾರಿಕೆ ನಡೆಯುತ್ತಿರುವ ಮಧ್ಯೆ ಗುರುವಾರ ಸಂಜೆ ಎರಡನೆ ಹಂತದ ಸಂಪುಟ ವಿಸ್ತರಣೆ ಕಾರ್ಯ ನೆರವೇರಿಸಿರುವ ಬಿಜೆಪಿ ಸರಕಾರ, ಮತ್ತೆ ಐದು ಮಂದಿ ನೂತನ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ. ಇದರ ಜೊತೆಗೆ ವಲಸಿಗರಿಗೆ ಆದ್ಯತೆ ನೀಡಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶ ಭುಗಿಲೆದ್ದಿದೆ ರಾಜಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ 5:30ಕ್ಕೆ ನಡೆದ ಸರಳ ಸಮಾರಂಭದಲ್ಲಿ ಐದು ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣದ ಸುರಪುರ ಕ್ಷೇತ್ರದ ಶಾಸಕ ರಾಜೂ ಗೌಡ, ಚನ್ನಪಟ್ಟಣ ಕ್ಷೇತ್ರದ ಸಿ.ಪಿ. ಯೋಗೇ ಶ್ವರ್, ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹಾಗೂ ಜಗದೀಶ್ ಶೆಟ್ಟರ್ ಬಣದ ಅರಬಾವಿ ಕ್ಷೇತ್ರದ ಬಾಲಚಂದ್ರ ಜಾರಕಿಹೊಳಿ ಮತ್ತು ಕಾರವಾರದ ಶಾಸಕ ಆನಂದ ಅಸ್ನೋಟಿಕರ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಯಡಿಯೂರಪ್ಪ ಬಣದ ಮೂವರಿಗೆ ಹಾಗೂ ಶೆಟ್ಟರ್ ಬಣದ ಇಬ್ಬರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸೋಮವಾರ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 21 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಮತ್ತೆ 5 ಮಂದಿ ಸಂಪುಟಕ್ಕೆ ಸೇರಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ 27 ಮಂದಿ ಸಚಿವರ ಸಂಪುಟ ಅಸ್ತಿತ್ವಕ್ಕೆ ಬಂದಂತಾಗಿದೆ.

Advertisement

0 comments:

Post a Comment

 
Top