PLEASE LOGIN TO KANNADANET.COM FOR REGULAR NEWS-UPDATES


ಚಿತ್ರದುರ್ಗ/ಬೆಂಗಳೂರು, ಆ. 11: ಚಿತ್ರದುರ್ಗದ ಮುರುಘಾ ಮಠದಿಂದ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ‘ಬಸವಶ್ರೀ ಪ್ರಶಸ್ತಿ’ಯನ್ನು ಶ್ರೀಲಂಕಾದ ಹಿರಿಯ ಗಾಂಧಿವಾದಿ, ಶ್ರಮದಾನ ಚಳವಳಿಯ ನೇತಾರ, ಶಾಂತಿದೂತ ಡಾ.ಎ.ಟಿ. ಆರ್ಯರತ್ನೆಯವರಿಗೆ ನೀಡಿ ಗೌರವಿಸಲಾಗುವುದು ಎಂದು ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಪ್ರಕಟಿಸಿದ್ದಾರೆ. ಗುರುವಾರ ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ‘ಬಸವಶ್ರೀ ಪ್ರಶಸ್ತಿ’ಯು 3 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ವಿವರ ನೀಡಿದರು.
ಡಾ.ಅಹಂಮಗೆ ತೋಡರ ಆರ್ಯರತ್ನೆ, ಶ್ರೀಲಂಕಾದ ಗಲ್ಲೆ ಜಿಲ್ಲೆಯ ಉನವತೊನೆಯಲ್ಲಿ 1931ರಲ್ಲಿ ಜನಿಸಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿ ಶ್ರೀಲಂಕಾ ಮತ್ತು ಫಿಲಿಪ್ಪೀನ್ಸ್ ವಿವಿಗಳಿಂದ ಡಾಕ್ಟರೇಟ್ ಪದವಿಗಳನ್ನು ಪಡೆದಿರುತ್ತಾರೆ. ಹಲವಾರು ಕೃತಿಗಳನ್ನು ರಚಿಸಿರುವ ಇವರಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗುತ್ತಿದೆಯೆಂದು ಮುರುಘರಾಜೇಂದ್ರ ಶಿವಮೂರ್ತಿ ಶರಣರು ತಿಳಿಸಿದರು.
ಆ.15ಕ್ಕೆ ಪ್ರದಾನ: ಬಸವಶ್ರೀ ಪ್ರಶಸ್ತಿಯನ್ನು ಆ.15ರಂದು ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಪ್ರದಾನ ಮಾಡಲಿದ್ದಾರೆ ಎಂದು ಮುರುಘಾ ಶ್ರೀಗಳು ಮಾಹಿತಿ ನೀಡಿದರು. ಮುರುಘಾ ಮಠದಿಂದ 1997ರಿಂದ ಆರಂಭಿಸಲಾಗಿರುವ ಪ್ರತಿಷ್ಠಿತ ‘ಬಸವಶ್ರೀ ಪ್ರಶಸ್ತಿ’ಯನ್ನು ಮೊದಲಿಗೆ ಬೆಲ್ದಾಳ್ ಶರಣರು, ಸಮಾಜ ಸೇವಾಕರ್ತ ಅಣ್ಣಾ ಹಝಾರೆ, ಹೋರಾಟಗಾರ್ತಿ ಮೇಧಾಪಾಟ್ಕರ್, ಬೌದ್ದದಮ್ಮ ಗುರು ದಲಾಯಿ ಲಾಮಾ, ಕ್ರಾಂತಿಕಾರಿ ಕವಿ, ಗಾಯಕ ಗದ್ದರ್, ವಂದನಶಿವಾ, ಸಹಜಕೃಷಿ ಹರಿಕಾರ ಸುಭಾಷ್ ಪಾಳೇಕಾರ್, ನಟಿ ಶಬನಾ ಆಝ್ಮಿ, ಸ್ವಾಮಿ ಅಗ್ನಿವೇಶ್, ಡಾ.ಕಿರಣ್‌ಬೇಡಿ, ಪಿ.ಟಿ. ಉಷಾ ಸೇರಿದಂತೆ ಮತ್ತಿತರರಿಗೆ ನೀಡಿ ಗೌರವಿಸಲಾಗಿದೆ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್. ಎಚ್.ಪಟೇಲ್, ಕೆ.ವಿ.ಪ್ರಭಾಕರ್,ಆಡಳಿತಾಧಿಕಾರಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಚಿತ್ರಶೇಖರ್, ಕಾಲೇಜಿನ ಡಾ.ಮುರುಳೀಧರ್ ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

0 comments:

Post a Comment

 
Top