ಮೇ ಒಂದು
ಅದು ಇಂದು
ನನ್ನೆನಾ ಅರಿವ ದಿನವಿಂದು ಅರೇ ಮರೆತಿದ್ದೆ
ಕಾರ್ಮಿಕನು ನಾನೆಂದು, ನೀ ಮಾಡು ಕರ್ಮ
ಫಲ ನೀಡುವೆ ನಾನೆಂದು
ಸಾಯಲು ಬಿಡದೇ
ಬದುಕಲು ಸಾಕಾಗದಂತೆ
ಎಂದೂ ತುಂಬದ ಹೊಟ್ಟೆ ನೀಡಿರುವೆ
ಪಡೆದು ಬಂದುದಕ್ಕಿಂತ
ಏರಿ ಪಡೆಯುವದೇ ಹೆಚ್ಚೆಂಬ ಭ್ರಮೆಯಲಿ
ಅನವರತ ಹುಚ್ಚು ಪ್ರಯತ್ನದ ಕರ್ಮ
ಮುಕ್ಕಾಲು ಪಾಲು ಕಸಿದು ತಿಂದು
ನಮ್ಮನ್ನೇ ಪೋಷಿಸುವರು ತಾವೆಂದು
ಅವಿರತ ಶೋಷಿಸುವವರದ್ದೊಂದು ಮರ್ಮ
ನೆಚ್ಚಿನವರ ಮೆಚ್ಚಿಸಲು
ಹಗಲಿರುಳು ಶ್ರಮಿಸುತಾ
ನಿತ್ರಾಣನಾಗಿ ಮಲಗಿದಾಗ
ನಮ್ಮವರೇ ಅನ್ನುವರು
ಅದು ಅವನು ಮಾಡಿದ ಕರ್ಮ
ಪ್ರತಿ ವರುಷ ಹೊಸ ಹರುಷದಲಿ
ಹೊಟ್ಟೆ ಬಾಕರೊಂದಿಗೆ ಹಸಿವಿನಿಂದ
ಕಂಗೆಟ್ಟ ನಾವು ಧ್ವನಿಗೂಡಿಸಿ
ನಮಗೇ ನಾವು ಜಯಕಾರ ಹಾಕಿಕೊಂಡು
ಮನೆಗೆ ಹಿಂದಿರುಗಿದಾಗ ಒಲೆಯ ಮೇಲೆ
ಬೆಕ್ಕು ಮಲಗಿರಲಿಲ್ಲವೇ ಅಂದು
ಮೇ ಒಂದು !
- ಬಾಬುಸಾಬ ಬಿಸರಳ್ಳಿ
Home
»
»Unlabelled
» ಮೇ ಒಂದು
Subscribe to:
Post Comments (Atom)
meaningfull may day poem
ReplyDelete