ಇದು
ಕರ್ತಾರನ ಕಮ್ಮಟ
ಇವನ ತುತ್ತೀಗ
ಅವನದಾಗುವ ಹೊತ್ತು
ಬದನೆ, ಕುಂಬಳ-ಗಿಂಬಳ
ಕಹಿ ಹಾಗಲಿಗೂ ಹಿಂಗಲಿಲ್ಲ
ಮೂಗು,ಕಣ್ಣು,ಬಾ ಮೂಡಿ
ಮತ್ತದೇ ಹಸಿವಿನದೇ ಗ್ಯಾನ
ಬೆವರು ಸುರಿಸದೇ ನಿಗಟಿದ್ದು
ದಕ್ಕುವದಾದರೂ ಹೇಗೆ..?
ಅವನಿಗೋ ಹಿಕಮತ್ತಿನ ಹಂಗಿಲ್ಲ
ಸೀಬೆ, ಕಿತ್ತಳೆ, ಮಾವುಗಳಲ್ಲಿಯೂ
ಮುಖ ಮೂಡಿಸಿದರಾಯ್ತು
ಪಾಪಿ ಹೊಟ್ಟೆಗೆ ನಾಚಿಕೆಯೇ ಇಲ್ಲ
ಕೂಸು-ಕುನ್ನಿಯ ಹಾಲಿಗೂ ಕನ್ನ
ಸೊಂಡಿಯೂರಿ ಸುರಿಯುವ ಪರಿ
ಹೊರಗಣ ಹಾಲೇ ಮಾಯ.!
ಈಗೀಗ ಎಳೆನೀರ
ಬೊಂಡದಲೂ ಮುಖಮಾಟ
ಒಳಗಣ ಹಾಲೇ ಮಾಯ..!
ಬೊಂಡ ಕೊಚ್ಚುವವ
ಸುಸ್ತಾಗಿ ಹಾಕುತಿಹ ಲಾಗ
ಇಲ್ಲಿ ಸಲ್ಲನಿವನು.. ಅಲ್ಲಿಯೂ ಸಲ್ಲ.
-ಎಸ್.ಬಿ.ಜೋಗುರ
ಪ್ರಭುತ್ವ
ಆ ಮತ
ಈ ಮತಗಳ
ಸುಳಿಗಾಳಿಯ ಹೊಡೆತಕ್ಕೆ
ಚಿಂದಿ-ಚಿಂದಿಯಾಗಿ
ಹೋದವನವನು
ಹಂಗು ಹರಿದರೂ
ಹಿಂಗದಾತು
ಹೊರಳಿ ನೋಡಿದರೆ
ಬೆಂಬಿಡದ ಭೂತ
ಮರೆತನಾ ಮತಿಗೇಡಿ
ಬುಡದಡಿಯ ಕತ್ತಲವ
ಅವನೋ..
ಉತ್ತರಕುಮಾರ
ಒಮ್ಮೊಮ್ಮೆ
ದಶ ದಿಕ್ಕು ಕುವರ
ಸಡ್ದು ಹೊಡೆದದ್ದೂ ಖರೆ
ಕುಸ್ತಿ ಗೆದ್ದದ್ದೂ ಖರೆ
ಪಾಪಿ ಹೊಟ್ಟೆಗೆ
ಉತ್ತರಿಸಿದ್ದೇನು ಸುಳ್ಳೇ..?
ದಿನದ ಕೂಳನೇ ನಂಬಿ
ಮಂದಾಗಿ,ಮುಂದಾಗಿ
ಹಗಲು ಕಂಡ ಬಾ"
ಇರುಳಲಿ ಬಿದ್ದವರು
ಕೋಟಿ..ಕೋಟಿ
ಇವನೋ..ಗಂಡಾದ
ಸೋತ ಜೀವಗಳು
ಕರಕರ ಹಲ್ಲು ಮಸೆದರೂ ಸೈ
ಮರಮರ ಮರುಗಿದರೂ ಸೈ
ನಾಚನಿವನು ಕುಭಂಡ..!
ಮತ್ತೆ ಹಲ್ಲು ಗಿಂಜುತ್ತಾನೆ ತಣ್ಣಗೆ
ಭರವಸೆಗಳನ್ನಿಡುತ್ತಾನೆ ಬೆಚ್ಚಗೆ
ಧಗ ಧಗ ಉರಿಯುತಿಹರಿವರು ಬೆಂಡಾಗಿ
ತಳ ಊರಿಹನವನು
ಪಿಟೀಲು ಕುಯ್ಯುತ್ತ
ಮೈ ಕಾಸುತ್ತ ಹಾಯಾಗಿ
ಪ್ರಭುತ್ವದ ಶನಿಯಾಗಿ
-ಎಸ್.ಬಿ.ಜೋಗುರ
0 comments:
Post a Comment