ಕೊಪ್ಪಳ : ಇಂದು ಕತ್ತಲರಾತ್ರಿ. ನಾಳೆ ನಡೆಯಲಿರುವ ಚುನಾವಣೆಯ ಹಣೆಬರಹವನ್ನು ಬದಲಿಸುವ ರಾತ್ರಿ. ಚುನಾವಣೆ ಬಂದರೆ ಸಾಕು ಈ ರಾತ್ರಿಗಾಗಿಯೇ ಕಾಯುತ್ತ ಕುಳಿತಿರುತ್ತಾರೆ. ಅಭ್ಯರ್ಥಿಯ ಜೇಬಿನ ತೂಕದ ಮೇಲೆ ನಾಳೆಯ ಓಟುಗಳ ಸಂಖ್ಯೆ ನಿರ್ಧಾರವಾಗುತ್ತದೆ. ಹಳ್ಳಿಗಳಲ್ಲಂತೂ ರಾತ್ರಿ ಪೂರಾ ಜನ ಎಚ್ಚರದಿಂದಲೇ ಇರುತ್ತಾರೆ. ಒಮ್ಮೆ ಅವರು ಕೊಟ್ಟರೆ ಮತ್ತೊಮ್ಮೆ ಇವರು ಕೊಡಲು ಬರುತ್ತಾರೆ. ಯಾರು ಯಾವಾಗ ಬರುತ್ತಾರೋ ಯಾರಿಗೆ ಗೊತ್ತು? ಮಲಗಿಕೊಂಡರೆ ಲಕ್ಷ್ಮೀ ದೂರವಾಗುತ್ತಾಳೆ. ರಾತ್ರಿ ಕೆಲವು ಏರಿಯಾಗಳಲ್ಲಿ ಕರೆಂಟ್ ತೆಗೆಯಲಾಗುತ್ತೆ. ಆ ಸಮಯಕ್ಕೆ ನಿಮ್ಮ ಮನೆ ಬಾಗಿಲು ಬಡಿಯಲಾಗುತ್ತದೆ. ಮನೆಯ ಯಜಮಾನ ಮುಂದೆ ಬಂದರೆ ಮೊದಲೆ ಆ ಮನೆಯ ಮತದಾರರ ಲೆಕ್ಕ ಇಟ್ಟ ದುಡ್ಡು ಹಂಚುವವನು ದುಡ್ಡನ್ನು ತೆಗೆದು ಯಜಮಾನನ ಕೈಯಲ್ಲಿಟ್ಟು ತನ್ನ ಚಿಹ್ನೆಯನ್ನು ನೆನಪಿಸುತ್ತಾನೆ. ಇದ್ದರೆ ಬಾಟಲಿಯೊಂದನ್ನು ಕೈಗಿಡುತ್ತಾನೆ.
ಇತ್ತೀಚೆಗೆ ಸೀರೆ,ಮೂಗುತಿ ಹಂಚುವುದು ಇದೆ. ಕೆಲವೆಡೆ ಮತಗಳ ಸಂಖ್ಯೆಗೆ ಅನುಗುಣವಾಗಿ ಉಂಗುರ ಹಂಚಿದ್ದೂ ಇದೆ.
ದುಡ್ಡು ಸಿಗದವರು ಮತಗಟ್ಟೆಯ ಬಳಿ ಸುಳಿದಾಡುತ್ತಲೇ ಇರುತ್ತಾರೆ. ಆದರೆ ಮತ ಹಾಕುವುದೇ ಇಲ್ಲ. ಯಾರಾದರು ಕರೆದು ಕೊಡಬಹುದೆಂದು ಅತ್ತಿತ್ತ ಕಣ್ಣಾಕುತ್ತಲೇ ಇರುತ್ತಾರೆ. ಆದರೆ ದುಡ್ಡು ಹಂಚುವವರಿಗೂ ಗೊತ್ತು ಯಾವ ಮತಗಳು ತಮಗೆ ಬರುತ್ತವೆ ಯಾವ ಮತಗಳು ಬರುವುದಿಲ್ಲ ಎನ್ನುವುದು.
ಎಣ್ಣೆ ಹಾಕಿಕೊಂಡು ಬಂದ ಮತದಾರ ತೂರಾಡುತ್ತಲೇ ಬರುತ್ತಾನೆ. ನಿನ್ನೆಯಿಂದಲೇ ಮದ್ಯಪಾನ ನಿಷೇದ ಆದರೂ ಎಲ್ಲಿಂದ ಬಂತು ? ಯಾರೂ ಕೇಳುವುದಿಲ್ಲ. ಎಲ್ಲರಿಗೂ ಗೊತ್ತು. ಹತ್ತು ಹದಿನೈದು ವರ್ಷಗಳ ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮಂಡಾಳ ವಗ್ಗರಣೆ, ಮಿರ್ಚಿ, ಚಹಾ ಕೊಡಿಸುತ್ತಿದ್ದರು. ಇಲ್ಲವೇ ಯಾವುದಾದರೊಂದು ಹೋಟಲ್ ನಲ್ಲಿ ಅಕೌಂಟ್ ಹಚ್ಚಿ ಕೂಪನ್ ನೀಡುತ್ತಿದ್ದರು. ಅವತ್ತಂತೂ ಮಂಡಾಳ ವಗ್ಗರಣೆ ಜಾತ್ರೆಯಾಗುತ್ತಿತ್ತು. ಈಗ ಚಿಕನ್ ಬಿರ್ಯಾನಿ ಮಾಡಿ ಹಂಚಿದರೂ ಕೊಡಬೇಕಾದದ್ದನ್ನು ಕೊಡಲೇ ಬೇಕು.
ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಒಂದು ಓಟಿಗೆ 10 ರೂ ಇದ್ದದ್ದು ಈಗೀಗ 200-500 ರೂ ತನಕ ನಡೆಯುತ್ತದೆ. ಕತ್ತಲರಾತ್ರಿಯಲ್ಲಿ ದುಡ್ಡು ಹಂಚುವುದು , ಅದಕ್ಕಾಗಿ ಹತ್ತಾರು ಸಾಹಸ ಮಾಡುವುದು. ಎದುರಾಳಿ ಅಭ್ಯರ್ಥಿಯ ದುಡ್ಡು ಹಂಚುತಿದ್ದರೆ ಅದನ್ನು ಪೊಲೀಸ್ ರಿಗೆ ಹಿಡಿದುಕೊಟ್ಟು ತಾವು ಸಾಚಾ ಎನ್ನುವಂತೆ ತೋರಿಸುವುದು ಈ ಕತ್ತಲ ರಾತ್ರಿಯ ನಾಟಕಗಳು. ಈ ಕತ್ತಲ ರಾತ್ರಿಯಲ್ಲಿ ಎಷ್ಟೋ ಜನ ತಮ್ಮ ಬದುಕನ್ನು ಬೆಳಕಾಗಿಸಿಕೊಂಡವರಿದ್ದಾರೆ. ಅವರನ್ನು ನಂಬಿದವರು ತಗ್ಗಿಗೆ ಬಿದ್ದಿದ್ದಾರೆ. ನೂರು ಕೊಡುವಲ್ಲಿ 50 ಕೊಡುವುದು. ಇಲ್ಲವೇ ಹಂಚಲು ಕೊಟ್ಟ ದುಡ್ಡನ್ನು ಪೂರ್ಣವೇ ಗುಳುಂ ಎನಿಸುವುದು ಅವರಿಗೆ ಸರಳವಾದ ವಿದ್ಯೆ.
ರಾತ್ರಿ ಮಲಗಬೇಡಿ, ಎಚ್ಚರದಿಂದಿದಲೇ ಇರಿ !
ಯಾರಿಗೆ ಗೊತ್ತು ಲಕ್ಷ್ಮೀ ಯಾವ ಸಮಯದಲ್ಲಿ ಬರುತ್ತಾಳೋ?
0 comments:
Post a Comment