ಸಂಪ್ರದಾಯದ ಸೋಗಿನಲ್ಲಿ
ನೂರೆಂಟು ಸಂಕೋಲೆಗಳು
ಹೆಸರು ಬದಲಿಸಿ
ವೇಷ ಮರೆಸಿಕೊಂಡು
ಕಾಡುತ್ತವೆ
ನೂರೆಂಟು ತವಕ ತಲ್ಲಣಗಳು
ಅದುಮಿಟ್ಟ ಸಾವಿರಾರು ಬಿಕ್ಕುಗಳು,
ಕಣ್ಣಲ್ಲೇ ಕರಗಿಹೋದ ಕನಸುಗಳು
ಹುಸಿ ಬದುಕಿನ
ಇಲ್ಲದ ಪ್ರತಿಷ್ಠೆಗೆ
ತಲ್ಲಣಿಸಿ ಕುದ್ದುಹೋದ
ಅಸಹಾಯಕ ದೇಹಗಳು
ಬೆಂದು ಹೋಗುತ್ತವೆ
ಉಸಿರುಗಟ್ಟಿ ಒದ್ದಾಡುತ್ತವೆ
ಹೊದ್ದ ಬಟ್ಟೆಯೊಳಗೆ
ಮುಚ್ಚಿಕೊಳ್ಳಲಿಕ್ಕೇನಿದೆ
ಹರಿದ ಬಟ್ಟೆ, ,ಹಸಿದ ಹೊಟ್ಟೆ
ಮೂಳೆಗಂಟಿದ ಚರ್ಮ
ಹೊದ್ದ ಚಾದರದೊಳಗೆ
ಭಯಕ್ಕೆ ತತ್ತರಿಸಿದ ಪಿಳಿಪಿಳಿ ಕಣ್ಣುಗಳು,
ಕಫನ್ ಏಕೆ ಬೇಕು
ಬುರ್ಖಾ ಇರುವಾಗ !
- ಸಿರಾಜ್ ಬಿಸರಳ್ಳಿ
0 comments:
Post a Comment