PLEASE LOGIN TO KANNADANET.COM FOR REGULAR NEWS-UPDATES

ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೋಹಿಯಾ ಪ್ರಕಾಶನದ ಹಿರಿಯ ಸಿ ಚನ್ನಬಸವಣ್ಣ, ಖ್ಯಾತ ಸಾಹಿತಿ ಚಿತ್ರಶೇಖರ ಕಂಠಿ, ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕವಿ ಡಾ ಡಿ ಸಿ ರಾಜಪ್ಪ ಸೇರಿದಂತೆ ಆರು ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ಅಮ್ಮ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ತನ್ನ ದಶಮಾನೋತ್ಸವದ ಅಂಗವಾಗಿ ಈ ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ ಹತ್ತು ವರ್ಷಗಳಿಂದ ಉತ್ತಮ ಸಾಹಿತ್ಯ ಕೃತಿಗೆ ‘ಅಮ್ಮ’ ಪ್ರಶಸ್ತಿಯನ್ನು ನೀಡುತ್ತಿದ್ದ ಪ್ರತಿಷ್ಠಾನ ಇದೇ ಮೊದಲ ಬಾರಿಗೆ ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಲು ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ. ಅಮ್ಮ ಪ್ರಶಸ್ತಿಯ ಹೊರತಾಗಿ ಆರು ಜನರಿಗೆ ಈ ಗೌರವ ಪುರಸ್ಕಾರ ನೀಡಲಾಗುತ್ತಿದೆ ಎಂದು ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಸಂಚಾಲಕ ಪ್ರಭಾಕರ ಜೋಶಿ ತಿಳಿಸಿದ್ದಾರೆ,

ಲೋಹಿಯಾ ಪ್ರಕಾಶನದ ಮೂಲಕ ಉತ್ತಮ ಕೃತಿ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಕ್ಕಾಗಿ ಬಳ್ಳಾರಿಯ ಸಿ.ಚನ್ನಬಸವಣ್ಣ ಅವರಿಗೆ, ಪೋಲೀಸ್ ಕ್ಷೇತ್ರದಲ್ಲಿರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಅವರನ್ನು ಪರಿಚಯಿಸಿದ್ದಕ್ಕಾಗಿ ಕವಿ ಹಾಗೂ ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ ಡಿ ಸಿ ರಾಜಪ್ಪ ಅವರಿಗೆ, ಹೈದರಾಬಾದ್ ಕರ್ನಾಟಕದಲ್ಲಿ ಸಾಹಿತ್ಯ ಪ್ರೀತಿಯನ್ನು ಬೆಳೆಸಿದ್ದಕ್ಕಾಗಿ ಕಲಬುರ್ಗಿಯ ಚಿತ್ರಶೇಖರ ಕಂಠಿ, ಸಿದ್ಧರಾಮ ಹೊನ್ಕಲ್, ರಾಯಚೂರಿನ ಮಹಾಂತೇಶ ನವಲಕಲ್ ಮತ್ತು ಬೀದರ್ ನ ಜಯದೇವಿ ಗಾಯಕವಾಡ ಅವರನ್ನು ಗೌರವಿಸಲಾಗುತ್ತದೆ.

ನವೆಂಬರ್ 26 ರಂದು ಸಂಜೆ 5-15ಕ್ಕೆ ಸೇಡಂನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top