ಕೊಪ್ಪಳ : ಕವಿಯಾದವನು ಹೊಸ ಹೊಸ ಪರಿಷ್ಕಾರಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು ಹೊಸದನ್ನು ಯೋಚಿಸಬೇಕು ಅಂದಾಗ ಉತ್ತಮ ಕಾವ್ಯ ಸಾಧ್ಯ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ರವಿವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಕವಿಸಮೂಹ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರತಿವಾರ ಹಮ್ಮಿಕೊಳ್ಳಲಾಗುತ್ತಿರುವ ಕವಿಸಮಯ ಕಾರ್‍ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ಈ ವಾರ ಎಂಟು ಜನ ಕವಿಗಳು ತಮ್ಮ ಕವನ ವಾಚನ ಮಾಡಿದರು. ನಂತರ ಅವುಗಳ ವಿಮರ್ಶೆಯನ್ನು ಕವಿ ವೀರಣ್ಣ ವಾಲಿ ಮಾಡಿದರು.ಇಟಗಿಯ ಜಡೆಯಪ್ಪನವರ ಹೂವೇ ನೀನು ಬೇಕು ಮತ್ತು ಎಚ್ಚರ ಕವನಗಳ ಬಗ್ಗೆ ಮಾತನಾಡಿದ ವಾಲಿಯವರು ಹೂವು ಎಲ್ಲ ಕಾಲಕ್ಕೂ ಸಲ್ಲುವಂಥದ್ದು ಅದರ ಬಗ್ಗೆ ಬರೆದಿರುವ ಜಡೆಯಪ್ಪನವರ ಕವನ ಬಹಳ ಚೆನ್ನಾಗಿದೆ ಎಂದರು. ಶ್ರೀನಿವಾಸ ಚಿತ್ರಗಾರರ ಪಾಪುವಿನ ಸುತ್ತ ಕವನ ಮಕ್ಕಳ ಗಮನ ಸೆಳೆಯುತ್ತದೆ ಮತ್ತು ದೂರವಿಡಿ ಕವನ ಅಧಿಕಾರಸ್ಥರ ಗೋಸುಂಬೆತನವನ್ನು ತೋರಿಸುತ್ತದೆ ಎಂದರು. ಗವಿಸಿದ್ದಪ್ಪ ಬಾರಕೇರ ಇಟಗಿ, ವಸಂತ ಎಂಬ ಕವನಗಳನ್ನು ವಾಚಿಸಿದರು.ಕವಿಯಿತ್ರಿ ಪುಷ್ಪಾವತಿ ಏಳುಭಾವಿಯವರು ನಾಗರಿಕ ಶಿಲ್ಪಿ ಮತ್ತು ಕುಲಾಂತರಿ ಎಂಬ ಪ್ರಸ್ತುತ ಸಮಸ್ಯೆಗಳ ಬಗ್ಗೆ ಕವನ ವಾಚಿಸಿದರು. ಕುಲಾಂತರಿ ತಳಿಗಳ ಅಪಾಯದ ಬಗ್ಗೆ ಹೇಳುವ ಕವನ ಬಹಳ ಚೆನ್ನಾಗಿತ್ತು, ಜಲಾಲೂದ್ದೀನ್ ರೂಮಿಯ ಕವನವನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ ಮಹೇಶ ಬಳ್ಳಾರಿ ಬಹಾಳ ಚೆನ್ನಾಗಿ ಅನುವಾದಿಸಿದ್ದಾರೆ ,ಅರಣ್ಯ ಮತ್ತು ನದಿ ತಾತ್ವಿಕ ಚಿಂತನೆಯ ಕಾವ್ಯ ಎಂದರು .
ವಿಠ್ಠಪ್ಪ ಗೋರಂಟ್ಲಿಯವರು ವಿಶ್ವಮಾನವ ಬಸವಣ್ಣ ಎಂಬ ಕವನವನ್ನು ವಾಚಿಸಿದರು. ಇದರ ಬಗ್ಗೆ ಮಾತನಾಡಿದ ವಾಲಿಯವರು ಬಸವಣ್ಣನ ಸಿದ್ದಾಂತಗಳ ಬಗ್ಗೆ ಹೇಳುವ ಕವನ ಕೊನೆಯಲ್ಲಿ ಬಸಣ್ಣ ಕೆಲವೇ ಜನರ ಕೈಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂಬ ವ್ಯಂಗ್ಯವನ್ನು ಹೊರ ಹೊಮ್ಮಿಸುವ ಕವನ ಬಹಳ ಪ್ರಭಾವಯುತವಾಗಿದೆ ಎಂದರು. ಕವನಗಳ ವಿಮರ್ಶೆ ಮಾಡಿದ ವೀರಣ್ಣ ವಾಲಿಯವರು ಕವಿ ಪ್ರಜಾರಾಜ್ಯದಲ್ಲಿ ದೊಡ್ಡ ವ್ಯಕ್ತಿ. ಲೋಕದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯುಳ್ಳವನು. ಜಾಗತೀಕರಣ ಮದ್ಯೆ ಕಾವ್ಯ ತನ್ನದೇ ಆದ ಸ್ಥಾನ ಪಡೆಯುತ್ತಿದೆ ಎಂದರು.
ಕಾರ್‍ಯಕ್ರಮದಲ್ಲಿ ಮಹೇಶ ಬಳ್ಳಾರಿ, ಜಡೆಯಪ್ಪ ಎನ್, ಶ್ರೀನಿವಾಸ ಚಿತ್ರಗಾರ,ಗವಿಸಿದ್ದಪ್ಪ ಬಾರಕೇರ, ಪುಷ್ಪಲತಾ ಏಳುಬಾವಿ, ವೀರಣ್ಣ ವಾಲಿ, ಲಕ್ಷ್ಮಿ ಶೆಟ್ಟರ್, ವಿಠ್ಠಪ್ಪ ಗೋರಂಟ್ಲಿ,ಶಿವಾನಂದ ಹೊದ್ಲೂರ ಇನ್ನಿತರರು ಉಪಸ್ಥಿತರಿದ್ದರು. ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ಮುಂದಿನ ವಾರದ ಕವಿ ಸಮಯದಲ್ಲಿ ಬಸವಣ್ಣನ ಕುರಿತು ಕವನ ರಚನೆ ಮಾಡಬೇಕು ಎಂದು ನಿರ್ಧರಿಸಲಾಗಿದ್ದು ಆಸಕ್ತ ಕವಿಗಳು ಕಲ್ಯಾಣದ ಬೆಳಕು ಎಂಬ ವಿಷಯದ ಬಗ್ಗೆ ಅಥವಾ ವಿಶ್ವಮಾನವ ಬಸವಣ್ಣನ ಬಗ್ಗೆ ಕವಿತೆಗಳನ್ನು ಬರೆದುಕೊಂಡು ಬರಬೇಕೆಂದು ತೀರ್‍ಮಾನಿಸಲಾಯಿತು.
0 comments:
Post a Comment