: ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವನ್ನಿಟ್ಟುಕೊಂಡು ಯುವ ಜನತೆ ಸೃಜನಾತ್ಮಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ಸಮಾಜದ ಹಾದಿ ತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರುವುದು ಒಳಿತು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಕರೆ ನೀಡಿದರು.


ಯುವಕರು ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದು, ಕಂಪ್ಯೂಟರ್, ವಿಡಿಯೋ ಗೇಮ್‌ನಂತಹ ಚಟುವಟಿಕೆಗಳಲ್ಲಿ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಹಿಂದೆ ಕ್ರೀಡೆ, ಗ್ರಾಮೀಣ ಸ್ಪರ್ಧೆಗಳು ಎಂದರೆ ಯುವಕರು ತಂಡೋಪತಂಡವಾಗಿ ಒಂದೆಡೆ ಸೇರಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ. ಗುಟಕಾ, ತಂಬಾಕು, ಮದ್ಯಪಾನದಂತಹ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು. ಈ ಹಿಂದೆ ಯುವಕರು ವ್ಯಾಯಾಮ ಮಾಡಲು ಹಾಗೂ ತಾಲೀಮು ನಡೆಸಲು ಇದ್ದಂತಹ ಗರಡಿ ಮನೆಗಳು ಕಾಣೆಯಾಗಿವೆ. ಆದರು ಈ ಭಾಗದಲ್ಲಿ ಗರಡಿ ಮನೆ ಪ್ರಾರಂಭಕ್ಕೆ ಮಂಜೂರಾತಿ ದೊರೆತಿದ್ದು, ಶೀಘ್ರ ಕಾರ್ಯಾರಂಭ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು, ಹೆಚ್ಚು ಯುವ ಸಂಘಟನೆಗಳು ರಚನೆಗೊಂಡು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ಸಮಾಜದ ಹಾದಿ ತಪ್ಪಿಸುವ ಸಂಘಟನೆಗಳಿಂದ ದೂರವಿರಬೇಕು. ಈ ಭಾಗದಲ್ಲಿ ಮಹಿಳಾ ಸಂಘಗಳು ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು, ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಯುವಜನ ಮೇಳದಂತಹ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದಲೇ, ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದ್ದ ವಿಭಾಗ ಮಟ್ಟದ ಯುವಜ ಮೇಳವನ್ನು, ಈ ಬಾರಿ ಕನಕಗಿರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಗಂಗಾವತಿ ತಾಲೂಕಿನ ಕನಕಗಿರಿ ಮತ್ತು ಕಾರಟಗಿಯಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಈಗಾಗಲೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಅನುದಾನ ದೊರೆಯುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಗಾಗಲೆ ಈಡೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕಾರ್ಯಕ್ರಮಗಳನ್ನು ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಅವರು, ಇಲಾಖೆಯು ಕೇವಲ ಆಟೋಟದ ಚಟುವಟಿಕೆಗೆ ಮಾತ್ರವಲ್ಲದೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ತಾಲೂಕು ಮಟ್ಟದಲ್ಲಿ ೧೫ ಲಕ್ಷ ರೂ. ವೆಚ್ಚದಲ್ಲಿ ಮಲ್ಟಿ ಜಿಮ್ ಸ್ಥಾಪಿಸಲು ಈಗಾಗಲೆ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಆಯೋಜಿಸಲಾಗುವುದು ಎಂದರು. ರಾಮಮೂರ್ತಿ ನವಲಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ಅಮರೇಶ್ ಗೋನಾಳ, ಲಕ್ಷ್ಮಮ್ಮ ಸಿದ್ದಪ್ಪ ನಿರಲೂಟಿ, ತಾ.ಪಂ. ಸದಸ್ಯರುಗಳಾದ ಬಸನಗೌಡ, ವಿರುಪಾಕ್ಷಗೌಡ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಸೇರಿದಂತೆ ಗಣ್ಯರಾದ ಶ್ರೀನಿವಾಸ ರೆಡ್ಡಿ, ಶ್ರೀನಿವಾಸ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು
0 comments:
Post a Comment
Click to see the code!
To insert emoticon you must added at least one space before the code.