ಕೊಪ್ಪಳ ಜಿಲ್ಲೆಯ ೦೮ ಕೆರೆಗಳಿಗೆ ತುಂಗಭದ್ರಾ ನೀರನ್ನು ತುಂಬಿಸುವ ೧೪೧ ಕೋಟಿ ರೂ. ಯೋಜನೆಯಡಿ ಬರುವ ಮೇ ತಿಂಗಳಾಂತ್ಯದ ವೇಳೆಗೆ ಲಕ್ಷ್ಮೀದೇವಿ ಕೆರೆ ಮತ್ತು ಕಾಟಾಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮೇ ಅಂತ್ಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕಲಬುರಗಿ ವಿಭಾಗ ಮಟ್ಟದ ಯುವಜನ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪದೇ ಪದೇ ಬರಗಾಲಕ್ಕೆ ತುತ್ತಾಗುವ ಈ ಭಾಗದಲ್ಲಿ ಅಂತರ್ಜಲ ತೀವ್ರ ಕುಸಿತವಾಗುತ್ತಿದೆ. ಬೇಸಿಗೆಯಲ್ಲಂತೂ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು, ಕುಡಿಯುವ ನೀರಿಗೆ ತೀವ್ರ ತೊಂದರೆಯಾಗುತ್ತಿದೆ. ಇದರ ನಿವಾರಣೆಗಾಗಿ ತುಂಗಭದ್ರಾ ನೀರನ್ನು ಕೆರೆಗಳಿಗೆ ತುಂಬಿಸುವ ೧೪೧ ಕೋಟಿ ರೂ. ಗಳ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಈಗಾಗಲೆ ಸಾಕಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ ಬರುವ ಮೇ ಅಂತ್ಯದೊಳಗೆ ಲಕ್ಷ್ಮೀದೇವಿ ಕೆರೆ ಮತ್ತು ಕಾಟಾಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪೂರ್ಣಗೊಂಡು, ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಬರುವ ಮಳೆಗಾಲಕ್ಕೆ ನೀರು ತುಂಬಿಸುವುದು ಶತಸಿದ್ಧವಾಗಿದ್ದು, ಕೆರೆಗಳು ತುಂಬಿದಲ್ಲಿ, ಅಂತರ್ಜಲ ಮಟ್ಟ ಏರಿಕೆಯಾಗಲಿದೆ. ಜನರಿಗೆ ಕುಡಿಯುವ ನೀರಿನ ಬವಣೆಯೂ ತಪ್ಪಲಿದೆ ಎಂದರು.
ಕನಕಗಿರಿ ಉತ್ಸವ ಇಲ್ಲ : ರಾಜ್ಯದಲ್ಲಿ ಸದ್ಯ ಬರ ಪರಿಸ್ಥಿತಿ ತಲೆದೋರಿದ್ದು, ಇಂತಹ ಸಂದರ್ಭದಲ್ಲಿ ಉತ್ಸವವನ್ನು ಆಚರಿಸುವುದು ಸಮಂಜಸವಲ್ಲವಾದ್ದರಿಂದ ಈ ಬಾರಿ ಕನಕಗಿರಿ ಉತ್ಸವ ಆಚರಿಸುವುದಿಲ್ಲ. ರಾಜ್ಯದಲ್ಲಿ ಉತ್ತಮ ಮಳೆಯಾಗಿ, ರೈತರು ಸಂತೃಪ್ತಿಯಿಂದ ಇದ್ದಾಗ ಉತ್ಸವಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ಸಚಿವ ಶಿವರಾಜ ಎಸ್. ತಂಗಡಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ಅಮರೇಶ್ ಗೋನಾಳ, ಲಕ್ಷ್ಮಮ್ಮ ಸಿದ್ದಪ್ಪ ನಿರಲೂಟಿ, ತಾ.ಪಂ. ಸದಸ್ಯರುಗಳಾದ ಬಸನಗೌಡ, ವಿರುಪಾಕ್ಷಗೌಡ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ, ಸೇರಿದಂತೆ ಗಣ್ಯರಾದ ಶ್ರೀನಿವಾಸ ರೆಡ್ಡಿ, ಶ್ರೀನಿವಾಸ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.