PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೦೫ (ಕ ವಾ) ವಚನಕಾರರು ಮನುಕುಲಕ್ಕೆ ನೀಡಿರುವ ನೀತಿ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ತ್ರಿಪದಿ ಕವಿ ಸರ್ವಜ್ಞ ಹಾಗೂ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೊಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತಿ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
     ವಚನಕಾರರು ೧೩ ರಿಂದ ೧೬ ನೇ ಶತಮಾನದ ಕಾಲದಲ್ಲಿ ಮನುಕುಲದ ಉದ್ಧಾರಕ್ಕೆ ಹಲವಾರು ನೀತಿ ಬೋಧನೆಗಳನ್ನು ನೀಡಿದ್ದಾರೆ.  ಅವರ ಬೋಧನೆ ಹಾಗೂ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ.  ತ್ರಿಪದಿ ಕವಿ ಸರ್ವಜ್ಞರು, ಕಣ್ಣಿಂದ ನೋಡಿದ್ದು ಹಾಗೂ ಕಿವಿಯಿಂದ ಕೇಳಿದ್ದನ್ನು ಅವಲೋಕಿಸಿ, ತಮ್ಮ ವಚನಗಳಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಕೇವಲ ಮೂರು ಸಾಲುಗಳಲ್ಲಿ ಸಮಗ್ರ ಅರಿವನ್ನು ಹೊಂದುವಂತಹ ವಚನಗಳನ್ನು ರಚಿಸಿರುವುದು ಅವರ ಜ್ಞಾನ ಭಂಡಾರಕ್ಕೆ ನಿದರ್ಶನವಾಗಿದೆ.  ಸಮಾಜದಲ್ಲಿ ಮನೆ ಮಾಡಿರುವ ಮೂಢನಂಬಿಕೆಗಳನ್ನು ಟೀಕಿಸುವಂತಹ ವಿಡಂಬನಾತ್ಮಕ ಸಂದೇಶಗಳು ಅವರ ವಚನಗಳಲ್ಲಿ ಅಡಗಿವೆ.  ಎಷ್ಟೇ ವಿದ್ವತ್ತನ್ನು ಹೊಂದಿದ್ದರೂ, ಜನಸಾಮಾನ್ಯರಿಗೆ ಉಪಯೋಗಕ್ಕೆ ಬಾರದಿದ್ದರೆ ಅಂತಹ ವಿದ್ಯೆಯಿಂದೇನು ಪ್ರಯೋಜನ ಎಂಬುದನ್ನು ಮನಗಂಡೇ, ಸರಳ ಭಾಷೆಯಲ್ಲಿ ತಮ್ಮ ಸಂದೇಶಗಳನ್ನು ಸರ್ವಜ್ಞರು ನೀಡಿದ್ದಾರೆ.  ಅದೇ ರೀತಿ ಎಲ್ಲ ವಚನಕಾರರೂ ಸಹ ತಮ್ಮದೇ ಆದ ಶೈಲಿಯಲ್ಲಿ ಜಗತ್ತಿಗೆ ನೀತಿ ಸಂದೇಶಗಳನ್ನು ನೀಡಿದ್ದು, ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ವಚನಕಾರರ ಕುರಿತು ವಿಶೇಷ ಉಪನ್ಯಾಸ ನೀಡಿದ ಬಳ್ಳಾರಿಯ ಸೇಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ ಅಧ್ಯಾಪಕ ಕೆ.ಬಿ. ಸಿದ್ದಲಿಂಗಪ್ಪ ಅವರು ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಬಲ್ಲದ ವಿಷಯವಿಲ್ಲ' ಎಂಬ ನುಡಿ, ಸರ್ವಜ್ಞರ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.  ಸರಳ ಭಾಷೆಯಲ್ಲಿ, ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಕವಿ ಸರ್ವಜ್ಞರು.  ಬಂಡಾಯ ಮನೋಭಾವದಲ್ಲಿ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಮ್ಮ ತ್ರಿಪದಿಗಳ ಮೂಲಕ ವಿಮರ್ಶಿಸಿದ್ದಾರೆ.  ಸರ್ವಜ್ಞರು ರಚಿಸಿರುವ ೧೯೨೮ ವಚನಗಳು ಇದುವರೆಗೂ ದೊರಕಿವೆ.  ಸರ್ವಜ್ಞರ ವಚನಗಳನ್ನು ಸ್ವಾನುಭವ, ಸರ್ವಾನುಭವ ಹಾಗೂ ಶಿವಾನುಭವ ಎನ್ನುವ ಮೂರು ಭಾಗಗಳಲ್ಲಿ ಅಧ್ಯಯಿಸಬಹುದಾಗಿದೆ.  ಸರ್ವಜ್ಞರು ಸೇರಿದಂತೆ ಎಲ್ಲ ವಚನಕಾರರು ಲೋಕದ ಸಾರ-ಸತ್ವವನ್ನು ವಚನಗಳಲ್ಲಿ ಕಟ್ಟಿಕೊಟ್ಟಿದ್ದಾರೆ.  ಕುದುರೆಗಳಿಗೆ ಹುಲ್ಲು ಕತ್ತರಿಸಿ ಪೂರೈಸುವ ಕಾಯಕದಲ್ಲಿದ್ದ ಮಾದಾರ ಚನ್ನಯ್ಯ ಅವರು ಗುಪ್ತ ಭಕ್ತಿಯ ಮೂಲಕ ಪರಶಿವನ ಕೃಪೆಗೆ ಪಾತ್ರರಾಗಿದ್ದರು ಇವರ ೧೦ ವಚನಗಳು ರಚಿಸಿದ್ದಾರೆ.  ಮಾದಾರ ಧೂಳಯ್ಯ ಅವರು ೧೦೬ ವಚನಗಳನ್ನು ರಚಿಸಿದ್ದು, ಡೋಹರ ಕಕ್ಕಯ್ಯ ಅವರು ರಚಿಸಿದ್ದು ೦೬ ವಚನಗಳು.  ಉರಿಲಿಂಗ ಪೆದ್ದಿ ಅವರು ೧೨ ನೇ ಶತಮಾನದಲ್ಲಿ ಕ್ರಾಂತಿಪುರುಷರಾಗಿ ಹೊರಹೊಮ್ಮಿದ್ದು, ಇವರು ೩೬೬ ವಚನಗಳನ್ನು ರಚಿಸಿದ್ದಾರೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್, ನಗರಠಾಣೆ ಪಿಐ ಸತೀಶ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿ, ವಂದಿಸಿದರು.  ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರೂಪಿಸಿದರು.  ವಿವಿಧ ಶಾಲಾ ಮಕ್ಕಳು ಇದೇ ಸಂದರ್ಭದಲ್ಲಿ ವಚನಗಾಯನ ನಡೆಸಿಕೊಟ್ಟರು.
       ಇದಕ್ಕೂ ಪೂರ್ವದಲ್ಲಿ ಶನಿವಾರದಂದು ಬೆಳಿಗ್ಗೆ ೯ ಗಂಟೆಗೆ ಸರ್ವಜ್ಞರು ಮತ್ತು ದಲಿತ ವಚನಕಾರರ ಜಯಂತಿ ಅಂಗವಾಗಿ ವಚನಕಾರರ ಭಾವಚಿತ್ರದೊಂದಿಗಿನ ಮೆರವಣಿಗೆ ಗವಿಮಠ ಆವರಣದಿಂದ ಹೊರಟು, ಗಡಿಯಾರ ಕಂಬ,  ಜವಾಹರ ರಸ್ತೆ, ಮಾರ್ಗವಾಗಿ ಸಾಹಿತ್ಯ ಭವನದವರೆಗೆ ನೆರವೇರಿತು.  ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಮೆರವಣಿಗೆಗೆ ಚಾಲನೆ ನೀಡಿದರು.  ಹಲವು ಜಾನಪದ ಮತ್ತು ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Advertisement

0 comments:

Post a Comment

 
Top