ಡಾ. ಸಿ.ಎನ್.ಆರ್. ರಾವ್ ಇವರಿಂದ ಲೋಕಾರ್ಪಣೆಗೊಳ್ಳುವ ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಭವ್ಯ ಪರಂಪರೆ ಕೃತಿ ಕುರಿತು ನಾಲ್ಕು ನುಡಿಗಳು. ಕೊಪ್ಪಳ ನಾಡಿನ ಸಾಹಿತ್ಯ, ಸಂಸ್ಕೃತಿ, ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸುವ ಲೇಖಕರು ಆರಂಭದಲ್ಲಿ ನಾಡಿನ ಪರಿಚಯವನ್ನು ನೀಡಿದ್ದಾರೆ. ಗವಿಮಠದ ಭವ್ಯ ಪರಂಪರೆಯ ಪ್ರಥಮ ಪೀಠಾಧೀಶರಾದ ಜ.ರುದ್ರಮುನಿ ಶಿವಯೋಗಿಗಳಿಂದ ಆರಂಭಗೊಳ್ಳುವ ಕೃತಿ ಶ್ರೀ ಮಠದ ೧೮ ಶಿವಯೋಗಿಗಳವರ ಜೀವನ ಲೀಲಾಮೃತವನ್ನೇ ಸಾಹಿತಿಗಳು ಇದರಲ್ಲಿ ಕಡೆದಿಟ್ಟಿದ್ದಾರೆ. ಈ ಪರಂಪರೆಯಲ್ಲಿ ಸಾಗಿ ಬಂದ ೧೧ನೇ ಶ್ರೀಗಳವರಾದ ಜ.ಗವಿಸಿದ್ಧೇಶ್ವರ ಶಿವಯೋಗಿಗಳವರ ಸಮಾಜೋಧಾರ್ಮಿಕ ಕಾರ್ಯಗಳು ಸಮಾಜಮುಖಿ ಕಾಯಕಗಳು ಅವರ ಬಾಲ್ಯದ ಬದುಕು ಹಾಗೂ ಅವರ ಲಿಂಗಾಂಗ ಸಮರಸದ ಬೆಳಗು ಮಳಲ ಮಲ್ಲೇಶನ ಪ್ರಾಕೃತಿಕ ತಿಳಿಬೆಳಗು ಎಲ್ಲವನ್ನು ಸಾಹಿತಿ ಕಂಬಾಳಿಮಠರು ಅತ್ಯಂತ ಮನೋಜ್ಞವಾಗಿ ಇಲ್ಲಿ ಉಲ್ಲೇಖಿಸಿದ್ದಾರೆ. ಹೈದರಾಬಾದ ನವಾಬರಿಗೆ ಅಂಟಿದ ಜಾಢ್ಯವನ್ನು ಶ್ರೀಮಠದ ಅಂಬಲಿ ಪ್ರಸಾದದಿಂದ ಗುಣಮುಖ ಮಾಡಿದವರು ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು. ಅಮವಾಸೆಯ ದಿನದಂದು ಚಂದ್ರನನ್ನು ತೋರಿಸಿದ ಮಹಾಮಹೀಮ ಗವಿಸಿದ್ಧೇಶ್ವರ ಶಿವಯೋಗಿಗಳು. ಇಂತಹ ಶಿವಯೋಗಿಗಳವರ ಪವಾಡ ಸದೃಶ್ಯ ಕಾಯಕಗಳನ್ನು ಇಲ್ಲಿ ಲೇಖಕರು ಅರ್ಥಪೂರ್ಣವಾಗಿ ಅನನ್ಯವಾಗಿ ವಿವರಿಸಿದ್ದಾರೆ. ನಾನು ಬಂದ ಕಾರ್ಯ ಮುಗಿಯಿತು ಇನ್ನೂ ನಾನು ಲಿಂಗದೊಳಗೆ ಲೀನನಾಗುವೆ ಎಂದು ಗುರುಚನ್ನಬಸವ ಮಹಾಸ್ವಾಮಿಗಳವರ ನುಡಿಯನ್ನು ಆಲಿಸಿದ ಗವಿಸಿದ್ಧೇಶ್ವರ ಶಿವಯೋಗಿಗಳವರು ಮನನೊಂದು, ಇನ್ನೂ ಮುಂದೆ ನನಗೆ ಗುರುಗಳ ಪಾದೋದಕ ಪ್ರಸಾದ ಸೇವೆ ಅಲಭ್ಯ ಎಂದರಿತು, ಗುರುಗಳಿಗಾಗಿಯೇ ನಿರ್ಮಿತವಾಗಿದ್ದ ಗದ್ದುಗೆ ಏರಿ ಲಿಂಗಧ್ಯಾನದೊಳು ಮೈಮರೆದು ಯೋಗ ಸಮಾಧಿಯಲ್ಲಿ ನಿರತರಾದರು. ಗುರುಗಳಾದ ಚನ್ನಬಸವ ಶಿವಯೋಗಿಗಳು ಯಾವ ಪ್ರಯತ್ನ ಮಾಡಿದರೂ ಗವಿಸಿದ್ಧೇಶ್ವರರು ಮೂಲ ಸ್ಥಿತಿಗೆ ಬರಲೇ ಇಲ್ಲ. ಆ ಲಿಂಗದ ಬೆಳಗಿನಲ್ಲಿ ಬೆಳಕಾಗಿ ಬೈಲಾದರು. ಅಂದಿನಿಂದ ಇಂದಿನವರೆಗೆ ಜಾತ್ರಾ ಮಹೋತ್ಸವ ಸಾಗಿ ಬಂದಿದೆ. ಇಂತಹ ಸಜೀವ ಸಮಾಧಿ ಸಂಯುತ ಗವಿಸಿದ್ಧೇಶ್ವರನ
ಲೀಲೆಗಳನ್ನು ಬಹಳಷ್ಟು ಸುಂದರ ಸರಳ ಭಾಷೆಯಲ್ಲಿ ಇಲ್ಲಿ ಲೇಖಕರು ನಿರೂಪಿಸಿದ್ದಾರೆ. ಶ್ರೀ
ಮಠದ ೧೫ನೇ ಶ್ರೀಗಳವರಾದ ಜ. ಶಿವಶಾಂತ ಶಿವಯೋಗಿಗಳ ೧೬ನೇ ಶ್ರೀಗಳವರಾದ ಜ. ಮರಿಶಾಂತವೀರ
ಶಿವಯೋಗಿಗಳ ಹಾಗೂ ೧೭ನೇ ಶ್ರೀಗಳವರಾದ ಜ. ಶಿವಶಾಂತ ಶಿವಯೋಗಿಗಳ ಶಿಕ್ಷಣ ಪ್ರೇಮ ಅವರು
ನಾಡಿಗೆ ನೀಡಿದ ಅಕ್ಷರ ದಾಸೋಹ - ಅನ್ನ ದಾಸೋಹ - ಆಧ್ಯಾತ್ಮ ದಾಸೋಹ ಇವೆಲ್ಲಾವುಗಳನ್ನು
ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರೆ. ಇಂದಿನ ಪೀಠಾಧಿಪತಿಗಳಾದ ಜ. ಅಭಿನವ ಗವಿಸಿದ್ಧೇಶ್ವರ
ಮಹಾಸ್ವಾಮಿಗಳ ಕುರಿತು ಇಲ್ಲಿ ಪ್ರಸ್ತಾಪಿಸಿದ್ದಾರೆ. ಶ್ರೀಮಠದ ಅಡಿಯಲ್ಲಿ ನಡೆಯುವ
ಶಿಕ್ಷಣ ಸಂಸ್ಥೆಗಳನ್ನು ಹಾಗೂ ಶ್ರೀಮಠದಲ್ಲಿರುವ ಎಲ್ಲಾ ಗದ್ದುಗೆಗಳ ವಿವರವನ್ನು ಕೊಟ್ಟು
ಕೃತಿಗೆ ಒಳ್ಳೆಯ ಮೆರಗನ್ನು ನೀಡಿದ್ದಾರೆ. ಇವೆಲ್ಲವೂ ಜೊತೆಗೆ ಸಾಂಧರ್ಭಿಕವಾಗಿ ಶ್ರೀ
ಮಠದ ಎಲ್ಲಾ ಶಿವಯೋಗಿಗಳವರ ಹಾಗೂ ಗದ್ದುಗೆಗಳ ಭಾವಚಿತ್ರಗಳನ್ನು ಅಳವಡಿಸಿದ್ದು ಅತ್ಯಂತ
ಮಹತ್ತರವಾದ ಕಾರ್ಯವಾಗಿದೆ. ಶ್ರೀಮಠದ ಎಲ್ಲಾ ಶಿವಯೋಗಿಗಳ ಚರಿತ್ರೆಯನ್ನು ಅಧ್ಯಯನ
ಮಾಡುವವರಿಗೆ ಇದೊಂದು ರೆಫೆರೆನ್ಸ್ ಪುಸ್ತಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಎಲ್ಲಾರೂ ಓದುವಂತಹ ಒಂದು ಒಳ್ಳೆಯ ಗ್ರಂಥವಾಗಿದೆ. ಇಂತಹ ಇನ್ನೂ ಹತ್ತಾರು ಕೃತಿಗಳನ್ನು
ಲೇಖಕರು ಎಸ್.ಎಂ.ಕಂಬಾಳಿಮಠರು ರಚಿಸಲಿ ಎಂದು ಶುಭ ಕೋರುವೆನು.
Subscribe to:
Post Comments (Atom)
0 comments:
Post a Comment