PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೨೨ (ಕ ವಾ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಕಲೆ, ಕ್ರೀಡೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿಯಲ್ಲಿನ ಮಾರ್ಗಸೂಚಿಗಳ ಪ್ರಕಾರ ಅಸಾಧಾರಣ ಸಾಧನೆ ಮಾಡಿರುವ ೪ ರಿಂದ ೧೫ ವರ್ಷದೊಳಗಿನ (೧೯೯೯ರ ಆಗಸ್ಟ್.೦೧ ಹಾಗೂ ನಂತರ ಹುಟ್ಟಿದ) ಮಕ್ಕಳನ್ನು ೨೦೧೫ನೇ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.  ಪ್ರಶಸ್ತಿ ವಿಜೇತ ಮಗುವಿಗೆ ರೂ.೧೦,೦೦೦/- ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸಲಿಚ್ಛಿಸುವ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಕಲೆ, ಕ್ರೀಡೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣ ಎಂದು ಗುರುತಿಸಲು ಅವರ ಸಾಧನೆ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಜ.೨೭ ರೊಳಗಾಗಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಿ.ವಸಂತಪ್ರೇಮಾ ಅವರು ತಿಳಿಸಿದ್ದಾರೆ. 

ಅಂಚೆ ಕಛೇರಿಯಲ್ಲಿ ತಿರುಪತಿ ನೇರ ದರ್ಶನ ಟಿಕೇಟ್
ಕೊಪ್ಪಳ, ಜ.೨೨ (ಕ ವಾ) ಕೊಪ್ಪಳ ಮುಖ್ಯ ಅಂಚೆ ಕಛೇರಿಯಲ್ಲಿ ಜ.೦೧ ರಿಂದ ತಿರುಪತಿ ದೇವಸ್ಥಾನದ ವಿಶೇಷ ನೇರದರ್ಶನ ಟಿಕೇಟ್ ಪಡೆಯುವ ಸೌಲಭ್ಯವನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಗದಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
 ಬಾಲ್ಯ ವಿವಾಹ ತಡೆ ಮ್ಯಾರಥಾನ್ ಆಕಾಶವಾಣಿಯಲ್ಲಿ ನೇರ ಪ್ರಸಾರ.
ಕೊಪ್ಪಳ ಜ. ೨೨ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಡಳಿತ, ಸಂಸ್ಥಾನ ಗವಿಮಠ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಹಾಗೂ ವಿವಿಧ ಇಲಾಖೆಗಳ ಮತ್ತು ಸಂಘ, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜ. ೨೩ ಶನಿವಾರದಂದು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿರುವ, ಬಾಲ್ಯ ವಿವಾಹ ತಡೆ ಜಾಗೃತಿ ನಡಿಗೆಯ ವೀಕ್ಷಕ ವಿವರಣೆಯ ನೇರ ಪ್ರಸಾರವನ್ನು ಹೊಸಪೇಟೆ ಆಕಾಶವಾಣಿ ಕೇಂದ್ರವು ಶನಿವಾರ ಬೆಳಿಗ್ಗೆ ೯ ಗಂಟೆಯಿಂದ ೧೦ ಗಂಟೆಯವರೆಗೆ ಬಿತ್ತರಿಸಲಿದೆ ಎಂದು ಹೊಸಪೇಟೆ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಡಾ|| ಅನುರಾಧಕಟ್ಟಿ ತಿಳಿಸಿದ್ದಾರೆ.
ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆ : ಜ. ೨೩ ರಂದು ಕೊಪ್ಪಳದಲ್ಲಿ ಕಾರ್ಯಗಾರ
ಕೊಪ್ಪಳ ಜ. ೨೨ (ಕರ್ನಾಟಕ ವಾರ್ತೆ): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ತಂತ್ರ ನಿಷೇಧ ಕಾಯ್ದೆ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಜ. ೨೩ ರಂದು ಮಧ್ಯಾಹ್ನ ೩ ಗಂಟೆಗೆ ಹಳೆ ಜಿಲ್ಲಾಸ್ಪತ್ರೆ ಆವರಣದ ಡಿಹೆಚ್‌ಓ ಸಭಾಂಗಣದಲ್ಲಿ ಏರ್ಪಡಿಸಿದೆ.
     ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆಯಡಿ ನೋಂದಾಯಿತ ಹೆರಿಗೆ ತಜ್ಞರು, ಕ್ಷ-ಕಿರಣ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಫಿಸಿಷಿಯನ್ ಸೇರಿದಂತೆ ಎಲ್ಲ ನೋಂದಾಯಿತ ಖಾಸಗಿ ಮತ್ತು ಸರ್ಕಾರಿ ವೈದ್ಯರು, ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರು ತಿಳಿಸಿದ್ದಾರೆ.
 ಸಾವಯವ ಕೃಷಿ, ತೋಟಗಾರಿಕೆ ಮತ್ತು ಮತ್ಸ್ಯಮೇಳ.
ಕೊಪ್ಪಳ ಜ. ೨೨ (ಕರ್ನಾಟಕ ವಾರ್ತೆ): ರಾಯಚೂರು ಕೃಷಿ ವಿಶ್ವವಿದ್ಯಾಲಯವು ಹೈದರಾಬಾದ-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ,  ಕೃಷಿ ಮತ್ತು ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ರಾಯಚೂರು ಆವರಣದಲ್ಲಿ ಜ. ೩೦ ರಿಂದ ಫೆ. ೦೧ ರವರೆಗೆ ಮೂರು ದಿನಗಳ ಕಾಲ 'ಸಾವಯವ ಕೃಷಿ, ತೋಟಗಾರಿಕೆ ಮತ್ತು ಮತ್ಸ್ಯಮೇಳ'ವನ್ನು ಹಮ್ಮಿಕೊಂಡಿದೆ.
      ಸ್ವಾವಲಂಬಿ ಕೃಷಿ-ಸ್ವಾಭಿಮಾನದ ಕೃಷಿ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ದಿನಗಳವರೆಗೆ ಆಯೋಜಿಸಲಾಗುತ್ತಿರುವ ಈ ಮೇಳದಲ್ಲಿ ಸಾವಯವ ಕೃಷಿ ಸಂಬಂಧಿತ ಎರೆಗೊಬ್ಬರ ಉತ್ಪಾದನೆ, ಜೈವಿಕ ತಂತ್ರಜ್ಞಾನ ಉತ್ಪಾದಕಗಳು, ಸಮಗ್ರ ಕೃಷಿ ಪದ್ಧತಿ, ಜಲಾನಯನ ಅಭಿವೃದ್ಧಿ ತಂತ್ರಜ್ಞಾನ, ಫಲ-ಪುಷ್ಪ ಪ್ರದರ್ಶನ, ಜಾನುವಾರು ಪ್ರದರ್ಶನ ಮತ್ತು ಮತ್ಸ್ಯಮೇಳಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪ್ರದರ್ಶಿಸಿ, ಆಸಕ್ತ ರೈತರು ಹಾಗೂ ಸಾರ್ವಜನಿಕರಿಗೆ ಬೇಕಾದ ಮಾಹಿತಿ ನೀಡಲಾಗುವುದು. ಅಲ್ಲದೇ, ರೈತರ ಆತ್ಮ ಸ್ಥೈರ್ಯ ತುಂಬಲು ಕೃಷಿ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳನ್ನು ಈ ಮೇಳದಲ್ಲಿ ರೈತ ಬಾಂಧವರಿಗೆ ತಿಳಿಯಪಡಿಸಲಾಗುವುದು.
 ಕೃಷಿ ಮೇಳದಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಬೃಹತ್ ಪ್ರಮಾಣದಲ್ಲಿ ಮತ್ಸ್ಯಮೇಳವನ್ನೂ ಸಹ ಏರ್ಪಡಿಸಲಾಗುತ್ತಿದೆ. ಇದರಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅನೇಕ ಸಂಸ್ಥೆಗಳು ಭಾಗಿಯಾಗಿ ಮತ್ಸ್ಯಮೇಳಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪ್ರದರ್ಶಿಸಿ, ಆಸಕ್ತ ರೈತರು ಹಾಗೂ ಸಾರ್ವಜನಿಕರಿಗೆ ಬೇಕಾದ ಮಾಹಿತಿ ನೀಡಲಾಗುವುದು. ಕೃಷಿ ಮೇಳದ ಪ್ರತಿ ದಿನ ಮಧ್ಯಾಹ್ನ 'ರೈತರಿಂದ ರೈತರಿಗಾಗಿ' ಎಂಬ ಕಾರ್ಯಕ್ರಮದಡಿ ಈ ಭಾಗದ ಆಯ್ದ ಪ್ರಗತಿಪರ ರೈತರಿಂದ ವಿವಿಧ ಕೃಷಿ ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಅಲ್ಲದೇ, ಎಲ್ಲ ರೈತರಿಗೆ ಕೃಷಿ ವಿಜ್ಞಾನಿಗಳ ಜೊತೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಲಾಗುವುದು.  
 ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಡಿ ಬರುವ ೬ ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಠ ಸಾವಯವ ಕೃಷಿಕ/ ಶ್ರೇಷ್ಠ ಸಾವಯವ ಕೃಷಿ ಮಹಿಳೆ ಮತ್ತು ಶ್ರೇಷ್ಠ ಮೀನು ಕೃಷಿಕ/ ಶ್ರೇಷ್ಠ ಮೀನು ಕೃಷಿ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು.  ಕೃಷಿ ಪ್ರದರ್ಶನವನ್ನು ೨೦೦ ಸುಸಜ್ಜಿತ ಮಳಿಗೆಗಳಲ್ಲಿ ಏರ್ಪಡಿಸಲಾಗುತ್ತಿರುವ ಈ ಕೃಷಿ ಮೇಳದಲ್ಲಿ ಒಂದು ಲಕ್ಷಕ್ಕೂ ಅಧಿಕ ರೈತರು ಭಾಗವಹಿಸುವ ನಿರೀಕ್ಷೆಯಿದೆ.  ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವ ವಿದ್ಯಾಲಯ, ರಾಯಚೂರು, ೦೮೫೩೨-೨೨೦೪೪೦ / ೨೨೦೧೮೯ / ೨೨೦೨೭೪ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Advertisement

0 comments:

Post a Comment

 
Top