PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ.೨೧ (ಕ ವಾ) ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಹೊಸಪೇಟೆ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಅವರು ಹೇಳಿದರು.
     ಜಿಲ್ಲಾಡಳಿತ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
     ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯ ಅವರು.  ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು.  ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು  ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸುವ ಮೂಲಕ ವಿಶ್ವ ಸಾಹಿತ್ಯ ಲೋಕಕ್ಕೆ ಹೊಂಬೆಳಕನ್ನು ಮೂಡಿಸಿದರು.  ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ್ಣತೆ ತುಂಬಿಕೊಂಡಿದೆ.  ಹಸಿದವನಿಗೆ ಆಹಾರ ನೀಡದಿದ್ದಲ್ಲಿ ಆ ಹರ ಎಂದಿಗೂ ಒಪ್ಪುವುದಿಲ್ಲ, ದೇಹವೇ ದೇಗುಲವಾಗಿರುವುದರಿಂದ, ದೇವಾಲಯಗಳಲ್ಲಿ ದೇವರನ್ನು ಹುಡುಕುವುದರಲ್ಲಿ ಅರ್ಥವಿಲ್ಲ, ತೀರ್ಥಯಾತ್ರೆಗಳ ಮೂಲಕ ದೇವರನ್ನು ಕಾಣಲು ಸಾಧ್ಯವಿಲ್ಲ, ತನ್ನನ್ನು ತಾನು ತಿಳಿದುಕೊಂಡಾಗ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ.  ಸಂಸಾರದ ಸಾಗರವನ್ನು ದಾಟಲು, ಚಂಚಲವಾದ ಮನಸ್ಸನ್ನು, ದೇವರೆಡೆಗೆ ತಿರುಗಿಸಿ, ಕಾಯಕ ನಿಷ್ಠೆಯನ್ನು ತೋರಿಸಬೇಕು ಎಂದು ಅಂಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಸಂದೇಶವನ್ನು ನೀಡಿದ್ದಾರೆ.  ಗಂಗಾಮತ ಸಮುದಾಯದವರು ಸಾಮಾಜಿಕ ಸಂಘಟಿತರಾಗಬೇಕು.  ತಮ್ಮಲ್ಲಿನ ದುಶ್ಚಟಗಳನ್ನು, ದುರ್ವ್ಯಸನಗಳನ್ನು ತೊರೆದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ.  ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ತತ್ವ ಸಂದೇಶಗಳನ್ನು ಮನನ ಮಾಡಿಕೊಂಡಾಗ ಮಾತ್ರ ಇಂತಹ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಡಾ. ಎಸ್. ಶಿವಾನಂದ ಅವರು ಹೇಳಿದರು.
     ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ,  ಗಣ್ಯರಾದ ಯಮನಪ್ಪ ಕಬ್ಬೇರ, ನಗರಸಭೆಯ ವಿವಿಧ ಸದಸ್ಯರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.  ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕೊಪ್ಪಳದ ಅಂಬಿಗರ ಚೌಡಯ್ಯ ಯುವಕ ಸಂಘದ ವತಿಯಿಂದ ಸಾಹಿತ್ಯ ಭವನ ಬಳಿ ರಕ್ತದಾನ ಶಿಬಿರ ಆಯೋಜಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.  ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣಪತ್ರ ವಿತರಿಸಲಾಯಿತು.
     ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.

Advertisement

0 comments:

Post a Comment

 
Top