PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ. ೩೧ (ಕರ್ನಾಟಕ ವಾ) ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆಯುವ ಗುರಿಯನ್ನಿಟ್ಟುಕೊಂಡು, ಅದಕ್ಕೆ ತಕ್ಕಂತೆ ಕಾರ್ಯ ಚಟುವಟಿಕೆಗಳನ್ನು ರೂಪಿಸಿ, ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮುಖ್ಯೋಪಾಧ್ಯಾಯರಿಗೆ ಕರೆ ನೀಡಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಭಾನುವಾರದಂದು ಏರ್ಪಡಿಸಲಾದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
        ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಾಗಿದೆ.  ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶವನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡು, ನಿಗದಿತ ಗುರಿ ಸಾಧನೆಗೆ   ಪ್ರಾಮಾಣಿಕತೆಯಿಂದ ಶ್ರಮಿಸಬೇಕು.  ಈ ವರ್ಷ ಶೇ. ೧೦೦ ರಷ್ಟು ಫಲಿತಾಂಶ ಪಡೆಯುವ ಶಾಲೆಗಳಿಗೆ ಸನ್ಮಾನ ದೊರೆತರೆ, ಶೇ. ೪೦ ಕ್ಕಿಂತ ಕಡಿಮೆ ಫಲಿತಾಂಶ ಪಡೆಯುವ ಶಾಲಾ ಶಿಕ್ಷಕರಿಗೆ ಅಮಾನತು ಶಿಕ್ಷೆ ಕಾದಿದೆ.  ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಶಾಲಾ ಶಿಕ್ಷಕರು ಶ್ರಮ ವಹಿಸಿ, ತಮ್ಮ ತಮ್ಮ ಶಾಲಾ ಮಕ್ಕಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸೂಕ್ತ ರೀತಿಯಲ್ಲಿ ಸಿದ್ಧಗೊಳಿಸಿ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರೌಢಶಾಲಾ ಶಿಕ್ಷಕರಿಗೆ ನೇರ ಮಾತುಗಳಲ್ಲಿ ಖಡಕ್ ಸೂಚನೆ ನೀಡಿದರು.
ಬೇರೆಡೆ ಸಾಧ್ಯವಾಗಿದ್ದು ಇಲ್ಲೇಕಿಲ್ಲ ? : ಜಿಲ್ಲೆಗೆ ಬಂದು ಅಧಿಕಾರ ಸ್ವೀಕರಿಸಿದ ದಿನವೇ, ಇಲ್ಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಮಾಣ ಹಾಗೂ ರಾಜ್ಯ ಮಟ್ಟದಲ್ಲಿ ಗಳಿಸಿದ ಸ್ಥಾನಮಾನದ ಮಾಹಿತಿ ಪಡೆದು, ತೀವ್ರ ಅಸಮಾಧಾನವಾಯಿತು.  ಉಡುಪಿ, ಚಿಕ್ಕೋಡಿ ಸೇರಿದಂತೆ ಹಲವು ಜಿಲ್ಲೆಗಳು ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯುತ್ತಿವೆ.  ಅಲ್ಲಿ ಸಾಧ್ಯವಾಗಿದ್ದು, ಇಲ್ಲೇಕೆ ಸಾಧ್ಯವಾಗುತ್ತಿಲ್ಲ.  ಇಲ್ಲಿನ ವಿದ್ಯಾರ್ಥಿಗಳಲ್ಲಿ ಬುದ್ದಿವಂತಿಕ್ ಇಲ್ಲವೇ?, ಕಲಿಕಾ ಸಾಮರ್ಥ್ಯ ಇಲ್ಲವೆ, ಅಥವಾ ಶಿಕ್ಷಕರೇ ಸರಿಯಾಗಿ ಬೋಧನೆ ಮಾಡುತ್ತಿಲ್ಲವೇ?, ಶಿಕ್ಷಕರು ತಮ್ಮ ಹೊಣೆಗಾರಿಕೆ ಮರೆತಿದ್ದಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಿಸುವಂತಹ ಕಾರ್ಯಗಳನ್ನು ಶಿಕ್ಷಕರು ಮಾಡಬೇಕಿದೆ ಎಂದರು.
        ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಆತನ ಆತ್ಮಸ್ಥೈರ್ಯ ಹೆಚ್ಚಿಸುವ ಮಹತ್ವದ ಘಟ್ಟವಾಗಿದೆ.  ತಂದೆ, ತಾಯಿಯ ನಂತರ ಗೌರವ ಸ್ಥಾನ ಇರುವುದು ಶಿಕ್ಷಕರಿಗೆ, ನವಭಾರತ ನಿರ್ಮಿಸುವ ಜವಾಬ್ದಾರಿ ಹೊಂದಿರುವವರು ಎಂದರೆ, ಶಿಕ್ಷಕರೆ.  ಎಲ್ಲ ವಿದ್ಯಾರ್ಥಿಗಳಿಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ರೀತಿಯಲ್ಲಿ ಆತ್ಮವಿಶ್ವಾಸ ಮೂಡಿಸಿ, ಸರ್ಕಾರಿ ಶಾಲಾ ಶಿಕ್ಷಕರು ಮೊದಲು ತಮ್ಮಲ್ಲಿನ ಕೀಳರಿಮೆಯನ್ನು ಬಿಡಿ.  ತಮಿಳುನಾಡಿನಲ್ಲಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಪಾಲಕರು ಪೈಪೋಟಿ ನಡೆಸುವ ಪರಿಸ್ಥಿತಿ ಇದೆ.  ಕಾರಣ ಅಲ್ಲಿನ ಶಿಕ್ಷಣ ಮತ್ತು ಶಿಕ್ಷಕರ ಗುಣಮಟ್ಟದ ಬಗ್ಗೆ ಪಾಲಕರಲ್ಲಿ ಅಪಾರವಾದ ವಿಶ್ವಾಸವಿದೆ.  ಇಲ್ಲಿಯೂ ಅಂತಹ ಪರಿಸ್ಥಿತಿ ನಿರ್ಮಾಣವಾಗುವಂತೆ ಶಿಕ್ಷಕರು ಮಾಡಬೇಕು.  ಶಿಕ್ಷಕರು ಕೊನೆಯ ಪಕ್ಷ ತಮ್ಮ ಆತ್ಮತೃಪ್ತಿಗೋಸ್ಕರವಾದರೂ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಎಂದು ಮನವಿ ಮಾಡಿದರು.
      ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ಅವರು ಮಾತನಾಡಿ, ಸ್ಥಾನಮಾನದ ಗುರಿಗಿಂತ ಶೇಕಡಾವಾರು ಹೆಚ್ಚು ಫಲಿತಾಂಶ ಪಡೆಯುವತ್ತ ಗಮನ ನೀಡಬೇಕಿದೆ.  ಶೇಕಡಾವಾರು ಉತ್ತಮ ಫಲಿತಾಂಶ ಬಂದಲ್ಲಿ, ಉತ್ತಮ ಸ್ಥಾನಮಾನ ತಂತಾನೆ ದೊರೆಯುತ್ತದೆ.  ಉಡುಪಿ ಜಿಲ್ಲೆಯನ್ನು ೧೬ ನೇ ಸ್ಥಾನದಿಂದ ಮೊದಲನೆ ಸ್ಥಾನಕ್ಕೆ ಕೊಂಡೊಯ್ಯಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  ಕಳೆದ ವರ್ಷ ಉಡುಪಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಹೆಚ್ಚುವರಿ ಅವಧಿ ಶಾಲೆಗಳು ಕಾರ್ಯ ನಿರ್ವಹಿಸಿವೆ.  ಇದು ಉತ್ತಮ ಪರಿಣಾಮ ಬೀರಿತು ಎಂದರು.  ಅಲ್ಲದೆ ಇಲ್ಲಿನ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿಕ್ಕಂತಹ ಉತ್ತಮ ಅವಕಾಶವಿದು ಎಂದು ಭಾವಿಸಿ, ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸುವಂತೆ ಕರೆ ನೀಡಿದರು. 
     ಕಾರ್ಯಗಾರದ ಅಂಗವಾಗಿ ವಿವಿಧ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಪಡಿಸಲು, ಸೂಕ್ತ ಮಾರ್ಗದರ್ಶನ ನೀಡಿದರು.
     ಇದಕ್ಕೂ ಪೂರ್ವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಿಡಿಪಿಐ ಶ್ಯಾಮಸುಂದರ್ ಅವರು, ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿದಂತೆ ಒಟ್ಟು ೨೭೯ ಪ್ರೌಢಶಾಲೆಗಳಿವೆ.  ೨೦೧೨-೧೩ ರಲ್ಲಿ ಶೇ. ೮೧. ೯೩, ೨೦೧೩-೧೪ ರಲ್ಲಿ ಶೇ. ೮೫. ೩೫ ಹಾಗೂ ೨೦೧೪-೧೫ ರಲ್ಲಿ ಶೇ. ೭೧. ೯೧ ರಷ್ಟು ಫಲಿತಾಂಶ ಬಂದಿದೆ.  ೨೦೧೪-೧೫ ರಲ್ಲಿ ಒಟ್ಟು ೨೪ ಶಾಲೆಗಳು ಮಾತ್ರ ಶೇ. ೧೦೦ ಫಲಿತಾಂಶ ಪಡೆದರೆ, ೨೧ ಶಾಲೆಗಳಲ್ಲಿ ಶೇ. ೪೦ ಕ್ಕಿಂತ ಕಡಿಮೆ ಫಲಿತಾಂಶ ಬಂದಿವೆ ಎಂದರು.
     ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top