PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ. ೨೩ (ಕ ವಾ) ನೊಂದ ಮನಸುಗಳಿಗೆ ಕೊಂಚ ಮಟ್ಟಿಗೆ ಸಮಾಧಾನ ನೀಡುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ.  ವೃದ್ಧಾಶ್ರಮಗಳಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯತ್ನ ಪ್ರಶಂಸಾರ್ಹವಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಅಭಿಪ್ರಾಯಪಟ್ಟರು.
     ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಪ್ಪಳದ ಮೈತ್ರಿ ವೃದ್ಧಾಶ್ರಮದ ಸಹಯೋಗದೊಂದಿಗೆ ಶನಿವಾರದಂದು ಮೈತ್ರಿ ವೃದ್ಧಾಶ್ರಮದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಕುಟುಂಬದಿಂದ, ಮನೆಗಳಿಂದ ಹಲವು ಕಾರಣಗಳಿಗಾಗಿ ಪರಿತ್ಯಕ್ತರಾದ ವೃದ್ಧರು ಜೀವನದಲ್ಲಿ ಆತ್ಮ ವಿಶ್ವಾಸವನ್ನು ಹೊಂದಿ, ಚಟುವಟಿಕೆಯಿಂದ ಬಾಳಬೇಕಾಗಿದೆ.  ಇದಕ್ಕಾಗಿ ಸಂಗೀತದ ಮೂಲಕ ಅವರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು.
     ವೃದ್ಧಾಶ್ರಮದ ವೃದ್ಧರಾದ ಮಲ್ಲಮ್ಮ ಹಾಗೂ ಪ್ರಶಾಂತಯ್ಯ ಅವರು ಸಂಗೀತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಪ್ರಾಸ್ತಾವಿಕ ಮಾತನಾಡಿದರು.  ವೃದ್ಧಾಶ್ರಮದ ಮೇಲ್ವಿಚಾರಕ ಅಶೋಕ ದರಿಯಪ್ಪನವರ, ಸಮಾಜ ಕಾರ್ಯಕರ್ತ ಕರಕಪ್ಪ ಮೇಟಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
     ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಕನೂರಿನ ಹಿರಿಯ ಕಲಾವಿದ ಕೃಷ್ಣಪ್ಪ ಭಜಂತ್ರಿ ತತ್ವಪದಗಳನ್ನು ಹಾಡಿ ವೃದ್ಧರ ಮನಸ್ಸಂತೋಷಪಡಿಸಿದರು.  ರವಿಕುಮಾರ್ ಮೆಣೆದಾಳ ತಬಲಾ ಸಾಥ್ ನೀಡಿದರು.

Advertisement

0 comments:

Post a Comment

 
Top