ಕೊಪ್ಪಳ ಡಿ. ೨೫ (ಕ ವಾ) ಕೃಷಿಯಲ್ಲಿನ ಆಧುನಿಕ ಅವಿಷ್ಕಾರಗಳು ಹಾಗೂ ಹೊಸ ಪದ್ಧತಿಗಳ ಬಗ್ಗೆ ರೈತರು ಮಾಹಿತಿ ಪಡೆದುಕೊಂಡು, ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ ಅವರು ರೈತರಿಗೆ ಕರೆ ನೀಡಿದರು.ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ ಮತ್ತು ಸರ್ವೋದಯ ಸಂಸ್ಥೆ, ಕೊಪ್ಪಳ ಇವರ ಸಹಯೋಗದಲ್ಲಿ ಕುಷ್ಟಗಿ ತಾಲೂಕು ಹನುಮನಾಳ ಗ್ರಾಮದಲ್ಲಿ ಏರ್ಪಡಿಸಲಾದ ರೈತ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ರೈತರಿಗೆ ಸೇವೆ ಸಲ್ಲಿಸಲೆಂದೇ ಕೃಷಿ ವಿಶ್ವವಿದ್ಯಾಲಯದ ವಿವಿಧ ಕೇಂದ್ರಗಳು ಅಲ್ಲದೆ ಕೃಷಿ, ತೋಟಗಾರಿಕೆ ಇಲಾಖೆಗಳಿವೆ. ಕೃಷಿಯಲ್ಲಿ ಆವಿಷ್ಕಾರಗೊಳ್ಳುವ ಆಧುನಿಕ ಯಂತ್ರೋಪಕರಣಗಳು, ನೂತನ ಕೃಷಿ ಪದ್ಧತಿಗಳ ಬಗ್ಗೆ ರೈತರು ತಾಂತ್ರಿಕ ಮಾಹಿತಿ ಪಡೆದುಕೊಂಡು, ಜಾಗತೀಕರಣಕ್ಕೆ ಅನುಗುಣವಾಗಿ ಪ್ರಗತಿಪರರಾಗಬೇಕು. ನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಯಶಸ್ಸು ಪಡೆದಿರುವ ಹಲವಾರು ಪ್ರಗತಿ ಪರ ರೈತರ ಬಗ್ಗೆ ನಿದರ್ಶನಗಳು ನಮ್ಮ ಕಣ್ಣೆದುರಿಗಿವೆ. ಇಂತಹ ರೈತರಿಂದ ಪ್ರೇರಿತರಾಗಿ, ಕೃಷಿಯಲ್ಲಿ ಯಶಸ್ಸು ಪಡೆದುಕೊಳ್ಳಬೇಕು ಎಂದು ಡಾ. ಎಸ್.ಕೆ. ಮೇಟಿ ಅವರು ಹೇಳಿದರು.ಹನುಮನಾಳ ಗ್ರಾಮದ ಪ್ರಗತಿಪರ ರೈತ ಪಿ.ಎಸ್ ನಾಗರಾಳ ಅವರು ಮಾತನಾಡಿ, ಕೃಷಿ ಬೆಳೆಗಳ ಜೊತೆಗೆ, ಕೃಷಿ ಅರಣ್ಯ ಮತ್ತು ತೋಟಗಾರಿಕೆ ಬೆಳೆಗಳಾದ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆದರೆ ಹೆಚ್ಚಿನ ಲಾಭ ಪಡೆಯಬಹುದೆಂದು ತಿಳಿಸಿದರು. ಇನ್ನೋರ್ವ ಪ್ರಗತಿಪರ ರೈತ ಜಯತೀರ್ಥ ದೇಸಾಯಿ ಅವರು ತಮ್ಮದೇ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಹೈನುಗಾರಿಕೆಯ ಮಹತ್ವ
ತಿಳಿಸಿದರು. ಬಾಯರ್ ಸಂಸ್ಥೆಯ ಸಿ.ಎಸ್ ಮಾಥ್ಯು ಅವರು ಮಾತನಾಡಿ ರೈತರು ಕೃಷಿ
ತರಬೇತಿಗಳಲ್ಲಿ ಹೆಚ್ಚು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕೆಂದು ತಿಳಿಸಿದರು.ಕೊಪ್ಪಳದ
ಜಂಟಿ ಕೃಷಿ ನಿರ್ದೇಶಕ ರಾಮದಾಸ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ
ವಿಸ್ತರಣಾ ಮುಂದಾಳು ಡಾ ಎಂ.ಬಿ ಪಾಟೀಲ ಅವರು ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿಪರ
ರೈತರಾದ ಮಹೇಶ ಕಟ್ಟಿಮನಿ, ಸರ್ವೋದಯ ಸಂಸ್ಥೆಯ ಅಧ್ಯಕ್ಷ ನಾಗರಾಜ ದೇಸಾಯಿ
ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸರ್ವೋದಯ ಸಂಸ್ಥೆ ವತಿಯಿಂದ ೬ ತಿಂಗಳುಗಳ ಕಾಲ
ಸಮಗ್ರ ಕೃಷಿ ಪದ್ದತಿಯ ಬಗ್ಗೆ ತರಬೇತಿ ಪಡೆದ ೨೫ ಶಿಬಿರಾರ್ಥಿಗಳಿಗೆ ಗಣ್ಯರ ಮೂಲಕ
ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗಂಗಾವತಿ ಕೃಷಿ ಸಂಶೋಧನಾ
ಕೇಂದ್ರದ ವಿಜ್ಞಾನಿ ಡಾ. ಗುರುಪ್ರಸಾದ ಅವರು ರೈತರಿಗೆ ಜೈವಿಕ ಕೀಟ ನಿರ್ವಹಣೆಗಾಗಿ ಅಂಟು
ಬಲೆಗಳನ್ನು ವಿತರಿಸಿದರು. ವಿಷಯ ತಜ್ಞ ಡಾ. ಜಿ.ಎನ್ ಮರಡ್ಡಿ ಅವರು ಕಾರ್ಯಕ್ರಮ
ನಿರೂಪಿಸಿದರು. ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕ ಸತ್ಯನಾರಾಯಣ ಸ್ವಾಗತಿಸಿದರು.
ಸರ್ವೋದಯ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ ವಂದಿಸಿದರು. ಹನುಮನಾಳ ಹಾಗೂ
ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.
Subscribe to:
Post Comments (Atom)
0 comments:
Post a Comment