PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೧೯ (ಕರ್ನಾಟಕ ವಾರ್ತೆ) ಕೊಪ್ಪಳದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ನಾಡು, ನುಡಿ ಹಾಗು ಸಂಸ್ಕೃತಿ ಕುರಿತು, ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶನಿವಾರದಂದು ಏರ್ಪಡಿಸಲಾದ ಲೇಸರ್ ಪ್ರದರ್ಶನ ಜನ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
     ಈ ಬಾರಿಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಾರ್ತಾ ಇಲಾಖೆಯಿಂದ ಹೊಸದಾಗಿ ರೂಪಿಸಲಾಗಿರುವ ಬಾರಿಸು ಕನ್ನಡ ಡಿಂಡಿಮವ..... ಓ ಕರ್ನಾಟಕ ಹೃದಯ ಶಿವಾ..... ಹಾಡಿಗೆ ತಕ್ಕಂತೆ ಸಪ್ತ ವರ್ಣದ ಬೆಳಕಿನ ಕಿರಣಗಳು ಕುಣಿದಾಡಿ, ಪ್ರೇಕ್ಷಕರನ್ನು ಬೆಳಕಿನ ವೈಭದ ಲೋಕಕ್ಕೆ ಕರೆದೊಯ್ದವು.   ಸುವರ್ಣ ಕರ್ನಾಟಕದ ಹೆಸರಿನಲ್ಲಿ ನಿರ್ಮಿಸಿರಿವ ಮತ್ತೊಂದು ಲೇಸರ್ ಪ್ರದರ್ಶನವೂ ಕ್ಷಣ ಕಾಲ ಇಡೀ ರಾಜ್ಯದ ನಾಡು, ನುಡಿಯಚಿತ್ರಣವನ್ನು ಒಮ್ಮೆ ಕಣ್ಣೆದುರು ತಂದು ನಿಲ್ಲಿಸಿತು.  ಕರ್ನಾಟಕದ ಇತಿಹಾಸ, ನಾಡು, ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ನಾಡಿನ ಸವಾಂಗೀಣ ಅಭಿವೃದ್ಧಿ ಕುರಿತಂತೆ ನಿರ್ಮಿಸಿದ ಲೇಸರ್ ಪ್ರದರ್ಶನದಲ್ಲಿ ರಾಜ್ಯದ ಹಿರಿಮೆಯನ್ನು ಬಿಂಬಿಸಿತು.  ಪುಣ್ಯಕೋಟಿ ಗೋವಿನ ಹಾಡು, ಸತ್ಯವೇ ನಮ್ಮ ತಾಯಿ, ತಂದೆ, ಸತ್ಯವೇ ನಮ್ಮ ಬಂಧು ಬಳಗ.... ಎಂಬ ಪುಣ್ಯಕೋಟಿ ಆಕಳ-ಕರು ಹಾಡಿಗೆ ತಕ್ಕಂತೆ ಲೇಸರ್ ಪ್ರದರ್ಶನದಲ್ಲಿ ಚಿತ್ರಗಳು ಅತ್ಯುತ್ತಮವಾಗಿ ಮೂಡಿ ಬಂದವು.  ಪ್ರಯಾಣದ ತರಾತುರಿಯಲ್ಲಿರುವ ಪ್ರಯಾಣಿಕರೂ ಸಹ, ಕೆಲ ಹೊತ್ತು ತಮ್ಮ ಪ್ರಯಾಣವನ್ನು ಮುಂದೂಡಿ, ಆಕರ್ಷಕ ಲೇಸರ್ ಪ್ರದರ್ಶನ ವೀಕ್ಷಿಸಲು ಮುಂದಾಗಿದ್ದು ಕಂಡುಬಂದಿತು.  ಒಟ್ಟಾರೆ ೩೦ ನಿಮಿಷಗಳ ಅವಧಿಯ ಲೇಸರ್ ಪ್ರದರ್ಶನ ನೂರಾರು ಸಂಖ್ಯೆಯಲ್ಲಿದ್ದ ಪ್ರೇಕ್ಷಕರ ಮನ ಸೂರೆಗೊಂಡಿತು.  ಲೇಸರ್ ಪ್ರದರ್ಶನವು ಕನ್ನಡ ನಾಡಿನ ಇತಿಹಾಸವನ್ನು ಮೆಲುಕು ಹಾಕುವಂತೆ ಮಾಡಿದೆ, ಅಲ್ಲದೆ ನಾಡಿನ ಸಂಸ್ಕೃತಿಯನ್ನು ಜನತೆಗೆ ಪರಿಚಯಿಸುವಂತೆ ಮಾಡಿದೆ ಎಂದು ಕೆಲ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Advertisement

0 comments:

Post a Comment

 
Top