PLEASE LOGIN TO KANNADANET.COM FOR REGULAR NEWS-UPDATES

ಭಾರತಿಯ ಜನತಾ ಪಕ್ಷದ ಆಡಳಿತ ಅವಧಿಯಲ್ಲಿ ಮಂಜೂರಾಗಿರುವ ಮೆಡಿಕಲ್ ಕಾಲೇಜ್, ಕೇಂದ್ರ ಸರ್ಕಾರದ ಎಂ.ಸಿ.ಐ. ಪರವಾನಿಗೆ, ಸಿಂಗಟಾಲೂರ ಏತನೀರಾವರಿ, ಕೃಷ್ಣಾ ಬಿ.ಸ್ಕೀಮ್ ನಂತಹ ಮಹತ್ತರವಾದ ಹಲವಾರು ಯೋಜನೆಗಳನ್ನು ತಮ್ಮದೆ ಯೋಜನೆಗಳೆಂದು ಬಿಂಭಿಸಿಕೊಳ್ಳುತ್ತಿರುವ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಶೂನ್ಯ ಕೊಡುಗೆಯನ್ನು ನೀಡಿದ್ದಾರೆ. ಸುಮ್ಮನೆ ಆರೋಪಿಸುವುದನ್ನು ಬಿಟ್ಟು ಅವರು ತಂದಿರುವ ಅನುದಾನದ ವಿವರಗಳನ್ನು ದಾಖಲೆ ಸಮೇತ ಬಿಡುಗಡೆಗೊಳಿಸಲಿ, ಇನ್ಯಾರದೋ ಯೋಜನೆಗೆ ತಮ್ಮ ಹೆಸರು ಇಟ್ಟುಕೊಳ್ಳುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು. ಅವರು ದಿನಾಂಕ:೧೮-೧೨-೨೦೧೫ ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿದರು. ಉಸ್ತುವಾರಿ ಸಚಿವರು ಬೇಕಾಬಿಟ್ಟಿಯಾಗಿ ರೈತರಿಗೆ ಜೀವನಾಡಿಯಾಗಿರುವ ಸಣ್ಣ ಕೆರೆಗಳ ಅಭಿವೃದ್ಧಿ ನೆಪದಲ್ಲಿ ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆಯುವುದನ್ನು ನಿಲ್ಲಿಸಬೇಕು, ಬರಿ ಕನಕಗಿರಿಗೆ ಸೀಮಿತವಾಗಿರದೆ ಜಿಲ್ಲೆಯಲ್ಲಿರುವ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸವನ್ನು ಸಚಿವರು ಕೈಗೊಳ್ಳಲಿ ಎಂದು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರ ಸರಣಿ ಆತ್ಮಹತ್ಯೆಯನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಮಳೆಯಿಲ್ಲದೆ ರೈತ ಸಮುದಾಯ ಕುಟುಂಬ ಸಮೇತ ಗುಳೆ ಹೊರಟರೂ ಸರ್ಕಾರ ಬಡವರ ಬಗ್ಗೆ ಕಣ್ತೆರೆಯದೆ ಇರುವುದು ಅತ್ಯಂತ ದುರಂತವಾಗಿದೆ. ಇರುವ ಸಣ್ಣ ಜಮೀನುಗಳಲ್ಲಿ ನೀರಾವರಿಯಿಂದ ಕೃಷಿ ಮಾಡಲು ಸರಿಯಾಗಿ ವಿದ್ಯುತ್‌ನ್ನು ಸಹ ನೀಡುತ್ತಿಲ್ಲ. ಭೀಕರ ಬರಗಾಲ ಪ್ರಾರಂಭದ ಮುನ್ಸೂಚನೆ ಇದ್ದರೂ ಯಾವುದೆ ಬರಗಾಲ ಕಾಮಗಾರಿ ಪ್ರಾರಂಭವಾಗಿಲ್ಲ, ರೈತರಿಗೆ ಘೋಷಿತವಾಗಿರುವ ಬರಪರಿಹಾರವನ್ನೂ ಸಹ ಸರ್ಕಾರ ನೀಡದೆ ಇರುವಂತದ್ದು ರೈತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಭಾರತಿಯ ಜನತಾ ಪಕ್ಷವು ಅಧಿಕಾರದ ಅವಧಿಯಲ್ಲಿ ಬೇರೆ ರಾಜ್ಯದಿಂದ ವಿದ್ಯುತ್‌ನ್ನು ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಯೊಬ್ಬ ಸಾಮಾನ್ಯ ಜನರೂ ಸಹ ಆರ್ಥಿಕವಾಗಿ ಸಭಲರಾಗಬೇಕು, ಫೈನಾನ್ಸ ಹಾಗೂ ಬಡ್ಡಿ ವ್ಯವಹಾರಸ್ಥರಿಂದ ನಿರಾಳ ಬದುಕು ಸಾಗಿಸಬೇಕೆಂಬ ಮಹತ್ವಕಾಂಕ್ಷಿಯಿಂದ ಸಣ್ಣ ಸಣ್ಣ ಉದ್ದಿಮೆದಾರರಿಗೆ, ವ್ಯಾಪಾರಸ್ಥರಿಗೆ ಮುದ್ರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ಮಂಜೂರು ಮಾಡುವ ಯೋಜನೆಯನ್ನು ಜಾರಿಗೊಳಿಸಿರುವುದು, ಬಡವರು ಸವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗಿದೆ. ಪ್ರಧಾನಮಂತ್ರಿ ಜನ್‌ಧನ್ಯೋಜನೆ, ಭೇಟಿ ಬಚಾವ್ ಭೇಟಿ ಪಡಾವ್, ಸುಕನ್ಯ ಸಮೃದ್ಧಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಆಮ ಆದಮಿ ಭೀಮಾ ಯೋಜನೆ, ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ, ಮುಂತಾದ ಹಲವಾರು ಯೋಜನೆಗಳ ಮೂಲಕ ಸಾಮಾನ್ಯ ಜನರ ದುಡಿಯುವ ಕೈಗಳಿಗೆ ಕೆಲಸ ನೀಡುವ ಹಿನ್ನೆಲೆಯಲ್ಲಿ ಉತ್ತಮ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದವರು.
ಅಭ್ಯರ್ಥಿ ಸಿ.ವಿ.ಚಂದ್ರಶೇಖರ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿ, ಕರಡಿ ಸಂಗಣ್ಣನವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಮತ ನೀಡಬೇಕೆಂದು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರಾದ ಗವಿಸಿದ್ದಪ್ಪ ಕಂದಾರಿ, ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ, ಚಂದ್ರಶೇಖರ ಪಾಟೀಲ್ ಹಲಗೇರಿ, ಮಾರುತೆಪ್ಪ ಹಲಗೇರಿ, ವಿರುಪಾಕ್ಷಪ್ಪ ನವೋದಯ, ರಾಜು ಬಾಕಳೆ, ತೋಟಪ್ಪ ಕಾಮನೂರ, ಮಲ್ಲಣ್ಣ ಬೇಲೇರಿ, ಭರತ ನಾಯಕ, ಶಿವಯ್ಯ ಹ್ಯಾಟಿ, ಖಾಜಾವಲಿ ರೇವಡಿ, ವಿರುಪಾಕ್ಷಯ್ಯ ಗದುಗಿನಮಠ ಮುಂತಾದವರು ಭಾಗವಹಿಸಿದ್ದರು.

Advertisement

0 comments:

Post a Comment

 
Top