ಕೊಪ್ಪಳ ನ. ೨೩ (ಕ ವಾ) ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ೧೨೫ನೇ ಹುಟ್ಟು ಹಬ್ಬದ ವರ್ಷಾಚರಣೆ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರವ ನವಭಾರತದ ನಿರ್ಮಾತೃ ಪಂಡಿತ ಜವಾಹರಲಾಲ್ ನೆಹರು ಅವರ ಜೀವನ ಸಾಧನೆಯ ಎರಡು ದಿನಗಳ ಅಪೂರ್ವ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸೋಮವಾರದಂದು ಚಾಲನೆ ನೀಡಿದರು.
ಜವಾಹರಲಾಲ್ ನೆಹರೂ ಅವರ ಜೀವನದ ಸಾಧನೆಯ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ಕೃಷ್ಣ ಉದಪುಡಿ ಅವರು ಮಾತನಾಡಿ, ಈ ಪ್ರದರ್ಶನವು ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾದ ಪ್ರದರ್ಶನವಾಗಿದ್ದು, ಇತಿಹಾಸದ ಪಾಠದೊಂದಿಗೆ ಛಾಯಾಚಿತ್ರಗಳ ಪ್ರತ್ಯಕ್ಷ ವೀಕ್ಷಣೆ ವಿದ್ಯಾರ್ಥಿಗಳಿಗೆ ಚೇತೋಹಾರಿಯಾಗಿದೆ, ಪಂಡಿತ ಜವಾಹರಲಾಲ್ ನೆಹರು ಅವರ ಜೀವನ ಸಾಧನೆಯ ಛಾಯಾಚಿತ್ರ ಮನಸ್ಸನಿನಲ್ಲಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು. ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು ಛಾಯಾಚಿತ್ರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳ ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ: ಭಾರತದ ಪ್ರಥಮ ಪ್ರಧಾನಮಂತ್ರಿ ಹಾಗೂ ನವಭಾರತದ ನಿರ್ಮಾತೃ ಪಂಡಿತ ಜವಾಹರಲಾಲ್ ನೆಹರು ಅವರ ಜೀವನ ಸಾಧನೆಯ ಎರಡು ದಿನಗಳ ಅಪೂರ್ವ ಛಾಯಾಚಿತ್ರ ಪ್ರದರ್ಶನವು ಶುಕ್ರವಾರ ಶಾಲಾ-ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
ಪಂಡಿತ್ ಜವಾಹರಲಾಲ್ ನೆಹರು ಅವರ ೧೨೫ನೇ ಹುಟ್ಟು ಹಬ್ಬದ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿರುವ ಈ ಅಪರೂಪದ ಛಾಯಾಚಿತ್ರ ಪ್ರದರ್ಶನದಲ್ಲಿ ಒಟ್ಟು ೮೧ ಚಿತ್ರಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಾರ್ತಾ ಸಚಿವ ಆರ್. ರೋಷನ್‌ಬೇಗ್ ಅವರ ಸಂದೇಶದೊಂದಿಗೆ ಪ್ರದರ್ಶನ ಆರಂಭಗೊಳ್ಳುತ್ತದೆ. ೧೯೪೭ರಿಂದ ೧೯೬೪ರ ವರೆಗೆ ದೇಶದ ಪ್ರಧಾನಿಯಾಗಿದ್ದ ನೆಹರು ಭಾರತೀಯ ರಾಜಕಾರಣದಲ್ಲಿ ಅಪೂರ್ವ ಜನಪ್ರಿಯತೆ ಗಳಿಸಿದ್ದು, ಕೃಷಿ, ಕೈಗಾರಿಕೆ, ವಿಜ್ಞಾನ, ನೀರಾವರಿ ವಲಯಗಳಿಗೆ ಉತ್ತೇಜನ ನೀಡಿ ಭವ್ಯ ಭಾರತದ ನಿರ್ಮಾಣಕ್ಕೆ ಹಾಗೂ ದೇಶದ ಸಂಪೂರ್ಣ ಬೆಳವಣಿಗೆ ಸಾಧಿಸುವ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನದಂತಹ ಅನೇಕ ಸಾಧನೆಯ ಮತ್ತು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದ ಯುವಕ ಜವಾಹರಲಾಲರ ಅಲಹಾಬಾದ ಮನೆ ಆನಂದ ಭವನ, ತಂದೆ ಮೋತಿಲಾಲ್ ನೆಹರು, ಪ್ರಿಯದರ್ಶಿನಿ ಇಂದಿರಾಗಾಂಧಿ ಮತ್ತು ಮೊಮ್ಮಕ್ಕಳು ಹಾಗೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್ ಅವರೊಂದಿಗೆ ಕಳೆದ ಕ್ಷಣಗಳ ಚಿತ್ರಣ ಪ್ರದರ್ಶನದಲ್ಲಿ ಒಡಮೂಡಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯರೊಂದಿಗಿನ ನಿಕಟ ಸಂಪರ್ಕ, ನೇತಾರ ವಿನೋಬಾಭಾವೆ ಮತ್ತು ಬಾಬು ರಾಜೇಂದ್ರ ಪ್ರಾಸಾದರೊಂದಿಗಿನ ಒಡನಾಟದ, ಖ್ಯಾತ ಅರ್ಥಶಾಸ್ತ್ರಜ್ಞ ಪಿ.ಸಿ. ಮಹಾಲನೋಬಿಸ್ ಅವರೊಂದಿಗಿನ, ಭಾರತದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವಿಶ್ವದ ಹಲವಾರು ದೇಶಗಳ ನೆರವು ಬಯಸಿ ಪ್ರವಾಸ ಕೈಗೊಂಡ ಬಗ್ಗೆ, ಮಕ್ಕಳು ಹಾಗೂ ಯುವ ಜನತೆಯ ಸರ್ವಾಂಗೀಣ ವಿಕಾಸಕ್ಕೆ ಹಲವು ಕಾರ್ಯಕ್ರಮ ಜಾರಿ, ಕರ್ನಾಟಕದ ಮೇಲಿನ ಪ್ರೀತಿಗಾಗಿ ವಿವಿಧ ಸಂದರ್ಭಗಳಲ್ಲಿ ವಿಶೇಷವಾಗಿ ವಿಧಾನ ಸೌಧದ ಶಿಲಾನ್ಯಾಸ ಮತ್ತಿತರ ಕಾರ್ಯಕ್ರಮಗಳಗಾಗಿ ಹಲವು ಬಾರಿ ಭೇಟಿ ನೀಡಿದ, ಪಂಚವಾರ್ಷಿಕ ಯೋಜನೆಗಳ ಜಾರಿ ಸಂದರ್ಭದಲ್ಲಿ ತಜ್ಞರೊಂದಿಗಿನ ಚರ್ಚೆ, ನೆಹರು ಚಿತಾಭಸ್ಮ ಬೆಂಗಳೂರಿಗೆ ಬಂದಾಗ ಗೌರವಾರ್ಪಣೆಯ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ.
ಜವಹರಲಾಲ್ ನೆಹರು ಅವರ ಜೀವನ ಗಾಥೆಯೊಂದಿಗೆ ಪ್ರದರ್ಶನ ಕೊನೆಗೊಳ್ಳುತ್ತದೆ. ಪ್ರದರ್ಶನದ ಪ್ರವೇಶ ದ್ವಾರದಲ್ಲಿಟ್ಟ ಪಂಡಿತ್ ನೆಹರು ಪುತ್ಥಳಿ, ಟಿವಿ ಪ್ರದರ್ಶನ ಹಾಗೂ ಬಯಸ್ಕೋಪ್ ಮೂಲಕ ನೆಹರು ಚಿತ್ರ ದರ್ಶಕ ವೀಕ್ಷಣಾ ವ್ಯವಸ್ಥೆ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ. ಬಯಸ್ಕೋಪ್‌ನಲ್ಲಿ ೨೨ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
ಜವಾಹರಲಾಲ್ ನೆಹರೂ ಅವರ ವಿಶೇಷ ಛಾಯಾಚಿತ್ರ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಜಿಲ್ಲೆಯ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು, ನೆಹರೂ ಅಭಿಮಾನಿಗಳು ನ. ೨೪ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯ ವರೆಗೂ ನಗರದ ಸಾಹಿತ್ಯ ಭವನದಲ್ಲಿ ಚಿತ್ರ ಪ್ರದರ್ಶನ ವೀಕ್ಷಿಸಬಹುದಾಗಿದೆ.
0 comments:
Post a Comment