PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ. ೨೫ (ಕ ವಾ)ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.
     ಕರ್ನಾಟಕ ವಿಧಾನಪರಿಷತ್ತಿನ ೨೫ ಸದಸ್ಯರ ಅವಧಿ ೨೦೧೬ ರ ಜನವರಿ ೦೫ ಕ್ಕೆ ಮುಗಿಯಲಿರುವ ಹಿನ್ನೆಲೆಯಲ್ಲಿ, ಇದೀಗ ವಿಧಾನಪರಿಷತ್ತಿನ ೨೫ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಗೊಂಡಿದೆ.  ರಾಯಚೂರು ಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ಹಾಲಪ್ಪ ಬಸಪ್ಪ ಆಚಾರ್ ಅವರ ಅವಧಿ ೨೦೧೬ ರ ಜನವರಿ ೦೫ ಕ್ಕೆ ಮುಕ್ತಾಯವಾಗಲಿದೆ.  ಪ್ರಕಟಿತ ವೇಳಾಪಟ್ಟಿ ಅನ್ವಯ ಚುನಾವಣಾ ಅಧಿಸೂಚನೆ ಡಿ. ೦೨ ರಂದು ಹೊರಡಿಸಲಾಗುವುದು.  ನಾಮಪತ್ರ ಸಲ್ಲಿಸಲು ಡಿ. ೦೯ ಕೊನೆಯ ದಿನಾಂಕವಾಗಿರುತ್ತದೆ.  ನಾಮಪತ್ರಗಳ ಪರಿಶೀಲನೆ ಡಿ. ೧೦ ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಡಿ. ೧೨ ಕೊನೆಯ ದಿನವಾಗಿರುತ್ತದೆ.  ಮತದಾನ ಡಿ. ೨೭ ರಂದು ಬೆಳಿಗ್ಗೆ ೦೮ ಗಂಟೆಯಿಂದ ಸಂಜೆ ೦೪ ಗಂಟೆಯವರೆಗೆ ನಡೆಯಲಿದೆ.  ಮತಗಳ ಎಣಿಕೆ ಡಿ. ೩೦ ರಂದು ನಡೆಯಲಿದೆ.  ಚುನಾವಣೆ ಪ್ರಕ್ರಿಯೆ ೨೦೧೬ ರ ಜನವರಿ ೦೧ ರೊಳಗೆ ಪೂರ್ಣಗೊಳ್ಳಲಿದೆ.  ವಿಧಾನಪರಿಷತ್ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿರುವುದರಿಂದ, ಚುನಾವಣೆ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.


Advertisement

0 comments:

Post a Comment

 
Top