PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ.೨೭ (ಕ ವಾ) ಐತಿಹಾಸಿಕವಾಗಿ, ಸಾಹಿತ್ಯಿಕವಾಗಿ ಈ ಜಗತ್ತಿಗೆ ನಾಯಕ ಜನಾಂಗದ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಾಹಿತ್ಯ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಏಕಲವ್ಯ, ಬೇಡರ ಕಣ್ಣಪ್ಪ ಅವರಂತಹ ಮಹಾನ್ ತ್ಯಾಗಿಗಳನ್ನು ಪಡೆದಿರುವ ನಾಯಕ ಜನಾಂಗ ತ್ಯಾಗ ಗುಣದಲ್ಲಿ ಸದಾ ಮುಂದಿದೆ. ಪ್ರಸ್ತುತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ನಾಯಕ ಸಮಾಜವನ್ನು ಶಿಕ್ಷಣದಿಂದ ಅಭಿವೃದ್ಧಿಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ನಾಗರೀಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಸಬಲರನ್ನಾಗಿಸಬೇಕಿದೆ ಹಾಗೂ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅವರನ್ನು ಅಭಿವೃದ್ಧಿಗೊಳಿಸಬೇಕಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವತಿಯಿಂದ ಈ ವರೆಗೆ ಪರಿಶಿಷ್ಟ ಪಂಗಡದ ೧೪೦೦ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ೧೭೮ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು, ೨೨ ಸಾವಿರ ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯ ೨,೦೦೦ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಬೋರ್‌ವೆಲ್ ಹಾಕಿಸಿಕೊಡಲಾಗಿದೆ ಎಂದು ಅವರು ಹೇಳಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಆದೇಶ ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಟಿಬದ್ಧವಾಗಿದ್ದು, ಪರಿಶಿಷ್ಟ ಪಂಗಡದವರಿಗೆ ಶೇಕಡಾ ೭.೫ ರಷ್ಟು ಮೀಸಲಾತಿ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸಲಿದೆ ಎಂದು ಅವರು ಭರವಸೆ ನೀಡಿದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ಸಂಗಣ ಕರಡಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಆಧ್ಯಾತ್ಮ ಜೀವನ ಕ್ರಮದಿಂದ ಪರಿಪೂರ್ಣ ಬದುಕನ್ನು ರೂಪಿಸಿಕೊಳ್ಳಬಹುದಾಗಿದ್ದು, ಮಹರ್ಷಿ ವಾಲ್ಮೀಕಿಯವರಂತಹ ಸಂತರ, ಶರಣರ ಚರಿತ್ರೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಗುರುಗಳಿಗಾಗಿ ತನ್ನ ಹೆಬ್ಬೆರಳನ್ನೇ ನೀಡಿದ ಏಕಲವ್ಯ ಹಾಗೂ ಶಿವನಿಗಾಗಿ ತನ್ನ ಕಣ್ಣುಗಳನ್ನೇ ನೀಡಿದ ಬೇಡರ ಕಣ್ಣಪ್ಪನಂತವರನ್ನು ಪಡೆದಿರುವ ನಾಯಕ ಜನಾಂಗವು ತ್ಯಾಗದ ಅರ್ಥಪೂರ್ಣ ಸಂಕೇತವಾಗಿದೆ. ಪುಷ್ಪಕ ವಿಮಾನದಂತಹ ತಂತ್ರಜ್ಞಾನವನ್ನು ಮಹರ್ಷಿ ವಾಲ್ಮೀಕಿಗಳು ಆಗಿನ ಕಾಲದಲ್ಲಿಯೇ ತಮ್ಮ ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವುದು ಅವರ ಕಲ್ಪನಾಶಕ್ತಿಯನ್ನು ಪ್ರತಿ ಬಿಂಬಿಸುವಂತಿದೆ. ಇಂತಹ ಮಹಾನ್ ಪುರುಷರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಸಫಲತೆಯನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದರು.  ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಪರೀಕ್ಷಿತರಾಜ್ ಅವರು ಮಾತನಾಡಿ, ಇಂದು ನಾವು ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರನ್ನು ಬಿಟ್ಟು, ರಾಮಾಯಣದ ರಾಮನನ್ನು ಪೂಜಿಸುತ್ತಿರುವುದು ವಿಪರ್ಯಾಸವಾಗಿದೆ.  ಈ ಜಗತ್ತಿನಲ್ಲಿ ಆತಂಕತೆಯೇ ಇಲ್ಲದ ಸಮಾಜವೇನಾದರೂ ಇದ್ದಲ್ಲಿ ಅದು ವಾಲ್ಮೀಕಿ ಸಮಾಜ ಮಾತ್ರ. ರಾಜ್ಯದಲ್ಲಿ ಸುಮಾರು ೬೦ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ವಾಲ್ಮೀಕಿ ಸಮಾಜಕ್ಕೆ ಇಂದು ಕೇವಲ ಶೇಕಡಾ ೩ ರಷ್ಟು ಮೀಸಲಾತಿ ಕಲ್ಪಿಸಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರವು ಪರಿಶಿಷ್ಟ ಪಂಗಡಕ್ಕೆ  ಶೇಕಡಾ ೭.೫ ರಷ್ಟು ಮೀಸಲಾತಿ ಕಲ್ಪಿಸಿದರೂ ಕೂಡ ಅದು ಅತ್ಯಲ್ಪವಾಗಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ನಾಯಕ ಜನಾಂಗಕ್ಕೆ ವಿಶಿಷ್ಟ ಮೀಸಲಾತಿ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಬೇಕಿದೆ. ಅಂದಾಗ ಮಾತ್ರ ನಾಯಕರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಂಪೂರ್ಣ ಅಭಿವೃದ್ಧಿ ಹೊಂದುವುದು ಸಾಧ್ಯವಾಗಲಿದೆ. ಸಮಾಜದ ಯುವಕರು ತಮ್ಮ ತಮ್ಮಲ್ಲಿಯ ವೈಮನಸ್ಸನ್ನು ಮರೆತು, ಒಗ್ಗಟ್ಟಿನಿಂದ ಸಂಘಟಿತರಾದಲ್ಲಿ ಜನಾಂಗದ ಏಳ್ಗೆ ಜರುಗಲಿದೆ.  ಪ್ರಸ್ತುತ ನಾಯಕ ಜನಾಂಗದಲ್ಲಿ ವಿದ್ಯಾವಂತರ ಕೊರತೆಯಿದ್ದು, ಅವಿದ್ಯಾವಂತರು ವಿದ್ಯಾವಂತರ ಮಾರ್ಗದರ್ಶನದಲ್ಲಿ ಸಮಾಜವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಬೇಕಿದೆ. ಸದಾ ನೀಡುವುದನ್ನೇ ತನ್ನ ಹುಟ್ಟು ಗುಣವಾಗಿರಿಸಿಕೊಂಡಿರುವ ನಾಯಕರು, ಎಂದಿಗೂ ಬೇಡುವ ಗುಣವನ್ನು ಬೆಳೆಸಿಕೊಳ್ಳದಿರಲಿ. ರಾಜಕೀಯವಾಗಿ ಅಧಿಕಾರದಲ್ಲಿರುವ ನಾಯಕರು ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ನಾಯಕ ಜನಾಂಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಾಲ್ಮೀಕಿ ಗುರು ಪೀಠದಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು ಅವಶ್ಯಕವಾಗಿದೆ. ಜಿಲ್ಲಾಡಳಿತವು ಕೊಪ್ಪಳ ಜಿಲ್ಲೆಯಲ್ಲಿರುವ ಕಮ್ಮಟ ದುರ್ಗ ಸೇರಿದಂತೆ ವಾಲ್ಮೀಕಿ ಜನಾಂಗಕ್ಕೆ ಸಂಬಂಧಪಟ್ಟ ಇತ್ಯಾದಿ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ, ಅವುಗಳನ್ನು ಅಭಿವೃದ್ಧಿಗೊಳಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಭಾರಿ ಜಿಲ್ಲಾಧಿಕಾರಿ ಡಾ|| ಜಿ.ಎಲ್.ಪ್ರವೀಣಕುಮಾರ ಕಾರ್ಯಕ್ರಮವನ್ನುದ್ದೇಶಿಸಿ, ಮಾತನಾಡಿದರು. ಬಳಿಕ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಎಮ್.ಟೆಕ್ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ವಾಲ್ಮೀಕಿ ಸಮಾಜದ ಏಳ್ಗೆಗಾಗಿ ದುಡಿದ ಹಿರಿಯರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ


ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಕೆ.ತ್ಯಾಗರಾಜನ್, ಸಹಾಯಕ ಆಯುಕ್ತ ಇಸ್ಮಾಯಿಲ್‌ಸಾಬ್ ಶಿರಹಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಕಲ್ಲೇಶ, ವಾಲ್ಮೀಕಿ ಗುರುಕುಲ ಶಾಲೆಯ ಅಪ್ಪಯ್ಯ ಸ್ವಾಮೀಜಿ, ನಗರಸಭೆ ಸದಸ್ಯರಾದ ಮೀನಾಕ್ಷಮ್ಮ, ಮುತ್ತು ಕುಷ್ಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.    ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಿಗ್ಗೆ ನಗರದ ಶ್ರೀ ಸಿರಸಪ್ಪಯ್ಯನವ್ಮಠದ ಆವರಣದಲ್ಲಿ  ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು. ಬಳಿಕ ವಿವಿಧ ಸಾಂಸ್ಸೃತಿಕ ಕಲಾ ತಂಡಗಳನ್ಮ್ನ ಒಳಗೊಂಡಿದ್ದ ಮೆರವಣಿಗೆಯು ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದ ವರೆಗೆ ಸಾಗಿ ಬಂದಿತು.

Advertisement

0 comments:

Post a Comment

 
Top