ಜಾಗತೀಕರಣದ ಇಂದಿನ ಜಾತ್ರೆಯಲ್ಲಿ ಕಳೆದ ಶತಮಾನದ ಸಮಾನತಾ ಸಿದ್ಧಾಂತಗಳೆಲ್ಲ
ತತ್ತರಿಸಿ ಹೋಗಿರುವಾಗ ದೇವರಾಜ ಅರಸು ಮತ್ತೆ ನೆನಪಿಗೆ ಬಂದಿದ್ದಾರೆ. ಅವರ ಶತಮಾನೋತ್ಸವದ
ಸಂದರ್ಭದಲ್ಲಿ ಮತ್ತೆ ಅರಸರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಅರಸರನ್ನು ಹೊಗಳುತ್ತಲೇ
ಸಿದ್ದರಾಮಯ್ಯನವರನ್ನು ತೆಗಳಲು ಕೆಲವರು ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗೆಂದು
ಮಾಧ್ಯಮಗಳು ವರದಿ ಮಾಡುತ್ತಿವೆ. ದೇವರಾಜ ಅರಸು ಬರುವವರಿಗೆ ಕರ್ನಾಟಕದ ರಾಜಕೀಯ ಹೀಗಿರಲಿಲ್ಲ.
ಕರ್ನಾಟಕದ ಎರಡು ಬಲಾಢ್ಯ ಜಾತಿಗಳ ಸಿರಿವಂತ ಭೂಮಾಲಕ ವರ್ಗದ ರಾಜಕಾರಣಿಗಳು ರಾಜ್ಯದ ಅಧಿಕಾರ
ಸೂತ್ರ ಹಿಡಿಯುತ್ತ ಬಂದಿದ್ದರು. ನಿಜಲಿಂಗಪ್ಪನವರು ಎಷ್ಟೇ ಪ್ರಾಮಾಣಿಕ ರಾಜಕಾರಣಿಯಾದರೂ ತಮ್ಮ ಉತ್ತರಾಧಿಕಾರಿಯನ್ನಾಗಿ
ಆಯ್ಕೆ ಮಾಡಿಕೊಂಡಿದ್ದು ವೀರೇಂದ್ರ ಪಾಟೀಲರನ್ನು. ಇವರು ಜಾತ್ಯಾಂಧರಾಗಿದ್ದರೆಂದಲ್ಲ ಆದರೆ
ರಾಜಕೀಯ ಅಧಿಕಾರ ದಲಿತ, ದಮನಿತ
ಸಮುದಾಯಗಳಿಗೆ ಹೋಗುವುದನ್ನು ಒಪ್ಪುವ ಮನಸ್ಥಿತಿ ಅನೇಕರಿಗಿರಲಿಲ್ಲ. ಈಗಲೂ ಇಲ್ಲ. ದೇವರಾಜ ಅರಸರು
ಕರ್ನಾಟಕ ರಾಜಕಾರಣದ ದಿಕ್ಕನ್ನೆ ಬದಲಿಸಿದರು. ವಂಚಿತ ಸಮುದಾಯಗಳಿಗೆ ಸೇರಿದ ಮಲ್ಲಿಕಾರ್ಜುನ
ಖರ್ಗೆ, ವೀರಪ್ಪ ಮೊಯ್ಲಿ, ಬಸವಲಿಂಗಪ್ಪ,
ರಂಗನಾಥ, ಕೆ.ಟಿ.ರಾಠೋಡ, ಬಂಗಾರಪ್ಪ
ಹೀಗೆ ಅನೇಕರನ್ನು ರಾಜಕಾರಣದ ಮುಂಚೂಣಿಗೆ ತಂದರು. ಭೂಸುಧಾರಣಾ ಕಾನೂನು ತಂದು ಉಳುವವನಿಗೆ ಭೂಮಿ
ನೀಡಿದರು. ಹಿಂದುಳಿದ ಸಮುದಾಯಗಳಿಗಾಗಿ ಹಾವನೂರು ಆಯೋಗ ರಚಿಸಿ ಮೇಲ್ವರ್ಗಗಳನ್ನು ಎದುರು
ಹಾಕಿಕೊಂಡರು. ಹೀಗೆ ಹದಿನೇಳು ವರ್ಷ ಕಾಲ ಕರ್ನಾಟಕವನ್ನಾಳಿದ ಅರಸು ಕೊನೆಯ ದಿನಗಳಲ್ಲಿ
ಒಂಟಿಯಾಗಿದ್ದರು. ಅವರಿಂದ ಮುಂದೆ ಬಂದವರೆಲ್ಲ ಕೈಕೊಟ್ಟಿದ್ದರು. ಈಗ ಅವರೇ ಅರಸರನ್ನು
ಹೊಗಳುತ್ತಿದ್ದಾರೆ. ಹೀಗೆ ಒಂಟಿಯಾದ ದಿನಗಳಲ್ಲೇ ದೇವರಾಜ ಅರಸು ನರಗುಂದಕ್ಕೆ ಬಂದಿದ್ದರು.
ಎಂಬತ್ತರ ದಶಕದ ನರಗುಂದ ರೈತ ಜಾಥಾಗೆ ಚಾಲನೆ ನೀಡಿದವರು ಅರಸು. ತಮ್ಮ ಹಿಂದಿನ ಒಡನಾಡಿಗಳು
ಕೈಕೊಟ್ಟಿದ್ದರೂ ಎಡಪಕ್ಷಗಳು ಅರಸರ ಕೈಬಿಡಲಿಲ್ಲ. ಎಡಪಕ್ಷಗಳು ಸಂಘಟಿಸಿದ ಚಾರಿತ್ರಿಕ ರೈತ
ಜಾಥಾವನ್ನು ಉದ್ಘಾಟಿಸಿದ ಅರಸು ಹತ್ತು ಕಿ.ಮೀ. ಜಾಥಾ ಜೊತೆ ನಡೆದು ಬಂದರು. ಮುಂದೆ ಸಿಪಿಐ ಮಹಿಳಾ
ಸಂಘಟನೆಯ ಮಹಿಳೆಯರ ಮೇಲೆ ಹುಬ್ಬಳ್ಳಿಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ನಡೆದ ಪ್ರತಿಭಟನಾ
ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಅರಸು ತುಂಬಾ ಭಾವುಕರಾಗಿದ್ದರು. ಸೋಷಲಿಸ್ಟ್ ನಾಯಕ ಶಾಂತವೇರಿ
ಗೋಪಾಲಗೌಡರು ಅಸ್ವಸ್ಥದಿಂದ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ ಮುಖ್ಯಮಂತ್ರಿಯಾಗಿದ್ದ
ಅರಸು ಆಸ್ಪತ್ರೆ ಬಿಲ್ ಕಟ್ಟಿ ಗೌಡರ ಅಂತ್ಯಕ್ರಿಯೆ ಮಾಡಿಸಿದ್ದರು. ದೇವರಾಜ ಅರಸು
ಕೊನೆಯುಸಿರೆಳೆದಾಗಲೂ ಅವರ ಬಳಿ ಹಣವಿರಲಿಲ್ಲ. ಕುಟುಂಬವನ್ನು ನಡುರಸ್ತೆಯಲ್ಲಿ ಬಿಟ್ಟು ಹೋದರು.
ಇಂಥ ವ್ಯಕ್ತಿ ವಿರುದ್ಧ ಇದೇ ಜನತಾ ಪರಿವಾರದವರು ಭ್ರಷ್ಟಾಚಾರ ಆರೋಪ ಹೊರಿಸಿ ಚಿತ್ರಹಿಂಸೆ
ನೀಡಿದರು. ಈಗ ಅವರೇ ಹೊಗಳುತ್ತಿದ್ದಾರೆ. ಇಂಥ ದೇವರಾಜ ಅರಸರನ್ನು ನಾನು ಮೊದಲ ಬಾರಿ ನೋಡಿದ್ದು 1970ರ ಮಾರ್ಚ್‌ನಲ್ಲಿ. ಆಗ ನಾನಿನ್ನೂ ಹೈಸ್ಕೂಲ್ ವಿದ್ಯಾರ್ಥಿ. ಆಗ ಇಂದಿರಾ ಕಾಂಗ್ರೆಸ್ ಕಟ್ಟಲು
ವಿಜಯಪುರಕ್ಕೆ ಬಂದಿದ್ದ ದೇವರಾಜ ಅರಸು ನಾನಿದ್ದ ಬಸವನ ಬಾಗೇವಾಡಿಗೆ ಬಂದು ಹೋದರು. ಬಸವೇಶ್ವರ
ದೇವಾಲಯದ ಮುಂದೆ ಆ ದಿನ ನಡೆದ ಸಭೆಯಲ್ಲಿ ಬಹಳ ಜನ ಸೇರಿರಲಿಲ್ಲ. ಆದರೆ ಅರಸು ಮಾಡಿದ ಭಾಷಣ
ಅದ್ಭುತವಾಗಿತ್ತು. ವಿಜಯಪುರ ಜಿಲ್ಲೆಯ ಬಲಿಷ್ಟ ಜಾತಿಗಳ ಭೂಮಾಲಕ ರಾಜಕಾರಣಿಗಳೆಲ್ಲ ಆಗ
ನಿಜಲಿಂಗಪ್ಪನವರ ಕಾಂಗ್ರೆಸ್‌ನಲ್ಲಿದ್ದರು. ಅರಸು ಪರವಾಗಿ ನಿಂತವರು ಹಿಂದುಳಿದ ಲಂಬಾಣಿ
ಬುಡಕಟ್ಟಿಗೆ ಸೇರಿದ ಕೆ.ಟಿ.ರಾಠೋಡ್ ಎಂಬ ಯುವ ನ್ಯಾಯವಾದಿ. ಆಗಿನ ವಾತಾವರಣ ಈಗಿನಂತಿರಲಿಲ್ಲ.
ಬಡವರ ಕಲ್ಯಾಣಕ್ಕಾಗಿ ಇಂದಿರಾ ಗಾಂಧಿ ರೂಪಿಸಿದ ಗರೀಬಿ ಹಠಾವ್ ಕಾರ್ಯಕ್ರಮದಿಂದಾಗಿ ಜಾತಿ ಮತ
ಮೀರಿ ಬಡವರೆಲ್ಲ ಇಂದಿರಾ ಪರ ನಿಂತಿದ್ದರು. ಮುಂದೆ ನಡೆದ (1972) ವಿಧಾನಸಭಾ
ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಬಹುಮತ ಗಳಿಸಿತು. ದೇವರಾಜ ಅರಸು ಮುಖ್ಯಮಂತ್ರಿಯಾದರು. ಆಗ
ಅಂದರೆ 1973ರಲ್ಲಿ ವಿಜಯಪುರಕ್ಕೆ ಬಂದು ಕಲ್ಪನಾ ಹೊಟೇಲ್ ಚೌಕದಲ್ಲಿ
ಅವರು ಭಾಷಣ ಮಾಡಿದ ನೆನಪು ನನಗಿನ್ನೂ ಹಸಿರಾಗಿದೆ. ಅರಸು ಭಾಷಣದಲ್ಲಿ ಕೆಲವರು ಗಲಾಟೆ
ಎಬ್ಬಿಸಿದಾಗ, ಕಲ್ಲು ತೂರಿದಾಗ ತಾಳ್ಮೆ ಕಳೆದುಕೊಳ್ಳದ ಅರಸು 12ನೆ ಶತಮಾನದಲ್ಲಿ ಬಸವಣ್ಣನವರಿಗೆ ಕಲ್ಲು ತೂರಿ ಹಿಂಸೆ ಕೊಟ್ಟ ಜನರೇ ಈಗ ಗಲಾಟೆ
ಮಾಡುತ್ತಿದ್ದಾರೆ ಎಂದರು. ಆಗ ಸಭೆ ಸ್ತಬ್ಧವಾಯಿತು. ಸಮಾಜ ಬದಲಾವಣೆಗೆ ಹೋರಾಟಕ್ಕೆ
ಇಳಿಯುವವರೆಲ್ಲ ಪಟ್ಟಭದ್ರ ಹಿತಾಸಕ್ತಿಗಳಿಂದ ಇಂಥ ವಿರೋಧ ಎದುರಿಸಬೇಕಾಗುತ್ತದೆ. ಈಗ ತಮಗೂ ಅಂಥ
ವಿರೋಧ ಎದುರಾಗಿದೆ ಎಂದು ಅರಸು ಹೇಳಿದರು. ಅರಸರನ್ನು ಮುಗಿಸಲು ಆಗಿನ ಜನತಾ ಪಕ್ಷದ ನಾಯಕರು ನಾನಾ
ತಂತ್ರ ಕುತಂತ್ರ ನಡೆಸಿದರು. ಕೇಂದ್ರದ ಮೊರಾರ್ಜಿ ಸರಕಾರ ಗ್ರೋವರ್ ಆಯೋಗ ರೂಪಿಸಿ ಅರಸರನ್ನು
ಹಣಿಯಲು ಯತ್ನಿಸಿತು. ದೇವೇಗೌಡ, ಬೊಮ್ಮಾಯಿ, ಹೆಗಡೆ
ಇವರೆಲ್ಲ ಅರಸರ ವಿರುದ್ಧ ಕೆಂಡಕಾರುತ್ತಿದ್ದರು. ಇಂಥ ದೇವರಾಜ ಅರಸರನ್ನು ನೋಡುವ ಮಾತ್ರವಲ್ಲ,
ಭೇಟಿಯಾಗುವ ಅಪರೂಪದ ಅವಕಾಶವೊಂದು ಆಗ ನನಗೆ ದೊರಕಿತ್ತು. ಕಮ್ಯುನಿಸ್ಟ್
ವಿಚಾರಗಳನ್ನೆಲ್ಲ ತಲೆತುಂಬ ತುಂಬಿಕೊಂಡು ನಾಳೆಯೇ ಕ್ರಾಂತಿ ಮಾಡಿಬಿಡಬೇಕೆಂದು ಓಡಾಡುತ್ತಿದ್ದ
ನನ್ನಂಥ ಇಪ್ಪತ್ತರ ಆಜೂಬಾಜು ವಯಸ್ಸಿನ ತರುಣರು ನಮ್ಮ ಜಿಲ್ಲೆಯಲ್ಲಿದ್ದರು. ಕಮ್ಯುನಿಸಂ ಅಂದರೆ
ಈಗಿನಂತೆ ಬರೀ ಟ್ರೇಡ್ ಯೂನಿಯನ್ ಚಳವಳಿ ಎಂದು ನಾವು ಭಾವಿಸಿರಲಿಲ್ಲ. ಜಾತೀಯತೆ, ಅಸ್ಪಶ್ಯತೆ ವಿರುದ್ಧ ಹೋರಾಡುವುದೂ ಕಮ್ಯುನಿಸಂ ಎಂದು ಇಂಚಗೇರಿ ಮಠದ ಪ್ರಗತಿಪರ ಸಂತ
ಮಹಾದೇವಪ್ಪನವರು ನಮಗೆ ಹೇಳಿದ್ದರು.
ಆಗ ಬರೀ ಕಮ್ಯುನಿಸ್ಟ್ ಪತ್ರಿಕೆಗಳನ್ನು ಮಾತ್ರ ನಾವು ಓದುತ್ತಿರಲಿಲ್ಲ. ಲಂಕೇಶ್
ಪತ್ರಿಕೆ ಆಗ ಇರಲಿಲ್ಲ. ಆದರೆ ಕರ್ನಾಟಕ ಕಂಡ ಅಪರೂಪದ ಪತ್ರಕರ್ತ ಕಲ್ಲೆ ಶಿವೋತ್ತಮರಾಯರ ‘ಜನಪ್ರಗತಿ’ಯನ್ನು ಓದುತ್ತಿದ್ದೆವು. ಜನಪ್ರಗತಿಗೆ ನಾನು
ಪ್ರತಿವಾರ ಬರೆಯುತ್ತಿದ್ದೆ. ಹೀಗೆ ಬರೆಯುತ್ತಲೇ ಕಲ್ಲೆಯವರ ಪರಿಚಯವಾಯಿತು. ಅವರನ್ನು ಭೇಟಿ
ಮಾಡಲೆಂದೆ ಬೆಂಗಳೂರಿಗೆ ಬಂದಾಗ ವಿಧಾನಪರಿಷತ್ ಸದಸ್ಯರಾಗಿದ್ದ ಕಲ್ಲಣ್ಣನವರ್ ಸಿಕ್ಕಿದ್ದರು.
ಲಂಕೇಶರು 80ರ ದಶಕದ ನಂತರ ತಮ್ಮ ಪತ್ರಿಕೆ ತಂದರು. ಹೀಗೆ ತಲೆ ತುಂಬ ಕ್ರಾಂತಿಯ
ಕನಸುಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದ ನಾನು ಒಮ್ಮೆ ತಮ್ಮ ಹಳ್ಳಿ ಸಾವಳಗಿಯಲ್ಲಿ ಓಕುಳಿ ಎಂಬ
ಅಮಾನವೀಯ ಹಬ್ಬವನ್ನು ನೋಡಿದೆ. ಮಾರ್ಚ್ -ಎಪ್ರಿಲ್ ತಿಂಗಳಲ್ಲಿ ನಡೆಯುವ ಈ ಓಕುಳಿಯಲ್ಲಿ ದಲಿತ
ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಮೇಲ್ಜಾತಿಯ ಉನ್ಮತ್ತ ಯುವಕರು ಮೈಮೇಲೆ ನೀರು
ಎರಚುತ್ತಾರೆ. ನೀರಿನ ಹೊಡೆತ ತಪ್ಪಿಸಿಕೊಳ್ಳಲು ಈ ದಲಿತ ಹುಡುಗಿಯರು ಊರ ತುಂಬ ಓಡಾಡುತ್ತಾರೆ. ಆಗ
ಮೈಮೇಲಿನ ಬಟ್ಟೆಯಲ್ಲ ಅಸ್ತವ್ಯಸ್ತವಾಗಿ ಮೈಯೆಲ್ಲ ಕಾಣುತ್ತದೆ. ಆಗ ಎಲ್ಲರೂ ನೋಡಿ ಎಂಜಾಯ್
ಮಾಡುತ್ತಾರೆ. ಈ ಓಕುಳಿಯನ್ನು ಕಣ್ಣಾರೆ ಕಂಡ ನಾನು ಈ ಬಗ್ಗೆ ಪತ್ರಿಕೆಗಳಿಗೆ ಬರೆದು ಕಳಿಸಿದೆ.
ಪತ್ರಿಕೆಗಳ ಓದುಗರ ವಿಭಾಗಕ್ಕೆ ಬರೆಯುವ ಅಭ್ಯಾಸವಿತ್ತು. ಹೀಗೆ ನಾನು ಬರೆದ ಪತ್ರವೊಂದು ‘ಸಂಯುಕ್ತ ಕರ್ನಾಟಕ’ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಅವರ
ಕೈಯಲ್ಲಿ ಸಿಕ್ಕು ಅವರು ನನ್ನ ಪತ್ರವನ್ನು ಪತ್ರಿಕೆಯ 19-6-1975ರ
ಸಂಚಿಕೆಯ ಪತ್ರಿಕೆಯ ಮುಖಪುಟದಲ್ಲಿ ‘‘ಷಂಡ ಸಮಾಜದಲ್ಲಿ ದುಶ್ಶಾಸನರ
ಕೇಕೆ’’ ಎಂಬ ತಲೆಬರಹದಲ್ಲಿ ಪ್ರಕಟಿಸಿದರು. ಮಾರನೆ ದಿನ ಅಂದಿನ
ಮುಖ್ಯಮಂತ್ರಿ ದೇವರಾಜ ಅರಸರು ಈ ಪತ್ರ ಓದಿ ಖಾದ್ರಿಯವರಿಗೆ ಫೋನ್ ಮಾಡಿದರು. ಓಕುಳಿಯನ್ನು
ನಿಷೇಧಿಸಿ ಆದೇಶ ಹೊರಡಿಸಿದರು. ಆಗ ನಮ್ಮ ಊರಿನ ಬಿ.ಡಿ.ಜತ್ತಿ ಅವರು ಭಾರತದ ಉಪರಾಷ್ಟ್ರಪತಿ
ಆಗಿದ್ದರು. ನನ್ನ ಬರಹದಲ್ಲಿ ನಾನಿದನ್ನು ಪ್ರಸ್ತಾಪಿಸಿ ‘ಉಪರಾಷ್ಟ್ರಪತಿ
ಊರಿನಲ್ಲಿ ದಲಿತ ಮಹಿಳೆಗೆ ಅವಮಾನ’ ಎಂದು ಬರೆದಿದ್ದೆ. ಹೀಗಾಗಿ
ಜತ್ತಿಯವರಿಗೂ ಗೊತ್ತಾಗಿ ಅವರೂ ಅರಸರಿಗೆ ಫೋನ್ ಮಾಡಿ ವಿಚಾರಿಸಿದರು. ಇದೆಲ್ಲದರ ಒಟ್ಟು
ಪರಿಣಾಮವೆಂದರೆ ಓಕುಳಿ ನಿಷೇಧವಾಯಿತು. ಆಗ ಸಮಾಜ ಬದಲಾವಣೆಗಾಗಿ ತುಡಿಯುತ್ತಿದ್ದ ನನ್ನಂಥ
ಯುವಕರಿಗಾಗಿ ಹುಡುಕುತ್ತಿದ್ದ ದೇವರಾಜ ಅರಸರು ನನ್ನ ಬಗ್ಗೆ ತಮ್ಮ ಆಪ್ತರ ಬಳಿ ವಿಚಾರಿಸಿದ್ದಾರೆ.
ಆಗ ನಮ್ಮ ಜಮಖಂಡಿ ತಾಲೂಕಿನ ಹಿಪ್ಪರಗಿಯ ಭೀಮಣ್ಣ ಕಿತ್ತೂರು ಎಂಬ ಯುವಕ ಅರಸರ ಆಸ್ಥಾನದಲ್ಲಿ
ಅಪ್ಪಾಜಿ ಎಂದು ಓಡಾಡಿಕೊಂಡಿದ್ದ. ಆತನಲ್ಲೂ ನನ್ನ ಬಗ್ಗೆ ಅರಸು ಕೇಳಿದ್ದಾರೆ. ಬೆಂಗಳೂರಿಗೆ
ಕರೆಸಲು ಹೇಳಿದ್ದಾರೆ. ಆಗ ಈಗಿನಂತೆ ಮೊಬೈಲ್ ಫೋನ್ ಇರಲಿಲ್ಲ. ಎಸ್.ಟಿ.ಡಿ. ಬೂತ್‌ಗಳೂ ಇರಲಿಲ್ಲ.
ಬೆಂಗಳೂರಿಗೆ ಹೋಗುವುದೂ ಸುಲಭ ಇರಲಿಲ್ಲ. ಆದರೂ ವಿಜಯಪುರ ಜಿಲ್ಲೆಯ ಮಂತ್ರಿ ಕೆ.ಟಿ.ರಾಠೋಡರು
ಹೇಗೋ ಮಾಡಿ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅರಸರನ್ನು ಭೇಟಿ ಮಾಡಿಸಿದರು. ನಮ್ಮಂಥ
ಯುವಕರು ಕಾಂಗ್ರೆಸ್ ಸೇರಿ ಸಾಮಾಜಿಕ ನ್ಯಾಯದ ಅವರ ಸಂಘರ್ಷದಲ್ಲಿ ಪಾಲ್ಗೊಳ್ಳಬೇಕೆಂಬುದು ಅರಸರ
ಇಚ್ಛೆಯಾಗಿತ್ತು. ಆದರೆ ತಲೆ ತುಂಬ ಕಮ್ಯುನಿಸಂ ತುಂಬಿಕೊಂಡಿದ್ದ ನಾವು ಆ ಕಡೆ ಹೋಗಲಿಲ್ಲ. ಆದರೂ
ರಾಠೋಡರು ನನ್ನನ್ನು ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು.
(ಈಗ ಶಾಸಕರಾಗಿರುವ ರಮೇಶ ಕುಮಾರ್ ಆಗ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ) ಆದರೆ
ನನಗೇಕೊ ಅದು ಸರಿ ಬರಲಿಲ್ಲ. ಮುಂದೆ ಖಾದ್ರಿ ಶಾಮಣ್ಣನವರು ಸಂಯುಕ್ತ ಕರ್ನಾಟಕದಲ್ಲಿ
ಕೆಲಸಕೊಟ್ಟರು. ಆಗ ನನ್ನ ದಾರಿಯೇ ಬದಲಾಯಿತು. ಆಗ ನಮ್ಮ ಸಮಾನ ಮನಸ್ಕರಾಗಿದ್ದ ವೀರಣ್ಣ
ಮತ್ತಿಕಟ್ಟಿ ಈಗ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇದನ್ನು ಬರೆದ ತಾತ್ಪರ್ಯ ಇಷ್ಟೇ, ಅರಸು ಅವರು ಈ ಸಮಾಜವನ್ನು ಮುರಿದು ಕಟ್ಟುವ ಕನಸನ್ನು ಕಂಡಿದ್ದರು. ಈ ಗುರಿ ಸಾಧನೆಗಾಗಿ
ಬದ್ಧತೆ ಇರುವ ಯಾರೇ ಸಿಕ್ಕರೂ ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ಎಲ್.ಜಿ. ಹಾವನೂರ ಅವರಂಥ
ಹೆಸರಾಂತ ವಕೀಲರ ನೇತೃತ್ವದಲ್ಲಿ ಹಿಂದುಳಿದವರ ಆಯೋಗ ರಚಿಸಿ ಶತಮಾನಗಳಿಂದ ಕಗ್ಗತ್ತಲಲ್ಲಿದ್ದ
ಹಿಂದುಳಿದ ವರ್ಗಗಳಿಗೆ ಬೆಳಕಿನ ದಾರಿ ತೋರಿಸಿದರು. ಸೋಷಲಿಸ್ಟ್ ಪಕ್ಷದಲ್ಲಿದ್ದ ಅಜೀಜ್ ಸೇಠ್,
ಬಂಗಾರಪ್ಪ, ಕಾಗೋಡ್ ತಿಮ್ಮಪ್ಪರಂಥವರನ್ನು
ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಹಾಗಂತ ಅರಸರು ಜಾತಿವಾದಿಯಾಗಿರಲಿಲ್ಲ. ಸೈದ್ಧಾಂತಿಕವಾಗಿ
ಮಾರ್ಕ್ಸ್‌ವಾದಕ್ಕೆ ತುಂಬ ಹತ್ತಿರದಲ್ಲಿದ್ದರು. ಆಗ ಮೆಜೆಸ್ಟಿಕ್‌ನಿಂದ ಸರ್ಪಭೂಷಣ ಮಠ
ಆವರಣದಲ್ಲಿದ್ದ ನವಕರ್ನಾಟಕ ಪ್ರಕಾಶನದಿಂದ ಕಮ್ಯುನಿಸ್ಟ್ ಪುಸ್ತಕಗಳನ್ನು ತರಿಸಿಕೊಂಡು
ಓದುತ್ತಿದ್ದರು. ಕಮ್ಯುನಿಸ್ಟ್ ನಾಯಕ ನಂಬೂದ್ರಿಪಾದ ಉಪನ್ಯಾಸ ಕೇಳಲು ಸೆಂಟ್ರಲ್ ಕಾಲೇಜ್ ಸೆನೆಟ್
ಹಾಲ್‌ಗೆ ಬಂದಿದ್ದರು. 1974ರಲ್ಲಿ ಎಐಟಿಯುಸಿ ನೇತೃತ್ವದಲ್ಲಿ
ಎಂಜಿನಿಯರಿಂಗ್ ಕಾರ್ಮಿಕರ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆಗೆ ಬಂದಿದ್ದ ಹಿರಿಯ ಕಮ್ಯುನಿಸ್ಟ್
ನಾಯಕ ಎಸ್.ಎ.ಡಾಂಗೆ ಅವರ ಭಾಷಣ ಕೇಳಲು ಟೌನ್ ಹಾಲ್‌ಗೆ ಬಂದಿದ್ದರು. ಎಲ್ಲ ಪ್ರತಿಗಾಮಿ ಶಕ್ತಿಗಳ
ವಿರುದ್ಧ ಪ್ರಗತಿಪರ ಶಕ್ತಿಗಳನ್ನು ಒಟ್ಟುಗೂಡಿಸುವುದು ಅರಸು ಕನಸಾಗಿತ್ತು. ಅಂತಲೇ ಕಮ್ಯುನಿಸ್ಟ್
ಪಕ್ಷದ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ದಾವಣಗೆರೆ ಮತಕ್ಷೇತ್ರವನ್ನು
ಕಮ್ಯುನಿಸ್ಟ್ ಪಕ್ಷದ ಕಾರ್ಮಿಕ ನಾಯಕ ಪಂಪಾವತಿ ಅವರಿಗೆ ಬಿಟ್ಟುಕೊಡಲು ಅರಸು ನಿರ್ಧರಿಸಿದಾಗ
ದಾವಣಗೆರೆಯ ಶಾಮನೂರು ಮುಂತಾದ ಸಿರಿವಂತರು, ಮಿಲ್ ಮಾಲಕರು ಇದನ್ನು
ವಿರೋಧಿಸಿ ಬೆಂಗಳೂರಿಗೆ ಬಂದು ಅರಸರ ಮೇಲೆ ಒತ್ತಡ ತಂದರು. ಆದರೆ ಇದಕ್ಕೆ ಮಣಿಯದ ಅರಸು ‘ಈ ಬಾರಿ ಪಂಪಣ್ಣ ವಿಧಾನಸಭೆಗೆ ಬರಲಿ’ ಎಂದು ನಿಷ್ಠುರವಾಗಿ
ಹೇಳಿದರು. ಈಗ ಕಾಲ ಬದಲಾಗಿದೆ. ಅರಸರ ಭೂಸುಧಾರಣಾ ಕಾನೂನಿನಿಂದ ಭೂಮಿ ಪಡೆದ ಫಲಾನುಭವಿಗಳ
ವಂಶೋದ್ಧಾರಕರು ಬಜರಂಗ ದಳ ಸೇರಿ ಕರಾವಳಿಯ ನೆಮ್ಮದಿ ಹಾಳು ಮಾಡಿದ್ದಾರೆ. ಅರಸರಿಗೆ ಎದುರಾಗದಿದ್ದ
ಜಾಗತೀಕರಣ, ಕೋಮುವಾದ, ನವ ಉದಾರೀಕರಣಗಳೆಂಬ
ತ್ರಿವಳಿ ಶತ್ರುಗಳು ಸಿದ್ದರಾಮಯ್ಯನವರಿಗೆ ಎದುರಾಗಿವೆ. ಇಂಥ ಪ್ರತಿಕೂಲ ಸನ್ನಿವೇಶದಲ್ಲಿ
ಸಾಮಾಜಿಕ ನ್ಯಾಯದ ಮಾತಾಡುತ್ತಿರುವ, ತಮ್ಮದು ಅಹಿಂದ ಸರಕಾರ
ಎನ್ನುತ್ತಿರುವ ಸಿದ್ದರಾಮಯ್ಯನವರಲ್ಲಿ ನಾವು ಅರಸರನ್ನು ಕಾಣಬೇಕಾಗಿದೆ. ತಪ್ಪೇನಿದೇ?
---- ಸನತ್ ಕುಮಾರ್ ಬೆಳಗಲಿ
---- ಸನತ್ ಕುಮಾರ್ ಬೆಳಗಲಿ
0 comments:
Post a Comment
Click to see the code!
To insert emoticon you must added at least one space before the code.