PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೧೦ ಈರುಳ್ಳಿ ಲಾಭದಾಯಕವಾಗಿರುವ ವಾಣಿಜ್ಯ ಬೆಳೆಯಾಗಿದ್ದು, ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿದರೆ, ರೈತರಿಗೆ ಇದು ಆರ್ಥಿಕ ಭದ್ರತೆಯನ್ನು ಒದಗಿಸಲಿದೆ.  ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಈರುಳ್ಳಿ ದೇಶದ ಹಾಗೂ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆ. ಇದನ್ನು ತರಕಾರಿಯಾಗಿ ಹಾಗೂ ಸಂಬಾರ ಪದಾರ್ಥವಾಗಿ ಬೆಳೆಯ ಎಲ್ಲ ಹಂತಗಳಲ್ಲಿ ಉಪಯೋಗಿಸಲಾಗುತ್ತಿದ್ದು ಬಿ ಮತ್ತು ಸಿ ಅನ್ನಾಂಗ ಹೊಂದಿದೆ. ಮುಖ್ಯವಾಗಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ನೀರು ಬಸಿದು ಹೋಗುವಂತಹ ಮರಳು ಮಿಶ್ರಿತಗೋಡು ಮಣ್ಣು ಉತ್ತಮ. ಉಳ್ಳಾಗಡ್ಡಿಯನ್ನು ವರ್ಷದ ಎಲ್ಲಾ ಕಾಲಗಳಲ್ಲಿ ಬೆಳೆಯಬಹುದು. ಬೆಳೆಯನ್ನು ಪ್ರಾರಂಭ ಮಾಡಲು ಜೂನ್-ಜುಲೈ, ಸೆಪ್ಟಂಬರ್-ಅಕ್ಟೋಬರ್ ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಉತ್ತಮ. ಪ್ರತಿ ಹಂಗಾಮಿಗೆ ಸೂಕ್ತವಾದಂತಹ ತಳಿಗಳನ್ನು ಆಯ್ಕೆ ಮಾಡಬೇಕು.
ಪ್ರಮುಖ ತಳಿಗಳು ಬಳ್ಳಾರಿ ರೆಡ್, ಪೂಸಾರೆಡ್, ಅರ್ಕಾಪ್ರಗತಿ, ಅರ್ಕಾನಿಕೇತನ್, ಅರ್ಕಾಕಲ್ಯಾಣ, ಎನ್-೫೩ ಇವು ಸುಧಾರಿತ ಕೆಂಪು ಬಣ್ಣದ ದುಂಡನೆಯ ಗಡ್ಡೆಯ ತಳಿಗಳಾಗಿವೆ. ಇವು ಉತ್ತಮ ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. ಇದಲ್ಲದೆ ತೆಲಗಿ ಕೆಂಪು ಹಾಗೂ ತೆಲಗಿ ಬಿಳಿ ಸ್ಥಳೀಯ ತಳಿಗಳು ಪ್ರಚಲಿತದಲ್ಲಿವೆ.
ಬಿತ್ತನೆ : ಬೀಜ ಬಿತ್ತನೆಗೆ ಎಕರೆಗೆ ೩-೪ ಕಿ.ಗ್ರಾಂ., ಸಸಿ ನಾಟಿ ಮಾಡುವುದಾದಲ್ಲಿ ೨.೫ ಕಿ.ಗ್ರಾಂ. ಬೀಜ ಬೇಕು. ಗಡ್ಡೆ ನಾಟಿಗೆ ೩೫೦ ಕಿ. ಗ್ರಾಂ. ಒಂದೇ ಗಾತ್ರದ ಗಡ್ಡೆಗಳು ಬೇಕು. ಈ ಬೆಳೆಯನ್ನು ಸಸಿ ನಾಟಿ ಮಾಡುವುದರಿಂದ, ಕೂರಿಗೆ ಬಿತ್ತನೆ ಅಥವಾ ಚೆಲ್ಲುವುದರಿಂದ ಅಥವಾ ಗಡ್ಡೆ ನಾಟಿ ಮಾಡುವುದರಿಂದ ಪ್ರಾರಂಭಿಸಬಹುದಾಗಿದೆ. ಒಂದು ಎಕರೆಗೆ ಬೇಕಾಗುವ ಸಸಿಗಳನ್ನು ಪಡೆಯಲು ೭.೫ ಮೀ ಉದ್ದ, ೧.೨ ಮೀ ಅಗಲ ಮತ್ತು ೧೦ ಸೆಂ.ಮೀ ಎತ್ತರದ ೧೦ ಮಡಿಗಳು ಬೇಕು. ಪ್ರತಿ ಮಡಿಗೆ ೩-೪ ಬುಟ್ಟಿ ಕೊಟ್ಟಿಗೆ ಗೊಬ್ಬರ ಮತ್ತು ಅರ್ಧ ಕಿ.ಗ್ರಾಂ. ೧೫:೧೫:೧೫ ಸಂಯುಕ್ತ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ. ನಂತರ ಬಿತ್ತನೆ ಬೀಜಗಳನ್ನು ೭.೫ ಸೆಂ.ಮೀ ಅಂತರದ ಸಾಲುಗಳಲ್ಲಿ ಬಿತ್ತಬೇಕು. ತಕ್ಷಣ ಮಡಿಗಳಿಗೆ ನೀರು ಹಾಕಬೇಕು. ೬-೮ ವಾರಗಳಲ್ಲಿ ಸಸಿಗಳು ನಾಟಿ ಮಾಡಲು ಸಿದ್ದವಾಗುತ್ತವೆ. ನಾಟಿ ಮಾಡುವ ಮುನ್ನ ಎಕರೆಗೆ ೧೨ ಟನ್ ಕೊಟ್ಟಿಗೆ ಗೊಬ್ಬರ ಹಾಗೂ ೫೦:೨೦:೫೦ ಕಿ.ಗ್ರಾಂ ಸಾರಜನಕ, ರಂಜಕ, ಪೋಟ್ಯಾಷ್ ಒದಗಿಸುವ ರಸಗೊಬ್ಬರ ಅವಶ್ಯ. ಸಾರಜನಕ ಒದಗಿಸುವ ಗೊಬ್ಬರವನ್ನು ಎರಡು ಸಮ ಕಂತುಗಳಲ್ಲಿ ಕೊಡುವುದು ಸೂಕ್ತ. ಸಸಿಗಳನ್ನು ೧೫ ಸೆಂ.ಮೀ.ಅಂತರದ ಸಾಲುಗಳಲ್ಲಿ ೧೦ ಸೆಂ.ಮೀ. ಗೆ ಒಂದರಂತೆ ನಾಟಿ ಮಾಡಬೇಕು. ಆರು ವಾರಗಳ ನಂತರ ಉಳಿದ ಶೇ ೫೦ ಸಾರಜನಕವನ್ನು ಮೇಲು ಗೊಬ್ಬರವಾಗಿ ಒದಗಿಸಬೇಕು. ಕೂರಿಗೆ ಬಿತ್ತನೆ ಯಾದಲ್ಲಿ ಭೂಮಿಯನ್ನು ಬಿತ್ತನೆಗೆ ಸಿದ್ದಪಡಿಸಿ ಪ್ರತಿ ಎಕರೆಗೆ ೧೨ ಟನ್ ಸಾವಯವ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ಬೀಜವನ್ನು ೩೦ ಸೆಂ.ಮೀ. ಅಂತರದ ಅಡ್ಡಗೆರೆಯಲ್ಲಿ ಕೂರಿಗೆಯಿಂದ ಬಿತ್ತನೆ ಮಾಡಬೇಕು. ಹವಾಮಾನ ಮತ್ತು ಮಣ್ಣಿನ ಗುಣ ಧರ್ಮಕ್ಕನುಸಾರವಾಗಿ ವಾರಕ್ಕೊಮ್ಮೆ ನೀರುಣಿಸಬೇಕು. ಈರುಳ್ಳಿಯ ಬೇರುಗಳು ಮೇಲ್ಮಟ್ಟಕ್ಕೆ ಬೆಳೆಯುವುದರಿಂದ ಕಳೆಗಳಿಂದ ಮುಕ್ತವಾಗಿಡುವುದು ಸೂಕ್ತ.
ಕಳೆ ನಿರ್ವಹಣೆ : ಈರುಳ್ಳಿ ಮತ್ತು ಮೆಣಸಿನಕಾಯಿ ಅಂತರ ಬೆಳೆ ಪದ್ಧತಿಯಲ್ಲಿ ಬೀಜ ಬಿತ್ತಿದ ಎರಡು ದಿನಗಳ ಒಳಗಾಗಿ ಪೆಂಡಿಮಿಥೆಲಿನ್ ಕಳೆನಾಶಕವನ್ನು ೪ ಮಿ.ಲೀ. ಪ್ರತಿ ಲೀಟರ್ ನೀರಿಗೆ ಸೇರಿಸಿ ಮಣ್ಣಿನಲ್ಲಿ ಹಸಿ ಇರುವಾಗ ಸಿಂಪರಣೆ ಮಾಡಬೇಕು. ನಾಟಿ ಮಾಡಿದ ೩೦ ದಿನಗಳ ನಂತರ ಎಕರೆಗೆ ೪೫೦ ಮಿ. ಲೀ. ಅಕ್ಸಿಫ್ಲೋರೋಫಿನ್ ೨೩.೫ ಇ.ಸಿ. ೪೦೦ ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ೪೦ ದಿನಗಳ ನಂತರ ಒಂದು ಬಾರಿ ಕೈಕಳೆ ತೆಗೆಯಬೇಕು.
ಕೀಟ ಬಾಧೆ ನಿರ್ವಹಣೆ : ಥ್ರಿಪ್ಸ್ ನುಶಿ- ಬಾಧಿತ ಎಲೆಗಳ ಮೇಲೆ ಬಿಳಿಯ ಮಚ್ಚೆಗಳು ಕಾಣಿಸಿಕೊಂಡು ನಂತರ ಅವು ಕಂದು ಬಣ್ಣಕ್ಕೆ ತಿರುಗುತ್ತವೆ. ಎಲೆಗಳು ತುದಿಯಿಂದ ಕೆಳಗೆ ವಿರೂಪಗೊಳ್ಳುತ್ತ ಬರುತ್ತವೆ. ನಂತರ ಸೊರಗಿ ಒಣಗುತ್ತವೆ. ಇದರಿಂದ ಗಡ್ಡೆಗಳ ಗಾತ್ರ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ. ಎಲೆ ಕತ್ತರಿಸುವ ಹುಳು- ಎಲೆಗಳನ್ನು ತಿಂದು, ಎಲೆಯ ಕೊಳವೆಯಲ್ಲಿ ಅಡಗಿರುತ್ತದೆ. ಎಲೆಗಳ ಮೇಲೆ ರಂಧ್ರ ಮತ್ತು ಅದರ ಮಲದಿಂದ ಈ ಕೀಡೆಯ ಇರುವಿಕೆಯನ್ನು ಗುರುತಿಸಬಹುದು. ಈ ಹುಳುವು ಗಡ್ಡೆಗಳ ಮೇಲೆಯೂ ರಂಧ್ರ ಮಾಡುತ್ತದೆ. ನಿರ್ವಹಣೆ-ಥ್ರಿಪ್ಸ್ ನುಶಿ ನಿರ್ವಹಣೆಗೆ ಬಿತ್ತಿದ ೩ ವಾರಗಳ ನಂತರ ಬೆಳೆಗೆ ೧.೭ ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ ಅಥವಾ ೧.೩ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ಆಥವಾ ೦.೨೫ ಮಿ.ಲೀ ಇಮಿಡಾಕ್ಲೊಪ್ರಿಡ್ ೨೦೦ ಎಸ್.ಎಲ್. ಅನ್ನು ಸಿಂಪಡಿಸಬೇಕು. ಪ್ರತಿ ಎಕರೆಗೆ ೧೪೫ ಲೀ. - ೧೮೦ ಲೀ. ಸಿಂಪರಣಾ ದ್ರಾವಣ ಬಳಸಬೇಕು. ಪ್ರತಿ ಲೀ. ನೀರಿಗೆ ೨ ಮಿ.ಲೀ. ಕ್ಲೋರೊಫೆರಿಫಾಸ್ ೨೦ ಇ.ಸಿ. ಆಥವಾ ಕ್ವಿನಾಲ್‌ಪಾಸ್ ೨೫ ಇ.ಸಿ. ಬೆರೆಸಿ ಗಿಡದ ಸುತ್ತಲೂ ತೋಯಿಸಬೇಕು.
ಮುಖ್ಯ ರೋಗಗಳು: ಕಾಡಿಗೆ ರೋಗ- ಮೊಳಕೆಯೊಡೆದ ಬೀಜದ ಎಲೆಗಳ ಮೇಲೆ ಕಪ್ಪು ಗಾಯಗಳು ಕಾಣಿಸುತ್ತವೆ. ಈ ಗಾಯಗಳು ದಪ್ಪವಾದ ಮತ್ತು ದಟ್ಟವಾದ ಆಕಾರ ಪಡೆದು ನಂತರ ಒಡೆದು ಕಪ್ಪು ಕಾಡಿಗೆಯಂತಹ ಶೀಲಿಂಧ್ರ ಬೀಜಗಳ ಪುಡಿಯನ್ನು ಹೊರಸೂಸುವುದು. ಬಾಧಿತ ಬೆಳೆಯು ೩-೪ ವಾರಗಳಲ್ಲಿ ಒಣಗಿ ಸಾಯುತ್ತದೆ. ಉಳಿದ ಸಸ್ಯಗಳ ಬೆಳವಣಿಗೆ ಕುಂಠಿತವಾಗಿ, ಗಟ್ಟಿಯಾಗಿ, ವಿಕಾರವಾಗಿರುವ ಗಾಯಗಳನ್ನು ಹೊಂದಿರುತ್ತವೆ. ಪೂರ್ತಿಯಾಗಿ ಬೆಳೆದ ಸಸ್ಯಗಳ ಎಲೆಗಳು ಮತ್ತು ಗಡ್ಡೆಗಳ ಮೇಲೆ ಚುಕ್ಕೆಗಳು ಕಾಣಿಸುತ್ತವೆ. ನೇರಳೆ ಮಚ್ಚೆ ರೋಗ-ಬಾಧೆಯು ಎಲೆಗಳ ತುದಿಯಲ್ಲಿ ಹಳದಿಬಣ್ಣಯುಕ್ತ ಬಿಳಿ ಚುಕ್ಕೆಯಂತೆ ಪ್ರಾರಂಭವಾಗುತ್ತವೆ. ನಂತರ ದುಂಡಗಿರುವ ಮತ್ತು ಕಪ್ಪು ತತ್ತಿಯಾಕಾರದ, ಏಕಕೇಂದ್ರೀಯ ಮೃದುವಾದ ಉಂಗುರಾಕೃತಿಗಳು ಈ ಹಳದಿ ಕ್ಷೇತ್ರದಲ್ಲಿ ಕಾಣಿಸುತ್ತವೆ. ಈ ಹಳದಿ ಬಿಂದುಗಳು ಕೂಡಿಕೊಂಡು ಕೆಲವು ಇಡೀ ಎಲೆಯಲ್ಲಿ ಹರಡುತ್ತವೆ.. ಎಲೆಗಳು ತುದಿಯಿಂದ ಸಾಯುತ್ತ ಬರುತ್ತವೆ. ಬಾಧಿತ ಬಿಂದುನಿಂದ ಎಲೆಗಳು ಕೆಳೆಗೆ ಬಾಗುತ್ತವೆ.  ನಿರ್ವಹಣೆ: ಕ್ಯಾಪ್ಟಾನ್ (೨ ಗ್ರಾಂ ಪ್ರತಿ ಕಿ.ಗ್ರಾಂ. ಬೀಜಕ್ಕೆ) ದಿಂದ ಬೀಜೊಪಚಾರ ಅವಶ್ಯ. ಮ್ಯಾಂಕೋಜೆಬ್ ೨ ಗ್ರಾಂ. ಪ್ರತಿ ಲೀ. ನೀರಿನಲ್ಲಿ ಕರಗಿಸಿ ನೇರಳೆ ಎಲೆ ಮಚ್ಚೆ ರೋಗ ಮತ್ತು ಕಾಡಿಗೆ ರೋಗ ಕಂಡಾಗ ಸಿಂಪಡಿಸಬೇಕು. ೧೫ ದಿವಸಗಳ ನಂತರ ರೋಗದ ಲಕ್ಷಣಗಳು ಮತ್ತೆ ಕಂಡುಬಂದಲ್ಲಿ ಇದೇ ಸಿಂಪರಣಾ ದ್ರಾವಣ ಸಿಂಪಡಿಸಬೇಕು. ಪ್ರತಿ ಎಕರೆಗೆ ೧೮೦ ರಿಂದ ೨೧೦ ಲೀ. ಸಿಂಪರಣಾ ದ್ರಾವಣ ಅವಶ್ಯ.
ಕೊಯ್ಲು ಮತ್ತು ಇಳುವರಿ: ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಶೇ. ೫೦ ರಷ್ಟು ಬಾಗಿದಾಗ ಕಟಾವು ಮಾಡಬೇಕು. ಗಡ್ಡೆಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಪ್ರತಿ ಎಕರೆಗೆ ಸರಾಸರಿ ೮೦ ಕ್ವಿಂ. ಗಡ್ಡೆ ಇಳುವರಿ ಸಾಧ್ಯ. ಗಡ್ಡೆ ಸಂಗ್ರಹಣೆ ಒಂದು ಮೀಟರ್ ಅಗಲ, ೩೦ ಸೆಂ.ಮೀ ಎತ್ತರ, ೬-೭ ಮೀಟರ್ ಉದ್ದವಿರುವ ಕಟ್ಟಿಗೆಯ ಜಗಲಿಯನ್ನು ಹೊಲದಲ್ಲಿ ಎತ್ತರವಿರುವ ಪ್ರದೇಶದಲ್ಲಿ ತಯಾರಿಸಬೇಕು. ಈ ಜಗಲಿಯ ಮಗ್ಗಲಲ್ಲಿ ಸುಮಾರು ೨ ಮೀ ಎತ್ತರವಿರುವ ಕಟ್ಟಿಗೆ ಅಥವಾ ಕೋಲುಗಳನ್ನು ಭೂಮಿಯಲ್ಲಿ ನೆಡಬೇಕು, ಈ ಕೋಲುಗಳ ಮೇಲಿನ ತುದಿಗಳು ಸ್ವಲ್ಪ ಹೊರಗೆ ಬಾಗಿರಬೇಕು. ಜಗಲಿ ಮೇಲೆ ಕೋಲುಗಳನ್ನು ಆಧಾರವಾಗಿಟ್ಟುಕೊಂಡು ನಾಲ್ಕು ಕಡೆ ತಂತಿ ಜಾಳಿಗೆಯನ್ನು ಕಟ್ಟಬೇಕು. ಆ ಮೇಲೆ ಉಳ್ಳಾಗಡ್ಡಿಯನ್ನು ಮೇಲಿನ ತನಕ ತುಂಬಬೇಕು. ನಂತರ ಗಡ್ಡೆಗಳನ್ನು ೧೫-೨೦ ಸೆಂ.ಮೀ. ದಪ್ಪವಿರುವ ಒಂದು ಪದರು ಒಣ ಹುಲ್ಲನ್ನು ಹಾಕಿ ಮುಚ್ಚಬೇಕು. ನಂತರ ಇದರ ಮೇಲೆ ಸುಮಾರು ೫೦೦ ಗೇಜ್ ದಪ್ಪವಿರುವ ಪಾಲಿಥಿನ್ ಹಾಳೆಯನ್ನು ಹಾಕಬೇಕು. ಈ ಪಾಲಿಥಿನ್ ಹಾಳೆಗೆ ಅಲ್ಲಲ್ಲಿ ಕಲ್ಲುಗಳನ್ನು ಜೋತುಹಾಕಬೇಕು. ಇದರಿಂದ ಗಡ್ಡೆಗಳನ್ನು ಮಳೆ ನೀರಿನಿಂದ ರಕ್ಷಿಸಬಹುದು. ಈ ಜಗಲಿಯ ಉದ್ದವು ಗಾಳಿಯ ದಿಕ್ಕಿಗೆ ಅಡ್ಡಲಾಗಿರುತ್ತದೆ. ಈ ವಿಧಾನದಿಂದ ಉಳ್ಳಾಗಡ್ಡಿಯನ್ನು ಸುಮಾರು ಆರು ತಿಂಗಳವರೆಗೆ ಕೆಡದಂತೆ ಸಂಗ್ರಹಣೆ ಮಾಡ ಮಾಡಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಎಮ್.ಬಿ. ಪಾಟೀಲ-೯೪೮೦೬೯೬೩೧೯, ವಿಷಯ ತಜ್ಞರಾದ ಸುಧಾಕರ-೯೯೧೬೧೮೦೭೫೬), ರೋಹಿತ್ ಕೆ.ಎ.-೯೮೪೫೧೯೪೩೨೮, ಮತ್ತು ಯುಸುಫ್ ಅಲಿ ನಿಂಬರಗಿ-೭೮೯೯೬೦೦೧೩೪ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.

Advertisement

0 comments:

Post a Comment

 
Top