PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜು.೨೫ರೈತರ ಹಿತ ಕಾಯಲು ಸರ್ಕಾರ ಬದ್ಧವಿದ್ದು, ಯಾವುದೇ ಕಾರಣಕ್ಕೂ ರೈತರು  ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಸಾಂತ್ವನದ ಜೊತೆಗೆ ಆತ್ಮಸ್ಥೈರ್ಯದ ಮಾತುಗಳನ್ನಾಡಿದರು.
     ಗಂಗಾವತಿ ತಾಲೂಕು ಗೂಗಿಬಂಡಿ ಕ್ಯಾಂಪ್ (ಬಸವನದುರ್ಗ ಕ್ಯಾಂಪ್) ನಲ್ಲಿ ಶುಕ್ರವಾರದಂದು ಆತ್ಮಹತ್ಯೆಗೆ ಶರಣಾದ ರೈತ ನೆಕ್ಕಂಟಿ ಶ್ರೀನಿವಾಸ ಅವರ ಮನೆಗೆ ಶನಿವಾರದಂದು ಸಚಿವರು ಭೇಟಿ ನೀಡಿ, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು.
     ಮೃತ ರೈತನ ಪತ್ನಿ ಜಾನಕಿ ಹಾಗೂ ಅವರ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಆತ್ಮಸ್ಥೈರ್ಯ ತುಂಬಿದ ಸಚಿವರು, ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಪರಿಹಾರವಾಗಿ ೨೦ ಸಾವಿರ ರೂ.ಗಳ ಚೆಕ್ ಹಾಗೂ ವಯಕ್ತಿಕವಾಗಿ ೨೫ ಸಾವಿರ ರೂ.ಗಳ ಪರಿಹಾರ ಧನ ನೀಡಿದರು.  ಮೃತ ರೈತರ ಕುಟುಂಬಕ್ಕೆ ನೀಡಲಾಗುವ ಪರಿಹಾರದ ಮೊತ್ತವನ್ನು ಸರ್ಕಾರ ೦೧ ಲಕ್ಷ ರೂ.ಗಳಿಂದ ೦೨ ಲಕ್ಷ ರೂ. ಗಳಿಗೆ ಹೆಚ್ಚಿಸಿದ್ದು, ಜಿಲ್ಲಾ ಮಟ್ಟದ ಸಮಿತಿಯು ಮೃತ ರೈತರಿಗೆ ಸಂಬಂಧಪಟ್ಟಂತೆ ವರದಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ, ಪರಿಹಾರ ನೀಡಿಕೆ ಕುರಿತಂತೆ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.
     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೈತರ ಹಿತವನ್ನು ಕಾಯಲು ನಮ್ಮ ಸರ್ಕಾರ ಬದ್ಧವಿದೆ.  ಯಾವುದೇ ಕಾರಣಕ್ಕೂ ರೈತರು ಧೃತಿಗೆಡುವ ಅಗತ್ಯವಿಲ್ಲ.  ಆತುರದಿಂದ ರೈತರು ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು.  ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ರೈತರು ತಮ್ಮ ಕುಟುಂಬ, ಪತ್ನಿ, ಮಕ್ಕಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ವಹಿಸಿ ಆತ್ಮಸ್ಥೈರ್ಯ ತುಂಬುವಂತಹ ಕೆಲಸವಾಗಬೇಕು.  ಸಾಲ ನೀಡಿರುವ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಅಥವಾ ಇನ್ನಿತರೆ ಯಾವುದೇ ಬ್ಯಾಂಕುಗಳು, ಸಾಲವನ್ನು ಮರುಪಾವತಿಸದ ರೈತರಿಗೆ ಸದ್ಯ ಯಾವುದೇ ನೋಟೀಸ್ ನೀಡುವುದಾಗಲಿ, ವಸೂಲಿಗೆ ಕ್ರಮ ಕೈಗೊಳ್ಳುವುದಾಗಲಿ ಮಾಡದಂತೆ ಸೂಚನೆ ನೀಡಲಾಗಿದೆ.  ಜಿಲ್ಲೆಯಲ್ಲಿ ಸದ್ಯ ಸಂಭವಿಸಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ ಜಮೀನನ್ನು ಗುತ್ತಿಗೆ ಪಡೆದು, ಸಾಗುವಳಿ ಮಾಡುತ್ತಿದ್ದ ಇಬ್ಬರು ರೈತರಿದ್ದು,  ಗುತ್ತಿಗೆ ಪಡೆದು, ಸಾಗುವಳಿ ಮಾಡುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಪರಿಹಾರ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.  ಈ ಕುರಿತಂತೆ ಈಗಾಗಲೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.  ರೈತರ ಆತ್ಮಹತ್ಯೆಗೆ ಪರಿಹಾರ ನೀಡುವ ಮಾರ್ಗಸೂಚಿ ಹಾಗೂ ನಿಯಮಾವಳಿಯನ್ನು ಕೇಂದ್ರ ಸರ್ಕಾರವೇ ರೂಪಿಸಿದ್ದು, ಇದರ ತಿದ್ದುಪಡಿಯನ್ನೂ ಸಹ ಕೇಂದ್ರ ಸರ್ಕಾರವೇ ಕೈಗೊಳ್ಳಬೇಕಿದೆ.  ಕಾನೂನು ಹಾಗೂ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಉಂಟಾದ ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ಹಾನಿ ಅನುಭವಿಸಿದ ರೈತರಿಗೆ ಈಗಾಗಲೆ ಪರಿಹಾರ ವಿತರಣೆ ಮಾಡಲಾಗಿದೆ.  ಇದುವರೆಗೂ ಬ್ಯಾಂಕ್ ಖಾತೆ ಸಂಖ್ಯೆ ಸಲ್ಲಿಸದವರು ಅಥವಾ ತಪ್ಪಾದ ಬ್ಯಾಂಕ್ ಖಾತೆ ಸಂಖ್ಯೆ ನೀಡಿರುವ ರೈತರ ಪರಿಹಾರ ಮೊತ್ತ ವಿತರಣೆಯಲ್ಲಿ ಮಾತ್ರ ವಿಳಂಬವಾಗಿದೆ.  ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಬಾರದ ಕಾರಣ ಬರದ ಸ್ಥಿತಿ ನಿರ್ಮಾಣವಾಗುತ್ತಿದೆ.  ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸುವ ಕುರಿತಂತೆ ರಚಿಸಲಾಗಿರುವ ಸಂಪುಟ ಉಪ ಸಮಿತಿ ಸಭೆಯು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಹವಾಮಾನ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೆ ಎರಡು ಬಾರಿ ಸಭೆ ನಡೆಸಿದ್ದು, ಬರ ಪೀಡಿತ ತಾಲೂಕುಗಳ ವಿವರವನ್ನು ಶೀಘ್ರದಲ್ಲೇ ಸರ್ಕಾರ ಪ್ರಕಟಿಸಲಿದೆ.  ಜಿಲ್ಲೆಯಲ್ಲಿ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ರಕ್ಷಿಸುವ ಸಲುವಾಗಿ ಗೋಶಾಲೆ ಪ್ರಾರಂಭಿಸಬೇಕೆನ್ನುವ ಬಗ್ಗೆ ಮನವಿಗಳು ಬರುತ್ತಿವೆ.  ಶೀಘ್ರದಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
     ಜಿಲ್ಲಾ ಪಂಚಾಯತಿ ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ, ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹನುಮಂತಪ್ಪ ನಾಯಕ್, ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top