PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜೂ. ೨೨ (ಕರ್ನಾಟಕ ವಾರ್ತೆ): ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಭಾಗಿತ್ವದಲ್ಲಿ ಜೂ. ೨೨ ರಿಂದ ೨೪ ರವರೆಗೆ ಕೊಪ್ಪಳ ತಾಲೂಕಿನಲ್ಲಿ ಆಯೋಜಿಸಲಾಗಿರುವ ಕೃಷಿ ಅಭಿಯಾನದಡಿ ಕಾರ್ಯಕ್ರಮದ ಕೃಷಿ ಮಾಹಿತಿ ರಥಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳದ ಕೃಷಿ ಇಲಾಖೆ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರೈತರ ಹಿತಕಾಯಲು ಸರ್ಕಾರ ಕೃಷಿಭಾಗ್ಯ, ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ಕೃಷಿ ಉಪಕರಣಗಳನ್ನು ಪೂರೈಸುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.  ಈ ಯೋಜನೆಗಳನ್ನು ಸಾಮಾನ್ಯ ರೈತರಿಗೂ ತಲುಪಿಸಬೇಕಾದ್ದು ಕೃಷಿ ಇಲಾಖೆಯ ಜವಾಬ್ದಾರಿಯಾಗಿದೆ. ಎಲ್ಲ ರೈತರಿಗೂ ಯೋಜನೆಯ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಇದೀಗ ಹಮ್ಮಿಕೊಂಡಿರುವ ಕೃಷಿ ಅಭಿಯಾನ ಉತ್ತಮ ಬೆಳವಣಿಗೆಯಾಗಿದ್ದು ಕೃಷಿ ಮಾಹಿತಿ ರಥ ಸಂಚಾರದ ಉದ್ದೇಶ ಈಡೇರಲಿ.  ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾದ ಬೀಜ ಮತ್ತು ಇತರೆ ಕೃಷಿ ಪರಿಕರಗಳ ದಾಸ್ತಾನು ಮಾಡಲಾಗಿದ್ದು, ಬೀಜ ಮತ್ತು ರಸಗೊಬ್ಬರದ ಕೊರತೆ ಇರುವುದಿಲ್ಲ.  ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ ಆಶಾಭಾವನೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ವ್ಯಕ್ತಪಡಿಸಿದರು.ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಅವರು ಮಾತನಾಡಿ, ಪ್ರತಿ ಹೋಬಳಿಯಲ್ಲಿ ಕೃಷಿ ಮಾಹಿತಿ ರಥ ೩ ದಿನಗಳ ಕಾಲ ಸಂಚರಿಸಲಿದ್ದು, ಮೊದಲ ಎರಡು ದಿನ  ಗ್ರಾಮಗಳಲ್ಲಿ ಸಂಚರಿಸಿ ರೈತರಿಗೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದು, ಮೂರನೇ ದಿನ ಹೋಬಳಿ ಕೇಂದ್ರಸ್ಥಾನದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಿ ಹೋಬಳಿಯ ಎಲ್ಲಾ ರೈತರಿಗೆ ಮಾಹಿತಿ ನೀಡಲಾಗುವುದು.  ರೈತರ ಆರ್ಥಿಕ ಆರೋಗ್ಯ ಹೆಚ್ಚಿನ ಪ್ರಮಾಣದಲ್ಲಿ ಸುಧಾರಣೆಯಾಗಬೇಕಾದಲ್ಲಿ ಇಲಾಖೆ ಯೋಜನೆಗಳನ್ನು ಹಂಗಾಮು ಮತ್ತು ಅವಶ್ಯಕತೆಗನುವಾಗಿ ಅಳವಡಿಸಿಕೊಳ್ಳಬೇಕು ಎಂದರು. ಉಪ ಕೃಷಿ ನಿರ್ದೇಶಕ ವೀರೇಶ್ ಹುನಗುಂದ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top