PLEASE LOGIN TO KANNADANET.COM FOR REGULAR NEWS-UPDATES

  ಬಳ್ಳಾರಿ, ಜೂ. ೨೬: ಕನ್ನಡ ರಂಗಭೂಮಿ ಹಾಗೂ ಬೀದಿ ನಾಟಕಗಳಿಗೆ ಅಪಾರ ಕೊಡುಗೆ ನೀಡಿದ ಪ್ರಸಿದ್ಧ ರಂಗಕರ್ಮಿ ಸಿಜಿಕೆ ಅವರ ಹುಟ್ಟುಹಬ್ಬವನ್ನು  ಜೂ. ೨೭ ರಂದು ಶನಿವಾರ ನಗರದಲ್ಲಿ 'ಸಿಜಿಕೆ ಬೀದಿ ರಂಗ ದಿನ' ವನ್ನಾಗಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.
      ನಗರದ ಸಂಸ್ಕೃತಿ ಪ್ರಕಾಶನ, ಚಿಗುರು ಕಲಾ ತಂಡ ಹಾಗೂ ಬೆಂಗಳೂರಿನ ಸಂಸ ಥಿಯೇಟರ್, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಬೆಳಿಗ್ಗೆ ೧೦-೩೦ ಗಂಟೆಗೆ ಇಲ್ಲಿನ ರಾಘವ ಕಲಾ ಮಂದಿರದ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಜಾನಪದ,  ಬೀದಿ ರಂಗ ಗೀತೆ, ಕ್ರಾಂತಿ ಹಾಗೂ ವೈಚಾರಿಕ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು.
     ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ರಂಗಕರ್ಮಿ ಹೊಸಪೇಟೆ ಭಾವೈಕ್ಯ ವೇದಿಕೆಯ ಪಿ. ಅಬುಲ್ಲಾ ಅವರಿಗೆ 'ಸಿಜಿಕೆ ರಂಗ ಪುರಸ್ಕಾರ' ನೀಡಿ ಗೌರವಿಸಲಾಗುವುದು ಎಂದು ಪತ್ರಕರ್ತ, ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ್ ತಿಳಿಸಿದ್ದಾರೆ.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವ ಮೆಮೊರಿಯಲ್ ಅಸೋಷಿಯೇಷನ್ ಅಧ್ಯಕ್ಷ ಬಿ. ಸಿದ್ಧನಗೌಡ ಅವರು ವಹಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಳೇ ದರೋಜಿಯ ಅಶ್ವ ರಾಮಣ್ಣ, ಮಯೂರ ಕಲಾ ಸಂಘದ ಕಾರ್ಯದರ್ಶಿ ಬಿ. ಗಂಗಣ್ಣ, ಅಧ್ಯಾಪಕಿ ಶ್ರೀಮತಿ ಈರಮ್ಮ ಮತ್ತು ಜಾನಪದ ಯುವ ಗಾಯಕ ಎಸ್ ಎಂ ಹುಲುಗಪ್ಪ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
  ಸಿಜಿಕೆ ನೆನಪಿನಲ್ಲಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಇಡೀ ದಿನ ವಿಚಾರ ಸಂಕಿರಣ, ಸಿಜಿಕೆ ರಂಗ ಹುಡುಕಾಟ, ಬೀದಿ ನಾಟಕ, ಸಿಜಿಕೆ ರಂಗ ಪುರಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.

Advertisement

0 comments:

Post a Comment

 
Top