ಕೊಪ್ಪಳ, ೨೩- ಶಿಕ್ಷಣ ಇಲಾಖೆಯು ಅನುದಾನ ನೀಡುವಲ್ಲಿ ತಾರತಮ್ಯ ಎಸಗಿದ್ದು, ಹಿಂದುಳಿದ ಹೈ.ಕ.ಭಾಗಕ್ಕೆ ನಯಾ ಪೈಸೆಯನ್ನೂ ನೀಡದೇ ನಿರ್ಲಕ್ಷ್ಯ ವಹಿಸಿರುವುದು ಈ ಭಾಗದ ಹೋರಾಟಗಾರರನ್ನು ತೀವ್ರ ಕೆರಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಹೈ.ಕ.ಹೋರಾಟ ಸಮಿತಿ ಜಿಲ್ಲಾ ಯುವ ಘಟಕವು, ಶಿಕ್ಷಣ ಇಲಾಖೆಯ ಸಚಿವರು ಕೇವಲ ಮೈಸೂರು ಭಾಗಕ್ಕೆ ಸುಮಾರು ಮೂರುವರೆ ಕೋಟಿ, ಹರಿಹರ ಕ್ಷೇತ್ರದ ಶಾಲೆಗೆ ಎರಡು ಕೋಟಿ, ಉನ್ನತ ಶಿಕ್ಷಣ ಸಚಿವ ದೇಶಪಾಂಡೆಯವರ ಕ್ಷೇತ್ರಕ್ಕೆ ಅನುದಾನ ನೀಡುವ ಮೂಲಕ ಅವರನ್ನು ಮಾತ್ರ ಮೆಚ್ಚಿಸುವ ಮೂಲಕ ಸಚಿವರು ಮತ್ತು ಅಧಿಕಾರಿಗಳು ಹಿಂದುಳಿದ ಹೈ. ಕ. ಪ್ರದೇಶಕ್ಕೆ ಅನ್ಯಾಯ ಮಾಡಿದ್ದರೂ ಈ ಭಾಗದ ಜನಪ್ರತಿನಿಧಿಗಳು ಪ್ರಶ್ನಿಸದೇ ಇರುವುದು ಅವರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಶಿಕ್ಷಣ ಇಲಾಖೆಯು ಈ ರೀತಿ ಅನ್ಯಾಯ ಮಾಡಿದ್ದರೂ ನಮ್ಮ ಭಾಗದ ಸಚಿವರು, ಶಾಸಕರು ಪ್ರಶ್ನಿಸದೇ ಇರುವುದು ಈ ಭಾಗದ ಪ್ರತ್ಯೇಕ ರಾಜ್ಯದ ಕೂಗಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗುತ್ತದೆ.
ಪ್ರತ್ಯೇಕ ರಾಜ್ಯ ಬೇಡಿಕೆ ಎಂದಾಗ ಉತ್ತರಿಸುವ ಸಚಿವ ಶಿವರಾಜ ತಂಗಡಗಿ ಇವರು ಪ್ರತ್ಯೇಕ ರಾಜ್ಯ ಬೇಡ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಹೇಳುವ ಇವರು ಶಿಕ್ಷಣ ಇಲಾಖೆ ಅನುದಾನ ತರುವಲ್ಲಿ ವಿಫಲರಾಗಿರುವುದು ಸಚಿವರ, ಶಾಸಕರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಆದ್ದರಿಂದ ಸಚಿವರು ಮತ್ತು ಶಾಸಕರು ಈ ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅನುದಾನದಲ್ಲಿ ಆಗಿರುವ ತಾರತಮ್ಯವನ್ನು ಹೋಗಲಾಡಿಸಿ ಶಿಕ್ಷಣದ ಅಭಿವೃದ್ದಿಗೆ ಮುಂದಾಗಬೇಕು. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ಹೈ.ಕ.ಹೋರಾಟ ಸಮಿತಿ ವತಿಯಿಂದ ಜಿಲ್ಲಾದ್ಯಂತ ವಿದ್ಯಾರ್ಥಿ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೈ.ಕ. ಹೋರಾಟ ಸಮಿತಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಮೇಶ ತುಪ್ಪದ, ಜಿಲ್ಲಾ ಸಂಚಾಲಕರಾದ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ತಾಲೂಕಾಧ್ಯಕ್ಷ ಮಂಜುನಾಥ ಅಂಗಡಿ, ಕಾರ್ಯದರ್ಶಿ ಹುಲಗಪ್ಪ ಕಟ್ಟಿಮನಿ ಹಾಗೂ ಇತರರು ತಿಳಿಸಿದ್ದಾರೆ.
0 comments:
Post a Comment