ಹೊಸಪೇಟೆ: ಕಾನೂನುಗಳಿಂದ ತಡೆಯಲಾಗದ ದೌರ್ಜನ್ಯವನ್ನು ಶಿಕ್ಷಣ ಕೊಡುವ ಧೈರ್ಯ, ಸ್ವಾಭಿಮಾನ, ಆತ್ಮಗೌರವದಂತಹ ಮೌಲ್ಯಗಳಿಂದ, ಕೌಶಲ್ಯಗಳ ಅಭಿವೃದ್ಧಿಯಿಂದ ತಡೆಯಬಹುದಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಸದಸ್ಯೆ ಸಾಧನಾ ತಂತ್ರಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಮಹಿಳಾ ಅಧ್ಯಯನ ವಿಭಾಗವು ಯುಜಿಸಿ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ: ಸಮಸ್ಯೆ ಹಾಗೂ ಸವಾಲುಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ, ಕುಟುಂಬಗಳಲ್ಲಿ, ಸಮಾಜದಲ್ಲಿ ದಿನನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇರುತ್ತಾರೆ. ಇಂತಹ ದೌರ್ಜನ್ಯಗಳನ್ನು ಎದುರಿಸಲು ಮಹಿಳೆಯರಲ್ಲಿ ಬೌದ್ಧಿಕ ಬೆಳವಣಿಗೆ ಅಗತ್ಯವಾಗಿದೆ ಎಂದರು. ರಾಜಕೀಯ ಸವಲತ್ತುಗಳನ್ನು ಮಹಿಳೆಯರು ಸಂಪೂರ್ಣವಾಗಿ ಹೊಂದಲು ಅವರು ಮಾನಸಿಕವಾಗಿ, ಬೌದ್ಧಿಕವಾಗಿ ಇನ್ನೂ ಸಿದ್ಧಗೊಂಡಿಲ್ಲವಾದ್ದರಿಂದ ಪತಿ, ಸಹೋದರ, ತಂದೆ ಅಧಿಕಾರ ನಡೆಸುವಂತಾಗಿದೆ ಎಂದು ವಿಷಾದಿಸಿದರು. ಆದ್ದರಿಂದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಸಬಲೀಕರಣದ ಅಗತ್ಯ ಇದೆ ಎಂದರು. ಸಾರ್ವಜನಿಕ, ಕೌಟುಂಬಿಕ, ಸಾಮಾಜಿಕ ನೆಲೆಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ತಡೆ ಹಾಕಬೇಕಾದವರು ಮಹಿಳೆಯರೆ. ಆದರೆ ದೌರ್ಜನ್ಯಕ್ಕೆ ಒಳಗಾಗುತ್ತಿರುವವರೂ ಮಹಿಳೆಯರೆ. ಮಹಿಳೆಯರನ್ನು ವ್ಯಕ್ತಿಯಾಗಿ ನೋಡಲು, ಗೌರವಿಸಲು ಮುಂದಾಗಬೇಕೆಂದರು. ಸುಲಭವಾಗಿ ಕಾನೂನಿನ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಇರುವ ಅವಕಾಶಗಳು, ಬೀರುವ ಪ್ರಭಾವಗಳು ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತವೆ. ದೃಶ್ಯ ಮಾಧ್ಯಮಗಳು (ಸಿನಿಮಾಗಳು, ಟಿ.ವಿ. ಮಾಧ್ಯಮಗಳು) ಅಪರಾಧಗಳನ್ನು ವೈಭವೀಕರಿಸುವುದರಿಂದ ನೈತಿಕವಾದ ಮೌಲ್ಯಗಳು ಕುಸಿಯುತ್ತಿವೆ. ಮನುಷ್ಯನಲ್ಲಿ ಸೂಕ್ಷ್ಮ ಸಂವೇದನಾಶೀಲತೆ ಕಡಿಮೆ ಆಗುತ್ತಿದೆ. ಇಂತಹ ಪರಿಸರದಲ್ಲಿ ಮನುಷ್ಯನಿಂದ ಮನುಷ್ಯನನ್ನು ರಕ್ಷಿಸಿಕೊಳ್ಳಬೇಕಾದ ಶೋಚನೀಯ ಪರಿಸ್ಥಿತಿ ಇಂದು ನಮ್ಮಲ್ಲಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಡಾ. ವಿಜಯ ಪೂಣಚ್ಚ ತಂಬಂಡ ಮಾತನಾಡಿ, ದೌರ್ಜನ್ಯ ಇತಿಹಾಸದಿಂದಲೂ ಇದೆ. ಆದರೆ ಅದರ ಸ್ವರೂಪ ಬೇರೆ ಬೇರೆಯಾಗಿದೆ ಎನ್ನುತ್ತ ಮನುಷ್ಯರು ನೈತಿಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಶೋಭಾದೇವಿ ಎಂ.ಜಿ. ಸ್ವಾಗತಿಸಿದರು. ಶ್ರೀಮತಿ ವಿನೋದ ಬಂಡಿ ನಿರೂಪಿಸಿದರು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ವಿರಕ್ತಮಠ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವಿದ್ವಾಂಸರಾದ ಡಾ. ಪ್ರೀತಿ ಶುಭಚಂದ್ರ, ಡಾ. ರತಿರಾವ್, ಡಾ. ಶೈಲಜಾ ಹಿರೇಮಠ, ಡಾ. ನಾಗವೇಣಿ ಹೆಚ್., ಡಾ. ಹೇಮಲತ ಹೆಚ್.ಎಂ., ಡಾ. ಎಂ. ಉಷಾ, ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಹಾಜರಿದ್ದರು.
0 comments:
Post a Comment