PLEASE LOGIN TO KANNADANET.COM FOR REGULAR NEWS-UPDATES


ಬಳ್ಳಾರಿ, ಏ. ೨೯:  ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಪತ್ರಕರ್ತ, ಪ್ರಕಾಶಕ ಸಿ. ಮಂಜುನಾಥ್ ಅವರು ಪ್ರಸಕ್ತ ಸಾಲಿನ ಪ್ರಜ್ಞಾ ಪುರಸ್ಕಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ಧಾರವಾಡದ ಬುದ್ಧಿಸ್ಟ್ ಪಾಲಿ ಶಿಕ್ಷಣ ಹಾಗೂ ಸಂಶೋಧನಾ ಟ್ರಸ್ಟ್ ಪ್ರತಿವರ್ಷ ವಿವಿಧ ರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಜ್ಞಾ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದು, ಈ ಬಾರಿಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯಿಂದ ಮಂಜುನಾಥ್ ಅವರನ್ನು ಆಯ್ಕೆ ಮಾಡಿದೆ.
ಧಾರವಾಡದಲ್ಲಿ ಮೇ ೪ ರಂದು ಸೋಮವಾರ ಆಯೋಜಿಸಿರುವ ಭಗವಾನ್ ಗೌತಮ ಬುದ್ಧರ ೨೫೫೯ ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ರವಿತಿಪಾಲಿವಿಜ್ಞಾಮುನಿಯೋ ಅವರು ತಿಳಿಸಿದ್ದಾರೆ.

ಪರಿಚಯ: ಕಳೆದ ೨೦ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ  ಸಂಘಟಕರಾಗಿಯೂ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಮಂಜುನಾಥ್ ವಿದ್ಯಾರ್ಥಿ ದೆಸೆಯಲ್ಲೇ ಯುವ ಸಂಘಟನೆಗಳ ಮೂಲಕ ಕ್ರಿಯಾಶೀಲರಾಗಿದ್ದರು. 
೨೦೦೪ರಲ್ಲಿ ಸಾಮಾಜಿಕ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಮತ್ತಿತರ ಚಟುವಟಿಕೆಗಳಿಗಾಗಿ ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ಆರಂಭಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ.
ಜತೆಗೆ ಸಂಸ್ಕೃತಿ ಪ್ರಕಾಶನ ಹುಟ್ಟುಹಾಕಿ ಜಿಲ್ಲೆ ಸೇರಿದಂತೆ ನಾಡಿನ  ಉದಯೋನ್ಮುಖ, ವೈಚಾರಿಕ, ಪ್ರಗತಿಪರರ ಬರಹಗಳನ್ನು ಪ್ರಕಟಿಸುವುದರ ಮೂಲಕ ಗಮನಸೆಳೆದಿದ್ದಾರೆ. 
ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಭಾರತೀಯ ಬೌದ್ಧ ಮಹಾಸಭಾ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಂಜುನಾಥ್ ಜನಮನ ಗೆದ್ದಿದ್ದಾರೆ.

ಸೆನೆಟ್ ಸದಸ್ಯ: ೧೯೯೫ರಿಂದ ೯೮ ರವರೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಮಂಜುನಾಥ್, ವಿವಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಪೀಠ ಮತ್ತು ಪತ್ರಿಕೋದ್ಯಮ ವಿಭಾಗ ಆರಂಭಗೊಳ್ಳಲು ಶ್ರಮಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರ: ಮಂಜುನಾಥ್ ಅವರ ಜನಮುಖಿ ಕಾರ್ಯಗಳನ್ನು ಗಮನಿಸಿ ೨೦೦೧ ನೇ ಸಾಲಿನಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ ’ಜಿಲ್ಲಾ ಯುವ ಪ್ರಶಸ್ತಿ’,  ೨೦೦೬ ರಲ್ಲಿ ರಾಜ್ಯ ಸರಕಾರದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ’ಜಿಲ್ಲಾ ಯುವ ಪ್ರಶಸ್ತಿ’ ನೀಡಿ ಗೌರವಿಸಿವೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗಮನಿಸಿ ರಾಜ್ಯ ಪತ್ರಕರ್ತರ ವೇದಿಕೆ ರಾಜ್ಯಮಟ್ಟದ ಹೂಗಾರ್ ಸ್ಮಾರಕ ಮಾಧ್ಯಮ ಪ್ರಶಸ್ತಿ ನೀಡಿ ಸತ್ಕರಿಸಿದೆ.
ರಾಜ್ಯ ಮತ್ತು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ರಾಜ್ಯಮಟ್ಟದ ಡಾ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಡಾ. ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ, ಕರ್ನಾಟಕ ಕೀರ್ತಿ ಕಳಸ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿ ಗೌರವಿಸಿವೆ.

ಅಭಿನಂದನೆ: ಪ್ರಜ್ಞಾ ಪುರಸ್ಕಾರ ಗೌರವಕ್ಕೆ ಪಾತ್ರರಾಗಿರುವ ಸಿ. ಮಂಜುನಾಥ್ ಅವರನ್ನು ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಅಭಿನಂದಿಸಿವೆ. ಕರ್ನಾಟಕ ಬಯಲಾಟ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಬೆಳಗಲ್ ವೀರಣ್ಣ, ಬಳ್ಳಾರಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್. ಕುಮಾರಸ್ವಾಮಿ, ಬಳ್ಳಾರಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಹೆಚ್ ದುರುಗಪ್ಪ, ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ, ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಪ್ರಧಾನ ಕಾರ್ಯದರ್ಶಿ ಬಿ. ಸುರೇಶ್‌ಕುಮಾರ್, ಹಂದ್ಯಾಳ್ ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ, ಪತ್ರಿಕಾ ಛಾಯಾಗ್ರಾಹಕ ಹಂದ್ಯಾಳ್ ಪುರುಷೋತ್ತಮ, ಕಪ್ಪಗಲ್ ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ಬಿ. ಚಂದ್ರಶೇಖರ ಆಚಾರ್, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಲಕ್ಕಿ ಪೃಥ್ವಿರಾಜ್, ಮಾಜಿ ಖಜಾಂಚಿ ಟಿ. ರಾಮಾಂಜನೇಯ ಮತ್ತಿತರರು ಅಭಿನಂದಿಸಿದ್ದಾರೆ. 

Advertisement

0 comments:

Post a Comment

 
Top